ಉಡುಪಿ: ನಗರದ ವಿವಿಧೆಡೆ ಮಂಗಳವಾರವೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಉಡುಪಿ ಸಿಟಿ ಬಸ್ ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣ, ಮಸೀದಿ ರಸ್ತೆ, ಶಿರಿಬೀಡು ಜಂಕ್ಷನ್, ಕಡಿಯಾಳಿ ಭಾಗದಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಯಿತು.
ಕಳೆದೆರಡು ದಿನಗಳಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರನ್ನು ಹೆಚ್ಚಿನ
ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಆದರೂ ರಜಾದಿನಗಳ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸುತ್ತಿರುವ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರ ಸಮಸ್ಯೆ ಮುಂದುವರಿದಿದೆ.
ಕಡಿಯಾಳಿ- ಎಂಜಿಎಂ-ಮಣಿಪಾಲ ರಾ.ಹೆದ್ದಾರಿ 169ಎಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಆ ರಸ್ತೆಯಲ್ಲಿ ವಾಹನಗಳು ಆಮೆಗತಿಯಲ್ಲಿ ಸಾಗುವಂತಾಗಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ವಾಹನ ಸಂಚಾರ ಸರಿಪಡಿಸಲು ಪೊಲೀಸರು ಪ್ರಯಾಸಪಡುವಂತಾಗಿದೆ. ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪರಿಸರ ವಾಹನಗಳಿಂದ ತುಂಬಿದೆೆ. ನಗರದ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ವಾಹನ ಮತ್ತು ಜನರ ಓಡಾಟಕ್ಕೆ ಅಡಚಣೆ ಆಗುತ್ತಿದೆ. ಒಂದೆಡೆ ರಾಷ್ಟ್ರಪತಿಗಳ ಆಗಮನಕ್ಕೆ ಸಿದ್ಧತೆ, ಇನ್ನೊಂದೆಡೆ ಅತಿಯಾದ ವಾಹನಗಳ ಓಡಾಟದಿಂದಾಗಿ ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ನಗರದ 40 ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.