ಉಡುಪಿ: ಜಿಲ್ಲೆಯಲ್ಲಿ ಜೂ. 14ರ ಬಳಿಕ ಲಾಕ್‌ಡೌನ್ ಅಲ್ಪ ತೆರವಾಗುವ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಈಗ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 9ಕ್ಕಿಂತ ಕಡಿಮೆ ಇದೆ. ಸಿಎಂ ಬಿಎಸ್‌ವೈ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆ ಗಳ ಡಿ.ಸಿ.ಗಳ ಜತೆಗೆ ಗುರುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದರಾದರೂ ಉಡುಪಿ ಡಿ.ಸಿ.ಗೆ ಆಹ್ವಾನ ಇರಲಿಲ್ಲ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಕಾರಣ ಎನ್ನಲಾಗಿದೆ.
ಪ್ರಸ್ತುತ ದಿನಸಿ, ತರಕಾರಿ ಅಂಗಡಿಗಳನ್ನು ಬೆಳಗ್ಗೆ 6ರಿಂದ 10ರ ವರೆಗೆ ತೆರೆಯಲು ಅನುಮತಿ ಇದೆ. ಜೂ. 14ರ ಬಳಿಕ ಇದು ವಿಸ್ತರಣೆಯಾಗಬಹುದು; ಇತರ ಕೆಲವು ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ.
50ಕ್ಕೂ ಹೆಚ್ಚು ಪ್ರಕರಣ ಇರುವ ಗ್ರಾ.ಪಂ.ಗಳನ್ನು ಪೂರ್ಣ ಲಾಕ್‌ಡೌನ್ ಮಾಡಿದ್ದರಿಂದ ಉತ್ತಮ ಫಲಿತಾಂಶ ದೊರಕಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪಾಸಿಟಿವ್ ಇದ್ದವರ ಮನೆಗಳನ್ನು ಸೀಲ್ ಡೌನ್ ಮಾಡಿದ್ದರಿಂದ ಸಂಪರ್ಕ ಕಡಿತವಾದದ್ದು ಸೋಂಕು ಹರಡುವುದಕ್ಕೆ ತಡೆಯೊಡ್ಡಿದಂತಾಗಿದೆ.
ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಗ್ರಾ.ಪಂ. ಸಂಪೂರ್ಣ ಲಾಕ್‌ಡೌನ್ ಉತ್ತಮ ಫಲಿತಾಂಶ ನೀಡಿದೆ.
– ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