Advertisement

ಉಡುಪಿ ಜಿಲ್ಲೆ ಮಳೆ ಕೊರತೆ: ಕೂಡಲೇ ಆಗಬೇಕಿದೆ ಜಲಜಾಗೃತಿ

01:15 AM Jul 18, 2019 | Sriram |

ಉಡುಪಿ: ಈವರೆಗೆ ಮಳೆ ಎಂದರೆ ಎಲ್ಲೆಡೆ ಬಾವಿ ಕೆರೆಗಳಲ್ಲಿ ನೀರು ತುಂಬಿ ಜುಲೈ ತಿಂಗಳಾರಂಭದಲ್ಲೇ ನದಿಗಳಲ್ಲಿ ಭರಪೂರ ನೀರು ಹರಿಯುತ್ತಿತ್ತು. ಆದರೆ ಈ ಬಾರಿ ಇದು ಹುಸಿಯಾಗಿದೆ.

Advertisement

ಕಳೆದ ವರ್ಷ, ಜೂನ್‌ ತಿಂಗಳಾ ರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗಿದ್ದರೆ, ಉಕ್ಕಿಹರಿದ ಸ್ವರ್ಣೆ ಈ ವರ್ಷ ಬರಡಾಗಿದ್ದಳು. ಜಿಲ್ಲೆಯಲ್ಲೇ ಅತಿ ಹೆಚ್ಚು ನೀರಿನ ಸಮಸ್ಯೆ ಉಡುಪಿ ನಗರದಲ್ಲಾಗಿದ್ದು 2-3 ತಿಂಗಳು ನೀರಿನ ಅಭಾವವಾಗಿದೆ. ಇಷ್ಟೊಂದು ಸಮಸ್ಯೆ ಉಡುಪಿಯಲ್ಲಿ ಎಂದೂ ಆಗಿರಲಿಲ್ಲ.

ಮಳೆಗಾಲದ ಅನುಭವವೇ ಆಗಿಲ್ಲ!
2018ರಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ವಾಡಿಕೆ ಮಳೆ 4,017 ಮಿ.ಮೀ. ಆಗಿದ್ದು 2016ರಲ್ಲಿ 3,484.6ಮಿ.ಮೀ., 2017ರಲ್ಲಿ 3,734.1 ಮಿ.ಮೀ., 2018ರಲ್ಲಿ 4,095.6 ಮಿ.ಮೀ. ಮಳೆ ಸುರಿದಿತ್ತು. ಇನ್ನು, ಪೂರ್ವ ಮುಂಗಾರು ರಾಜ್ಯದಲ್ಲೇ ಅತಿ ಕಡಿಮೆ ಜಿಲ್ಲೆಯಲ್ಲಾಗಿದೆ. 2019ರ ಜು. 16ರ ವರೆಗೆ 2,064 ಮಿ.ಮೀ. ಮಳೆ ಬರಬೇಕಿತ್ತು. ಆದರೆ ಬಂದಿದ್ದು 1,282.95 ಮಿ.ಮೀ. ಮಾತ್ರ. ಅಂದರೆ ಶೇ. 38 ಮಳೆ ಕೊರತೆಯಾಗಿದೆ. ಹೀಗಾಗಿಯೇ ಜುಲೈ ಮಧ್ಯಭಾಗದಲ್ಲಿ ಇದ್ದರೂ ಅಪ್ಪಟ ಮಳೆಗಾಲದ ಅನುಭವ ಇನ್ನೂ ಉಂಟಾಗಿಲ್ಲ.

