Advertisement

ಲಾಕ್‌ಡೌನ್‌: ಹಸಿದವರ ಹೊಟ್ಟೆ ಹಸಿವು ತಣಿಸುವ ಉಡುಪಿ ಜಿಲ್ಲಾ ತಂಡ

08:01 PM Mar 28, 2020 | Sriram |

ಕಟಪಾಡಿ: ಕೋವಿಡ್‌ 19 ವೈರಸ್‌ ವ್ಯಾಪಕವಾಗಿ ಹರಡದಂತೆ ಕರೆಯಲಾದ ಭಾರತ ಲಾಕೌಡೌನ್‌ನಿಂದಾಗಿ ಹಸಿದವರ ಹೊಟ್ಟೆ ಹಸಿವು ತಣಿಸುವ ಸೇವೆಯು ಕಟಪಾಡಿಯ ತಂಡವೊಂದರಿಂದ ಸದ್ದಿಲ್ಲದೆ ಸಾಗುತ್ತಿದೆ.

Advertisement

ಕಳೆದ ಎರಡು ಮೂರು ದಿನಗಳಿಂದಲೂ ಜಿಲ್ಲಾ ಪಂಚಾಯತ್‌ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ ಅವರು ಅಡುಗೆಯನ್ನು ಸಿದ್ಧಪಡಿಸಿ ದಿನವೊಂದರ ಸುಮಾರು 140 ಹಸಿದವರ ಹೊಟ್ಟೆಯನ್ನು ತಣಿಸುವ ಕೆಲಸ ಮಾಡುತ್ತಿದ್ದಾರೆ.

ಉಡುಪಿ, ಮಣಿಪಾಲದಾದ್ಯಂತ ಸುಮಾರು 80ರಿಂದ 100ರಷ್ಟು ಅನ್ನ ಸಾಂಬಾರ್‌ ಪೊಟ್ಟಣವು ಅಸಹಾಯಕರಾಗಿರುವ ಹಸಿದವರನ್ನು ಗುರುತಿಸಿ ನೀಡಲಾಗುತ್ತಿದೆ. ಇದರೊಂದಿಗೆ ಒಂದು ಬಾಟಲಿ ಕುಡಿಯುವ ನೀರು ಕೂಡಾ ವಿತರಿಸಲಾಗುತ್ತಿದೆ.

ಕಟಪಾಡಿ ಫಾರೆಸ್ಟ್‌ ಗೇಟ್‌ ಬಳಿಯ ಬಸ್‌ ತಂಗುದಾಣವೊಂದರಲ್ಲಿ ಗೋವಾದಿಂದ ಬಂದಿದ್ದು, ಕೇರಳದತ್ತ ತೆರಳುವವ ಎಂದು ಹೇಳುವ ಮಾನಸಿಕ ಅಸ್ವಸ್ಥನೋರ್ವ ಇರುವುದನ್ನು ಕಂಡು ಬಂದ ಫೋನ್‌ ಕರೆಯನ್ನಾಧರಿಸಿ ಈ ತಂಡವು ಸ್ಥಳಕ್ಕಾಗಮಿಸಿ ಆತನಿಗೂ ಅನ್ನದ
ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲಿಯನ್ನು ನೀಡಿತು.

ಉಡುಪಿ
ಹಸಿವಿನಿಂದ ಬಳಲುತ್ತಿರುವ ನಿರಾಶ್ರಿತರಿಗೆ ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ನಿತ್ಯವೂ ಅನ್ನದಾನ ಮಾಡುತ್ತಿದ್ದಾರೆ. ಅವರು ಉಚಿತವಾಗಿ ಮಧ್ಯಾಹ್ನದ ಹೊತ್ತು ಬಿಸಿ ಊಟದ ಪ್ಯಾಕ್‌ನ್ನು ಹಸಿದವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಿಸುತ್ತಿದ್ದಾರೆ. ನಿತ್ಯವೂ 80ರಷ್ಟು ಬಿಸಿ ಊಟ ಪೊಟ್ಟಣದ ವಿತರಣೆ ಅವರಿಂದ ನಡೆಯುತ್ತಿದೆ.

