Advertisement

Udupi: ಹವಾಮಾನ ವೈಪರೀತ್ಯದ ನಡುವೆ ಸಾಂಕ್ರಾಮಿಕ ರೋಗ ಉಲ್ಬಣ; ಜಿಲ್ಲೆಯ ಹಲವೆಡೆ ಶೀತ-ಜ್ವರ!

04:29 PM Sep 04, 2024 | Team Udayavani |

ಉಡುಪಿ: ಹವಾಮಾನ ವೈಪರೀತ್ಯದ ನಡುವೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಭೀತಿಯೂ ಉಲ್ಬಣವಾಗುತ್ತಿದೆ. ಮಳೆಗಾಲದಲ್ಲಿಯೂ 30ರಿಂದ 35 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರುವುದು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.
ಪದೇಪದೇ ಮಳೆ ಸುರಿಯು ತ್ತಿರುವುದು ಹಾಗೂ ಕೆಲವೊಮ್ಮೆ ವಿಪರೀತ ಬಿಸಿಲು ಲಕ್ಷಣಗಳಿಂದ ಜನರು ಹೈರಾಣಾಗುತ್ತಿದ್ದಾರೆ. ಉಷ್ಣಾಂಶದಲ್ಲಿ ಬಹಳಷ್ಟು ಏರುಪೇರಾಗುತ್ತಿರುವ ಕಾರಣ ವಿವಿಧ ರೋಗರುಜಿಗಳಿಗೆ ಕಾರಣ ಎನ್ನಲಾಗುತ್ತಿದೆ.

Advertisement

ವಿವಿಧ ಪ್ರಕಾರದ ಕಾಯಿಲೆ
ಜಿಲ್ಲೆಯಲ್ಲಿ ಕಂಡುಬರುತ್ತಿರುವ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಗುಣಮುಖವಾಗಲು ಕನಿಷ್ಠ ಎಂದರೂ ಒಂದು ವಾರಗಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ ಡೆಂಗ್ಯೂ, ಇಲಿಜ್ವರ, ಎಚ್‌1ಎನ್‌1, ಅರಿಸಾರ ಭೇದಿಯಂತಹ ಲಕ್ಷಣಗಳು ಹೆಚ್ಚಿನವರಲ್ಲಿ ಕಂಡುಬರುತ್ತಿದೆ. ಜಿಲ್ಲಾಸ್ಪತ್ರೆ ಸಹಿತ ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಗುಣಮುಖ ವಿಳಂಬವಾಗುತ್ತಿರುವ ಕಾರಣ ರೋಗಿಗಳು ಆತಂಕಕ್ಕೆ ಈಡಾಗುತ್ತಿರುವ ಘಟನೆಗಳೂ ನಡೆಯುತ್ತಿವೆ.

ಶುಚಿತ್ವ ಕಾಪಾಡಿ
ಎಲ್ಲೆಂದರಲ್ಲಿ ನೀರು ಶೇಖರಣೆಯಾಗುವುದು, ಕೊಳಚೆ ನೀರು ನಿಲ್ಲುವುದು, ಸೊಳ್ಳೆಗಳು ಇರುವ ಸ್ಥಳ, ಕಾಡು, ಪೊದೆಗಳಿಗೆ ಹೋಗುವ ವೇಳೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯಗತ್ಯ. ಎಲ್ಲೆಂದರಲ್ಲಿ ರೋಗಾಣುಗಳು ಹಾಗೂ ಕ್ರಿಮಿಕೀಟಗಳಿರುವ ಕಾರಣ ಇದುವೇ ಸೋಂಕು ಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆಗಳೂ ಹೆಚ್ಚಳವಾಗಿರುತ್ತದೆ. ಕೈ, ಕಾಲು, ತ್ವಚೆಯಲ್ಲಿ ಫ‌ಂಗಲ್‌ ಇನ್‌ಫೆಕ್ಷನ್‌ ರೀತಿ ಕಂಡುಬರುತ್ತಿದ್ದು, ಕೆಲವೊಮ್ಮ ನೋವು ಕೂಡ ಕಂಡುಬರುತ್ತದೆ. ಕೀವುಗಳು ಬಾರದಂತೆ ಎಚ್ಚರ ವಹಿಸುವ ಜತೆಗೆ ನೀರನ್ನು ಸ್ಪರ್ಷಿಸಿದ ಬಳಿಕ ಶುಭ್ರವಾದ ಬಟ್ಟೆಯಿಂದ ಕೈಕಾಲುಗಳನ್ನು ಒರೆಸಿಕೊಳ್ಳುವುದು ಉತ್ತಮ ಲಕ್ಷಣ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನಾ.

ಮಲೇರಿಯಾ ಇಳಿಮುಖ
ಜಿಲ್ಲೆಯಲ್ಲಿ ಮಲೇರಿಯಾ ರೋಗಲಕ್ಷಣಗಳು ಇಳಿಮುಖಕಂಡಿವೆ. ಜನವರಿಯಿಂದ ಇದುವರೆಗೆ ಒಟ್ಟು 6 ಪ್ರಕರಣಗಳಷ್ಟೇ ದಾಖಲಾಗಿವೆ. ಆದರೆ ಉಳಿದ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಕಾರ್ಯಪ್ರವೃತ್ತರಾಗಿದ್ದು, ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಮನೆಮನೆಭೇಟಿ ಸಹಿತ ವಿವಿಧ ರೀತಿಯ ಲಾರ್ವ ಸರ್ವೆಗಳನ್ನು ನಡೆಸಲಾಗುತ್ತಿದೆ. ಕೋವಿಡ್‌ ಪ್ರಕರಣಗಳು ಇಳಿಮುಖ ಕಂಡಿದ್ದು, ಕೇವಲ 4 ಪ್ರಕರಣಗಳು ದಾಖಲಾಗಿವೆ. ಒಟ್ಟಿನಲ್ಲಿ ಜಿಲ್ಲೆಯ ಎಲ್ಲ ಮನೆಮನೆಗಳ ಸದಸ್ಯರಲ್ಲಿಯೂ ಒಂದೊಂದು ಬಗೆಯ ರೋಗಲಕ್ಷಣಗಳು ಕಂಡುಬರುತ್ತಿವೆ.

ಚಿಕಿತ್ಸೆ ಪಡೆಯಿರಿ
ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಪರಿಸರದ ಸ್ವತ್ಛತೆ ಕಾಪಾಡಿಕೊಳ್ಳುವುದು ಸಹಿತ ಸ್ವಯಂ ಜಾಗೃತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಹವಾಮಾನ ವೈಪರಿತ್ಯದಿಂದಲೂ ಕೆಲವು ಮಂದಿಗೆ ರೋಗರುಜಿನಗಳು ಹರಡುವ ಸಾಧ್ಯತೆಗಳಿದ್ದು, ಈ ಬಗ್ಗೆ ಎಚ್ಚರದಿಂದ ಇದ್ದರೆ ಉತ್ತಮ. ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.
-ಡಾ| ಐ.ಪಿ.ಗಡಾದ್‌, ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.