ಕೃಷಿಗೂ ಹಿನ್ನಡೆ
ಹಿಂದೆ ವರ್ಷದಲ್ಲಿ ಮೂರು ಭತ್ತದ ಬೆಳೆ ಬೆಳೆಯಲು ತೋಡುಗಳಿಗೆ ಕಟ್ಟಹಾಕುವ ಪದ್ಧತಿ ಇತ್ತು, ನೀರಿನ ಒರತೆ ಇರುತ್ತಿತ್ತು. ರೈತರೇ ಸ್ವಯಂಸ್ಫೂರ್ತಿ ಯಿಂದ ತೋಡುಗಳನ್ನು ಕೃಷಿಗಾಗಿ ಸರಿಪಡಿಸುತ್ತಿದ್ದರು. ಈಗ ಇದೆಲ್ಲ ಸರಕಾರದ ಕೆಲಸ ವಾಗಿದೆ. ಕೃಷಿಕರು ಜೀವನೋಪಾಯಕ್ಕಾಗಿ ಬೇರೆ ಕೆಲಸದತ್ತ ಮುಖ ಮಾಡಿದ್ದಾರೆ. ಕೃಷಿ ಬಸವಳಿದು ನೀರಿನ ಕೊರತೆಯೂ ಕಾಡಿದೆ. ಕೃಷಿಯೂ ಹಿನ್ನಡೆ ಕಂಡಿದೆ.

ನೀರಿಂಗುವಿಕೆ ತಡೆಯುವ ಕಾಂಕ್ರೀಟ್‌
ನಗರ, ಗ್ರಾಮೀಣ ಪ್ರದೇಶಗಳೆಲ್ಲ ಕಾಂಕ್ರೀಟ್‌ಮಯವಾಗಿದೆ. ಅಂಗಳಕ್ಕೂ ಕಾಂಕ್ರೀಟ್‌ ಬಂದಿದೆ. ಇದರಿಂದ ನೀರಿಂಗುವಿಕೆ ಕಡಿಮೆಯಾಗಿದೆ. ಕಾಂಕ್ರೀಟ್‌ ರಸ್ತೆಗಳೊಂದಿಗೆ ಖಾಲಿ ಪ್ರದೇಶಕ್ಕೂ ಕಾಂಕ್ರೀಟ್‌, ಟೈಲ್ಸ್‌ ಇತ್ಯಾದಿ ಹಾಕುವುದರಿಂದ ಭೂಮಿಗೆ ನೀರು ಇಂಗುತ್ತಿಲ್ಲ. ಇದರ ಪರಿಣಾಮ ಅನುಭವಿಸುವಂತಾಗಿದೆ.

Advertisement

ಸಸ್ಯಾರೋಪಣ ಅಗತ್ಯ
ಚಲಿಸುವ ಮೋಡಗಳನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ದಟ್ಟ ಕಾಡುಗಳಿಗೆ ಇರುತ್ತವೆ. ಆದರೆ ಎಲ್ಲೆಡೆ ವೃಕ್ಷ ನಾಶ ಕಂಡುಬರುತ್ತಿದೆ. ಇದರಿಂದ ಭೂಮಿಗೆ ಮಳೆ ಸುರಿಸಲು ಬೇಕಾಗಿ ಇರುವ ಆಕರ್ಷಣ ಶಕ್ತಿ ಕಡಿಮೆಯಾಗಿದೆ. ಮಳೆ ಹೆಚ್ಚು ಬಂದರೆ ತಡೆಯುವ ಧಾರಣ ಶಕ್ತಿಯೂ ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕಾದರೆ ಪ್ರತಿ ಶಾಲಾ ಮಟ್ಟದಲ್ಲಿ ವನಮಹೋತ್ಸವ ಆಚರಣೆ, ಗಿಡನೆಡುವ ಕಾರ್ಯಕ್ರಮಗಳು ಸಮರೋಪಾದಿಯಲ್ಲಿ ಆಗಬೇಕಾಗಿದೆ.