Advertisement

ಉದ್ಯಾವರ (ಕಟಪಾಡಿ): ಉಡುಪಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು ಇವರ ನೇತƒತ್ವದಲ್ಲಿ ಉದ್ಯಾವರ ಜಿ. ಪಂ.ವ್ಯಾಪ್ತಿಯಲ್ಲಿ ಆಶ್ರಯ ರಹಿತರಿಗೆ, ಕೂಲಿ ಕಾರ್ಮಿಕರಿಗೆ ಊಟವನ್ನು ತಯಾರಿಸಿ ವಿತರಿಸಿದರು.

ಬೆಳ್ಮಣ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳು ವಾಯಿಂದ ಬಾಗಲಕೋಟೆಗೆ ಹೊರಟಿರುವ ಕೂಲಿ ಕಾರ್ಮಿಕರಿಗೆ ಬೆಳ್ಮಣ್‌ನಲ್ಲಿ ಪೊಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಊಟದ ವ್ಯವಸ್ಥೆಯನ್ನು ಮಾಡಿ ಮತ್ತೆ ಬೆಳುವಾಯಿಗೆ ಕಳುಹಿಸಿಕೊಟ್ಟ ಘಟನೆ ಶನಿವಾರ ನಡೆದಿದೆ.
ಬೆಳ್ಮಣ್‌ ಜೇಸಿಐ ಅಧ್ಯಕ್ಷ ಸತ್ಯನಾರಾಯಣ ಭಟ್‌ ರವರು ತಮ್ಮ ಮನೆಯಲ್ಲಿ 40 ಮಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದರು. ಹರಿಪ್ರಸಾದ್‌ ನಂದಳಿಕೆ, ಸರ್ವಜ್ಞ ತಂತ್ರಿ, ಅನಿತಾ ಡಿ’ಸೋಜಾ ಸಹಕರಿಸಿದ್ದರು.

ಬೆಳುವಾಯಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಮೂಡಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಅವರಿಗೆ ವಿಷಯ ತಿಳಿಸಲಾಗಿ ಸಂತ್ರಸ್ತರಿಗೆ ಬೆಳುವಾಯಿಯಲ್ಲಿ ಉಳಿದುಕೊಳ್ಳಲು ಹಾಗೂ ಊಟದ ವ್ಯವಸ್ಥೆಗೂ ಅವರು ಸಹಕರಿಸಿದರು.

ಭಾರತ ಲಾಕ್‌ಔಟ್‌ನಿಂದಾಗಿ ಹೊರಜಿಲ್ಲಾ ಕಾರ್ಮಿಕರು, ದಾರಿಹೋಕರು, ಕೆಲವು ಭಿಕ್ಷಕರು, ಮಾನಸಿಕ ಅಸ್ವಸ್ಥರು ಉಣ್ಣಲು ಊಟ ಇಲ್ಲದೆ ಹಸಿವಿನಿಂದ ಕಂಗಾಲಾಗಬಾರದು ಎಂಬ ದೃಷ್ಟಿಯಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ಪುಣ್ಯದ ಕೆಲಸ ಎಂದು ಭಾವಿಸಿ ಸೇವೆಯನ್ನು ಮುನ್ನಡೆಸುತ್ತಿದ್ದು, ಇಚ್ಛಿತರು ಅಕ್ಕಿ, ಬೇಳೆ, ಧವಸ ಧಾನ್ಯವನ್ನು ನೀಡಿ ಈ ಸೇವೆಯನ್ನು ನಿರಂತರಗೊಳಿಸಲು ಸಹಕರಿಸಬಹುದು ಎಂದು ಗೀತಾಂಜಲಿ ಎಂ. ಸುವರ್ಣ(9901035715) ಉದಯವಾಣಿ ಗೆ ಪ್ರತಿಕ್ರಿಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next