Advertisement

ಸಮಾಜದ ವಿನ್ಯಾಸಕ್ಕೆ ತಕ್ಕಂತೆ ಸಾಹಿತ್ಯ ಪರಿಕಲ್ಪನೆ

04:11 AM Jan 14, 2019 | |

ಮುಂಡ್ಕೂರು/ಉಡುಪಿ: ಸಮಾಜದ ವಿನ್ಯಾಸ ಬದಲಾದ ಮೇಲೆಯೂ ಅದೇ ಪರಿಕಲ್ಪನೆಗಳನ್ನು ಬಳಸಿದರೆ ಸಾಹಿತ್ಯ ಕೃತಿಗಳು ಪ್ರಸ್ತುತವಾಗುವುದಿಲ್ಲ. ಸಾಹಿತಿ ಸತ್ಯದ ಸ್ವರೂಪ ವನ್ನು ಗ್ರಹಿಸಲು ವಿಫ‌ಲವಾದಾಗ ಹೀಗಾಗುತ್ತದೆ. ಸಮಾಜದಲ್ಲಿ ಆದ ಬದಲಾವಣೆಗೆ ತಕ್ಕಂತೆ ಸಾಹಿತ್ಯ ಸೃಷ್ಟಿ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಡಾ| ಬಿ. ಜನಾರ್ದನ ಭಟ್‌ ಆಶಯ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮುಂಡ್ಕೂರು ದುರ್ಗಾಪರಮೇಶ್ವರೀ ದೇವಸ್ಥಾನದ ನಾನಾ ಪಾಟೇಕರ್‌ ಸಭಾಂಗಣದಲ್ಲಿ ಏರ್ಪಡಿಸಿದ ಎರಡು ದಿನಗಳ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಇದ್ದ ಸಾಂಪ್ರದಾಯಿಕ ಭೂಹಿಡುವಳಿ ದಾರರು, ವಾಣಿಜ್ಯ ವಹಿವಾಟುಗಳ ಮೇಲೆ ಹಿಡಿತ ಹೊಂದಿರುವ ಉದ್ಯಮಿಗಳು, ಪಾರಂಪರಿಕ ಗುರಿಕಾರರು ಮತ್ತು ಆರಾಧನಾ ಸ್ಥಳಗಳ ಆಡಳಿತವರ್ಗದವರನ್ನು ಒಳಗೊಂಡ “ಮಹಾಸಮುದಾಯ’, ಬಡವರು, ಶೋಷಿತರು ಮತ್ತು ನವವಿದ್ಯಾವಂತರ “ಕಿರಿಯ ಸಮುದಾಯ’ಗಳು ನಿಧಾನವಾಗಿ ಕರಗಿ ಈಗ ಆಧುನಿಕ ತಂತ್ರಜ್ಞಾನದಿಂದ ಬೇರೆ ಬಗೆಯ ಸಮುದಾಯಗಳು ಸೃಷ್ಟಿಯಾಗಿವೆ. ಹೊಸ ಸಮುದಾಯಗಳ ಸ್ವರೂಪ ಏನು? ಇವುಗಳಲ್ಲಿ ಶೋಷಕ ಸಮುದಾಯ ಇದೆಯೋ? ಹಿಂದಿನ ಎರಡೂ ಸಮುದಾಯಗಳಿಂದ ಬಿಡುಗಡೆ ಪಡೆದಿದೆಯೋ? ಇವುಗಳನ್ನು ಶೋಧಿಸಿ ಸಾಹಿತ್ಯ ಕೃತಿಗಳು ಹೊಸ ಕಾಲದ ಸತ್ಯ ಮತ್ತು ಕಾಲಧರ್ಮಗಳನ್ನು ದಾಖಲಿಸಬೇಕಾಗಿದೆ ಎಂದು ಡಾ| ಭಟ್‌ ಅಭಿಪ್ರಾಯಪಟ್ಟರು. 