ಅಂತರ್ಜಲ ವೃದ್ಧಿಗೆ ನಿರ್ಣಯ
ನೀರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರು ವುದರಿಂದ ಅಂತರ್ಜಲ ವೃದ್ಧಿಸುವ ಮಳೆನೀರು ಕೊಯ್ಲು ಅಳವಡಿಕೆಗೆ ಈಗ ಸಕಾಲ. ಅಂತರ್ಜಲ ಸಂರಕ್ಷಣ ಕಾಯಿದೆ ಬಳಸಿ ಸ್ಥಳೀಯ ಸಂಸ್ಥೆಗಳು ಮಳೆ ನೀರು ಕೊಯ್ಲು ತಂತಜ್ಞಾನವನ್ನು ಅಳವಡಿಸಲು ಗ್ರಾ.ಪಂ.ಗಳು ನಿರ್ಣಯ ಮಂಡಿಸಿವೆ. ಮನೆ ವಿನ್ಯಾಸ ರೂಪಿಸುವಾಗಲೇ ಮಳೆ ಕೊಯ್ಲಿಗೂ ಗಮನ ನೀಡಬೇಕಿದೆ. ಇದಕ್ಕಾಗಿ ಇತ್ತೀಚೆಗೆ ಜಿಲ್ಲಾಧಿಕಾರಿಯವರು ಮಳೆ ನೀರು ಸಂರಕ್ಷಣೆಯನ್ನು ಕಡ್ಡಾಯ ಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಇನ್ನಾದರೂ ಈ ಬಗ್ಗೆ ಸಮಾಜ ಗಮನ ಹರಿಸುವ ಅಗತ್ಯವಿದೆ.

ಜುಲೈ 20ರಂದು “ಉದಯವಾಣಿ’ ಮಳೆಕೊಯ್ಲು ಅಭಿಯಾನ
ಉಡುಪಿ: ಜನರಿಗೆ ನೀರಿನ ಮಹತ್ವವನ್ನು ಮತ್ತು ಅದನ್ನು ಸುದೀರ್ಘ‌ ಕಾಲ ಕಾಪಿಟ್ಟುಕೊಳ್ಳುವ ವಿಧಾನಗಳ ಕುರಿತು ತಿಳಿಸುವ ಅಭಿಯಾನವನ್ನು “ಉದಯವಾಣಿ’ ದಿನ ಪತ್ರಿಕೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ನಿರ್ಮಿತಿ ಕೇಂದ್ರ, ಎಂಜಿಎಂ ಕಾಲೇಜಿನ ಸಹಭಾಗಿತ್ವದಲ್ಲಿ ಜು. 20ರ ಬೆಳಗ್ಗೆ 9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ. ಕಾರ್ಯಕ್ರಮವು ಬೆಳಗ್ಗೆ 9.30ರಿಂದ ಮಧ್ಯಾಹ್ನದವರೆಗೆ ನಡೆಯಲಿದೆ.

ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ ಕುಮಾರ್‌, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್‌ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಲತಜ್ಞ ಶ್ರೀಪಡ್ರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಸಾರ್ವಜನಿಕರು ಶ್ರೀಪಡ್ರೆಯವರೊಂದಿಗೆ ಪ್ರಶ್ನೋತ್ತರ ನಡೆಸಲು ಅವಕಾಶವಿದೆ.

ಕಳೆದ ಬೇಸಗೆಯಲ್ಲಿ ಕಂಡುಬಂದ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು “ಉದಯವಾಣಿ’ ದಿನಪತ್ರಿಕೆಯು ತನ್ನ ಸಾಮಾಜಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳೂರಿನಲ್ಲಿ ಇತ್ತೀಚಿಗೆ ನಡೆಸಿದಂತೆ ಜಲಸಾಕ್ಷರತೆ ಅಭಿಯಾನವನ್ನು ಉಡುಪಿಯಲ್ಲಿಯೂ ಆಯೋಜಿಸುತ್ತಿದೆ. ಉದಯವಾಣಿಗೆ 50 ವರ್ಷ ತುಂಬುತ್ತಿರುವ ಸದವಸರದಲ್ಲಿ ವರ್ಷವಿಡೀ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಡೀ ಕರಾವಳಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದರೂ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗುವುದನ್ನು ಸಾಧ್ಯವಾದಷ್ಟು ಕಿರಿದುಗೊಳಿಸುವುದು
“ಉದಯವಾಣಿ’ ಉದ್ದೇಶ.

ಜಿಲ್ಲಾಧಿಕಾರಿಯವರು ಮನೆಗಳಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸು ವುದನ್ನು ಈಗಾಗಲೇ ಕಡ್ಡಾಯಗೊಳಿಸಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರು ಸಂಶಯಗಳಿದ್ದರೆ ಪರಿಹರಿಸಿಕೊಂಡು ತಮ್ಮ ಮನೆಗಳಲ್ಲಿ ಮಳೆ ನೀರ ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next