ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೆ. 25ರಂದು ಜಂತುಹುಳು ನಿವಾರಣಾ ದಿನ ಜರಗಲಿದೆ. ಅಂದು 1 ರಿಂದ 19 ವರ್ಷದೊಳಗಿನ 2,67,450 ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಆಲ್ಬೆಂಡಾಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 63,910 ಅಂಗನವಾಡಿ ಮಕ್ಕಳು, 1ರಿಂದ 10 ನೇ ತರಗತಿವರೆಗಿನ 1,59,521, ಪಿಯುಸಿಯ 29,040, ಶಾಲೆಯಿಂದ ಹೊರಗುಳಿದಿರುವ 1,829 , ಡಿಪ್ಲೊಮಾದ 2,210, ಐಟಿಐ ಕಾಲೇಜಿನ 1,870, ನರ್ಸಿಂಗ್ ಕಾಲೇಜಿನ 1,135 ಹಾಗೂ 7,745 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಂತುಹುಳು ಸಮಸ್ಯೆಯಿಂದ ಮಕ್ಕಳಲ್ಲಿ,ವಿದ್ಯಾರ್ಥಿಗಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ಓದಿನಲ್ಲಿ ಏಕಾಗ್ರತೆ ಕಡಿಮೆಯಾಗುವುದು, ಅನಾರೋಗ್ಯದ ಸಮಸ್ಯೆ ಉಂಟಾಗಲಿದೆ. ಇದರಿಂದ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಅಲ್ಲದೆ ಅನಾರೋಗ್ಯದ ಕಾರಣ ಶಾಲೆಗೆ ಗೈರು ಹಾಜರಾಗುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗಲಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿನ ಎಲ್ಲ ಸರಕಾರಿ, ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಜಂತುಹುಳು ಮಾತ್ರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯ ಕರ್ತೆಯರಿಗೂ ಈ ಕುರಿತು ತರಬೇತಿ ನೀಡಲಾಗಿದೆ. ಎಲ್ಲ ಶಾಲೆಗಳ ಶಿಕ್ಷಕರಿಗೆ ಆರೋಗ್ಯ ಇಲಾಖೆಯ ಮೂಲಕ ಅಗತ್ಯ ತರಬೇತಿಯನ್ನು ನೀಡಲಾಗುತ್ತಿದ್ದು ಮಾತ್ರೆಗಳನ್ನು ಸರಬರಾಜು ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮಾತ್ರೆ ವಿತರಣೆಯ ಜತೆಗೆ ಸುರಕ್ಷಿತ ಕೈ ತೊಳೆಯುವ ವಿಧಾನದ ಬಗ್ಗೆಯೂ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಡಿಸಿ ಹೇಳಿದರು.
ಸಂಪೂರ್ಣ ಸುರಕ್ಷಿತ
ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ.ಪೂ. ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಯಾವುದೇ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶೋಕ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಎಂ.ಜಿ. ರಾಮ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಡ್ಡ ಪರಿಣಾಮ ಇಲ್ಲ
ಜಂತುಹುಳು ನಿವಾರಣಾ ಮಾತ್ರೆಗಳು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಅವುಗಳು ಸಂಪೂರ್ಣ ಸುರಕ್ಷತೆಯಿಂದ ಕೂಡಿವೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳಲು ಸೂಚಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಂತುಹುಳು ನಿವಾರಣಾ ಆಲ್ಬೆಂಡಾಝೋಲ್ ಮಾತ್ರೆ ಲಭ್ಯವಿದೆ. ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.