ಸಾಹಿತ್ಯದ ಪ್ರಸ್ತುತತೆ
ಸಾಹಿತ್ಯವು ಸಮಾಜದಲ್ಲಿ ಸದಾಚಾರ ಮತ್ತು ಜನರಲ್ಲಿ ಸದ್ಗುಣಗಳನ್ನು ನೆಲೆಗೊಳಿಸುವುದಕ್ಕಾಗಿ ಇರುವ ಭಾಷಾ ಮಾಧ್ಯಮ. ರಾಮಾಯಣ, ಮಹಾಭಾರತದ ರಚನೆಯ ಹಿಂದೆಯೂ ಇದೇ ಆಶಯವಿತ್ತು. ಸಾಹಿತ್ಯದಲ್ಲಿ ಆದರ್ಶ ಕಥನ ಮತ್ತು ವಾಸ್ತವ ಕಥನ ಎಂಬ ಎರಡು ಪ್ರಮುಖ ಮಾದರಿಗಳಿವೆ. ಸಾಹಿತ್ಯ ಕೃತಿ ಮಾಡಿಸಬೇಕಾದ ಸತ್ಯ ದರ್ಶನ ಅಂದರೆ ಅದರಲ್ಲಿ ಬರುವ ಘಟನೆಗಳ ನಿಜಸ್ವರೂಪದ ಅರಿವನ್ನು ಓದುಗರಲ್ಲಿ ಮೂಡಿಸುವುದನ್ನು ಸಾಹಿತಿ ನಿಷ್ಪಕ್ಷವಾಗಿ ಮಾಡಬೇಕು ಎಂದರು.

ದೇವಸ್ಥಾನದ ಆಡಳಿತ ಮೊಕ್ತೇಸರ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ವಾದಿರಾಜ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಿ, ಕನ್ನಡ- ಆಂಗ್ಲ ಮಾಧ್ಯಮ ಶಾಲೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆ ಹೀಗೆ ಅನೇಕ ವಿಚಾರಗಳ ಬಗೆಗೆ ಸಾಹಿತಿಗಳು ನಿರ್ಣಯ ತಾಳಬೇಕು ಎಂದರು. 

Advertisement

ಪುಸ್ತಕದ ಮಳಿಗೆಯನ್ನು ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಮೆರವಣಿಗೆಯನ್ನು ಮುಂಡ್ಕೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಪಾಂಡುರಂಗ ಪ್ರಭು ಉದ್ಘಾಟಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಮಧ್ವಪತಿ ಆಚಾರ್ಯ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ ಶುಭ ಕೋರಿದರು. ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿ ಗೌ. ಕಾರ್ಯದರ್ಶಿ ಸುಧಾಕರ ಪೊಸ್ರಾಲು ವಂದಿಸಿದರು.

ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್‌.ಶ್ರೀಧರ ಹಂದೆಯವರಿಗೆ ಭಾಗವತ ನಾರಾಯಣ ಉಪ್ಪೂರು ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ, ಹೆಬ್ರಿ ತಾಲೂಕು ಕಸಾಪ ಅಧ್ಯಕ್ಷ ಆನಂದ ಸಾಲಿಗ್ರಾಮ, ಕಸಾಪ ಮತ್ತು ಸಮ್ಮೇಳನ ಸಮಿತಿ ಪದಾಧಿಕಾರಿಗಳಾದ ಸತ್ಯಶಂಕರ ಶೆಟ್ಟಿ, ಭುವನಾಭಿರಾಮ ಉಡುಪ, ಸೂರಾಲು ನಾರಾಯಣ ಮಡಿ, ಸುಬ್ರಹ್ಮಣ್ಯ ಶೆಟ್ಟಿ, ಡಾ|ಪ್ರಭಾಕರ ಶೆಟ್ಟಿಗಾರ್‌, ಪುಂಡಲೀಕ ಮರಾಠೆ, ಮುಂಡ್ಕೂರು ಪ.ಪೂ. ಕಾಲೇಜು ಪ್ರಾಂಶುಪಾಲ ಸುದರ್ಶನ್‌ ವೈ.ಎಸ್‌., ಗ್ರಾ.ಪಂ. ಅಧ್ಯಕ್ಷ ಶುಭಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ ನಾಯಕ್‌, ರಮ್ಯಾ ಅರುಣ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ಬಂಟ ಭೂತವೂ ಜಾಲತಾಣಗಳೂ…
ಜಾನಪದ ಆಚರಣೆಯಲ್ಲಿ ಮುಖ್ಯಭೂತ ಮಾತನಾಡುತ್ತದೆ. ಬಂಟ ಭೂತ ಮಾತನಾಡುವುದಿಲ್ಲ. “ಮಾತನಾಡಲು ಬಿಟ್ಟರೆ ಅದು ಏನೇನೋ ಮಾತನಾಡುತ್ತದೆ’ ಎಂದು ಪ್ರೊ| ಅಮೃತ ಸೋಮೇಶ್ವರರು ಹೇಳುತ್ತಿದ್ದರು. ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಹೀಗೆಯೇ ಆಗುತ್ತದೆ. ಇಲ್ಲಿ ಯಾರ್ಯಾರೋ ಏನೇನೋ ಮಾತನಾಡುತ್ತಾರೆ. ಸಾಹಿತ್ಯದ ಪ್ರಸಾರಕ್ಕೆ ಸಾಮಾಜಿಕ ಜಾಲತಾಣಗಳ ಸಾಧ್ಯತೆ ಅಪಾರ. ಆದರೆ ಇಲ್ಲಿ ಸಮನ್ವಯಕಾರರ ಕೊರತೆ ಇದೆ. ಎಡಪಂಥ ಮತ್ತು ಬಲಪಂಥ ಎಂಬ ಎರಡು ಬಣಗಳನ್ನು ಅಲ್ಲಿ ಕಾಣಬಹುದು. ಮಧ್ಯಮ ಪಂಥದ ಅಗತ್ಯ ಇದೆ ಎಂದು ಸಮ್ಮೇಳನಾಧ್ಯಕ್ಷರು ಪ್ರತಿಪಾದಿಸಿದರು.  

