Advertisement

Udupi: ಜಿಲ್ಲೆಯಲ್ಲಿ ಮಾದಕ ಜಾಲ ವ್ಯಾಪಕ; ವರ್ಷದಲ್ಲಿ  28 ಮಾರಾಟ, 223 ಸೇವನೆ ಪ್ರಕರಣ

03:11 PM Sep 18, 2024 | Team Udayavani |

ಉಡುಪಿ: ಜಿಲ್ಲಾದ್ಯಂತ ಮಾದಕ ವಸ್ತು ಸಾಗಾಟ/ಮಾರಾಟ ಮತ್ತು ಸೇವನೆ ತಡೆಯುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದ ಹಲವು ಪ್ರಯತ್ನಗಳು ನಡೆಯುತ್ತಿದ್ದರೂ ಕಳ್ಳದಾರಿಯಲ್ಲಿ ಸಾಗಾಟ ಮತ್ತು ನಿರ್ಜನ ಪ್ರದೇಶಗಳಲ್ಲಿ ಸೇವನೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಮಾದಕವಸ್ತು ಮಾರಾಟ/ ಸಾಗಾಟಕ್ಕೆ ಸಂಬಂಧಿಸಿದಂತೆ 28 ಪ್ರಕರಣಗಳು, ಸೇವನೆಗೆ ಸಂಬಂಧಿಸಿ 223 ಪ್ರಕರಣ ದಾಖಲಾಗಿದೆ. ಸಾಗಾಟ ಪ್ರಕರಣದಲ್ಲಿ  11 ವಿದ್ಯಾರ್ಥಿಗಳು ಹಾಗೂ ಸೇವನೆ ಪ್ರಕರಣದಲ್ಲಿ 145 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.

ಕಾಲೇಜು ಕ್ಯಾಂಪಸ್‌ಗಳಿಗೆ ಡ್ರಗ್ಸ್‌ ಪೂರೈಕೆ ಮಾಡುವ ವ್ಯವಸ್ಥಿತ ಜಾಲವನ್ನು ಈ ಹಿಂದೆ ಪೊಲೀಸ್‌ ಇಲಾಖೆ ಪತ್ತೆ ಹಚ್ಚಿತ್ತು. ಶಾಲಾ ಕಾಲೇಜು ಆವರಣದಲ್ಲಿ ಧೂಮಪಾನ, ಮದ್ಯಪಾನ ಮಾರಾಟ, ಸೇವನೆ ನಿಷೇಧವಿದ್ದರೂ ಈ ಜಾಲ ಸಕ್ರಿಯವಾಗಿರುವುದು ಸ್ಪಷ್ಟವಾಗಿದೆ.

ವಿವಿಧೆಡೆ ಅರಿವು, ಜಾಗೃತಿ
ಶಾಲಾ ಕಾಲೇಜು, ಕಾರ್ಖಾನೆಗಳು, ಫ್ಯಾಕ್ಟರಿ, ಅರ್ಪಾಟ್‌ಮೆಂಟ್‌ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಡ್ರಗ್ಸ್‌ನ ದುಷ್ಪರಿಣಾಮಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ  ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಆದರೂ ಇದು ಪರಿಣಾಮ ಬೀರುತ್ತಿಲ್ಲ ಎಂಬ ದೂರು ಇದೆ.

ಇತ್ತೀಚಿಗೆ ಸ್ಥಳೀಯ, ಹೊರ ಜಿಲ್ಲೆ, ಹೊರ ರಾಜ್ಯದ ವಿದ್ಯಾರ್ಥಿಗಳು ಡ್ರಗ್ಸ್‌ ಸೇವನೆ ಮತ್ತು ಮಾರಾಟ ಜಾಲದಲ್ಲಿ ಕಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ತಜ್ಞರ ಮೂಲಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕ ಪೋಷಕರಿಗೆ ಪತ್ಯೇಕವಾಗಿ ಮತ್ತು ಒಟ್ಟಿಗೆ ಕೂರಿಸಿ ಕೌನ್ಸೆಲಿಂಗ್‌ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿಯೂ ಈ ರೀತಿಯ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯುತ್ತಿದೆ.

Advertisement

ಸಾರ್ವಜನಿಕರು ಮಾಹಿತಿ ನೀಡಿ
ವಿದ್ಯಾರ್ಥಿಗಳಿಗೆ ಅನ್ಯ ರಾಜ್ಯದಿಂದ ಬಂದು ಅಪಾರ್ಟ್‌ಮೆಂಟ್‌ಗಳಲ್ಲಿ ವಿವಿಧ ಕೆಲಸ ನಿರ್ವಹಿಸಿಕೊಂಡಿರುವ ಸಿಬಂದಿ ಮೂಲಕ ಬೇಕು ಬೇಡಗಳ ಬಗ್ಗೆ ತಿಳಿದುಕೊಂಡು ಅದರಂತೆ ಪೂರೈಕೆ ನಡೆಯುವ ಸಾಧ್ಯತೆಗಳಿರುತ್ತವೆ. ರೈಲು ಮಾರ್ಗದ ಮೂಲಕವೂ ಇದರ ಪೂರೈಕೆ ನಡೆಯುತ್ತಿದ್ದು, ಈ ಬಗ್ಗೆ ಲಭ್ಯ ಮಾಹಿತಿ ಸಿಕ್ಕರೆ ಸಾರ್ವಜನಿಕರು ಸ್ಥಳೀಯ ಠಾಣೆಗೆ ಮಾಹಿತಿ ನೀಡಬಹುದು.
-ಟಿ.ಸಿದ್ದಲಿಂಗಪ್ಪ, ಹೆಚ್ಚುವರಿ ಎಸ್‌ಪಿ

ಅನಾಮಿಕ ಪಾರ್ಸೆಲ್‌ಗ‌ಳ ಮೇಲೆ ನಿಗಾ
ಪೊಲೀಸ್‌ ಇಲಾಖೆಯಿಂದ ಡ್ರಗ್ಸ್‌ ತಡೆಗೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂಚೆ ಕಚೇರಿ, ಕೊರಿಯರ್‌ ಸೆಂಟರ್‌, ರೈಲ್ವೇ ನಿಲ್ದಾಣಗಳಲ್ಲಿ ಬರುವ ಅನಾಮಿಕ ಪಾರ್ಸೆಲ್‌ಗ‌ಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತಿದೆ. ಅಂಚೆ ಇಲಾಖೆ, ಕೊರಿಯರ್‌ ಸೆಂಟರ್‌ಗಳಿಂದ ನಿರಂತರ ಮಾಹಿತಿಯನ್ನು ಇಲಾಖೆಯಿಂದ ಪಡೆಯಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಟ್ರ್ಯಾಕಿಂಗ್‌ ಸಮಸ್ಯೆ:ಪ್ರಕರಣಗಳಲ್ಲಿ ದಸ್ತಗಿರಿ ಆಗಿರುವ ಆರೋಪಿಗಳನ್ನು ವಿಚಾರಿಸಿ, ಸರಬರಾಜಿನ ಮೂಲ ಪತ್ತೆ ಪೊಲೀಸ್‌ ಇಲಾಖೆ ಪ್ರಯತ್ನಿಸಿದರೂ ಪೂರ್ಣ ಪ್ರಮಾಣದಲ್ಲಿ ಈವರೆಗೂ ಯಶ ಕಂಡಿಲ್ಲ. ಬಿಡುಗಡೆಗೊಂಡವರ ಚಲನವಲನದ ಬಗ್ಗೆ ನಿಗಾ ಇರಿಸಿದರೂ ಫ‌ಲ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next