ಪುಕ್ಕಟೆ ಸಲಹೆ ಬೇಡ
ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದೇವಸ್ಥಾನಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಬೇಡಿ ಎಂದು ಕೆಲವರು ಪುಕ್ಕಟೆ ಸಲಹೆ ನೀಡುತ್ತಿದ್ದರು. ನಾವು ಮಸೀದಿ, ಚರ್ಚ್‌ಗಳಲ್ಲಿಯೂ ಸಮ್ಮೇಳನ ಮಾಡಿದ್ದೇವೆ. ದೇವಸ್ಥಾನಗಳಲ್ಲಿ ಸಮ್ಮೇಳನ ಮಾಡಲು ಕಾರಣ ಊಟದ ಖರ್ಚು, ಸಭಾಂಗಣ, ಧ್ವನಿವರ್ಧಕ ವ್ಯವಸ್ಥೆಗಳಿಗಾಗಿ. ಖರ್ಚಿಗೆ ಹಣ ಕೊಟ್ಟರೆ ಎಲ್ಲೂ ಸಮ್ಮೇಳನ ಮಾಡಬಹುದು. ಹಣ ಕೊಡಿ, ಕೇವಲ ಸಲಹೆ ಕೊಡಬೇಡಿ ಎಂದು ನಾನು ಹೇಳಿದ್ದೆ ಎಂದರು.

ಕರಾವಳಿ ಪ್ರತಿಭೆಗಳಿಗೆ ನಗಣ್ಯ ಸ್ಥಾನ
ಶತಮಾನವನ್ನು ಕಾಣುತ್ತಿರುವ ಹಟ್ಟಿಯಂಗಡಿ ನಾರಾಯಣ ರಾಯರು ಬರೆದ ಕನ್ನಡದ ಮೊದಲನೆಯ ಇಂಗ್ಲಿಷ್‌ ಕವಿತೆಗಳ ಅನುವಾದ ಸಂಕಲನ “ಆಂಗ್ಲ ಕವಿತಾವಳಿ’ಗೆ  ಬಿಎಂಶ್ರೀ ಅವರ “ಇಂಗ್ಲಿಷ್‌ ಗೀತಗಳು’ ಕೃತಿಗೆ ಸಿಕ್ಕಿದಷ್ಟು ಸ್ಥಾನ ಸಿಗಲಿಲ್ಲ. ಇದಕ್ಕೆ ಕರಾವಳಿಯ ಪ್ರತಿಭೆಗಳಿಗೆ ಬೆಂಗಳೂರು ಮಟ್ಟದಲ್ಲಿ ಸಿಗಬೇಕಾದ ಮನ್ನಣೆ ಸಿಗದಿರುವುದು ಕಾರಣ ಎಂದು ಡಾ| ಜನಾರ್ದನ ಭಟ್‌ ಬೆಟ್ಟು  ಮಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next