Advertisement

ಹೊಸ ಕಾಮಗಾರಿಗಳಿಗೆ ಆದ್ಯತೆ: ದಿನಕರ ಬಾಬು ಸೂಚನೆ

10:48 AM Jul 18, 2020 | mahesh |

ಉಡುಪಿ: ಜಿಲ್ಲಾ ಪಂಚಾಯತ್‌ಗೆ ನೀಡಲಾಗುವ ಅನುದಾನದಲ್ಲಿ ಹಿಂದಿನ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗೆ ಹೆಚ್ಚಿನ ಅನುದಾನ ವ್ಯಯಿಸದೆ ಹೊಸ ಕಾಮಗಾರಿಗಳನ್ನು ಕೈಗೊಂಡು ಅವುಗಳನ್ನು ಮುಕ್ತಾಯಗೊಳಿಸಲು ಪ್ರಥಮ ಆದ್ಯತೆ ನೀಡುವಂತೆ ಜಿ.ಪಂ. ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ, ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ವರ್ಷ ಜಿ.ಪಂ.ಗೆ ನೀಡುವ ಅನುದಾನ
ದಲ್ಲಿ ಹೆಚ್ಚಿನ ಮೊತ್ತವನ್ನು ಹಿಂದಿನ ವರ್ಷದ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗೆ ಬಳಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದರಿಂದ ಪ್ರಸಕ್ತ ವರ್ಷದಲ್ಲಿ ಕೈಗೊಳ್ಳಬೇಕಾದ ನೂತನ ಕಾಮಗಾರಿಗಳ ಪ್ರಗತಿಗೆ ತೊಡಕಾಗುತ್ತಿದೆ. ಸಾರ್ವಜನಿಕರಿಗೆ ಹೊಸ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ. ಇನ್ನು ಮುಂದೆ ಪ್ರತಿ ವರ್ಷ ಆ ವರ್ಷ ನಿಗದಿಪಡಿಸಿದ ಕಾಮಗಾರಿಗಳನ್ನು ಅದೇ ವರ್ಷದಲ್ಲಿ ಪೂರ್ಣಗೊಳಿಸಿ, ಸಂಪೂರ್ಣ ಮೊತ್ತವನ್ನು ಪಾವತಿಸಿ, ಮುಂದಿನ ವರ್ಷಕ್ಕೆ ಬಾಕಿ ಇಡಬೇಡಿ ಎಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ. ನಲ್ಲಿ 2019-20ರ ಸಾಲಿನಲ್ಲಿ ಕಟ್ಟಡ ಕಾಮಗಾರಿಗೆ ಮೀಸಲಿಟ್ಟಿದ್ದ 65 ಲಕ್ಷ ರೂ ಅನುದಾನವನ್ನು ಸಂಬಂಧಪಟ್ಟ ಕಾಮಗಾರಿ ನಿರ್ವಹಿಸುವ ಇಲಾಖೆಗೆ ಬಿಡುಗಡೆಗೊಳಿಸದೆ ಅನುದಾನವನ್ನು ಲ್ಯಾಪ್ಸ್‌ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು ಇದು ಜಿ.ಪಂ.ನ ಆಡಳಿತ ವ್ಯವಸ್ಥೆಯ ವೈಫ‌ಲ್ಯವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದರು.

ಕೋವಿಡ್‌-19ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 1,895 ವರದಿಯಾಗಿದ್ದು, 428 ಸಕ್ರಿಯ ಪ್ರಕರಣಗಳಿವೆ. ಒಟ್ಟು 8 ಸಾವು ಸಂಭವಿಸಿದ್ದು ಕೋವಿಡ್‌ನೊಂದಿಗೆ ಇತರೆ ಕಾಯಿಲೆ ಇದ್ದ ಕಾರಣ ಸಾವು ಸಂಭವಿಸಿದೆ. ನೇರವಾಗಿ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ.

ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ
ಬೆಡ್‌ಗಳ ವ್ಯವಸ್ಥೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಹ ಶೇ. 50 ಬೆಡ್‌ಗಳನ್ನು ಮೀಸಲಿಡಲಾಗಿದೆ. ಸಾರ್ವಜನಿಕ ಸಂಪರ್ಕದಲ್ಲಿರುವ ವ್ಯಕ್ತಿಗಳಲ್ಲಿ ಹೆಚ್ಚಿನ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದು, ಮಣಿಪಾಲ ಕೆಂಎಸಿಯಲ್ಲಿ ದಿನಕ್ಕೆ 500-600 ಹಾಗೂ ಜಿಲ್ಲಾ ಆಸ್ಪತ್ರೆಯ ಲ್ಯಾಬ್‌ನಲ್ಲಿ 250-300 ಕೋವಿಡ್‌-19 ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ ಮಾಹಿತಿ ನೀಡಿದರು.

Advertisement

ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಮಾತನಾಡಿದರು. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್‌, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್‌ ಫೆಡ್ನೆಕರ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ರಸಗೊಬ್ಬರ ದಾಸ್ತಾನು
ಜಿಲ್ಲೆಯಲ್ಲಿ ಇದುವರೆಗೆ 1965 ಮಿ.ಮೀ. ಮಳೆ ಆಗಿದ್ದು ವಾಡಿಕೆ ಮಳೆ ಶೇ.95.6 ಆಗಿದೆ. 2,564 ಕ್ವಿಂ. ಬಿತ್ತನೆ ಬೀಜ ವಿತರಿಸಲಾಗಿದೆ. 1,077 ಟನ್‌ ರಸಗೊಬ್ಬರ ವಿತರಿಸಿದ್ದು, 900 ಟನ್‌ ಇನ್ನೂ ದಾಸ್ತಾನು ಇದೆ, ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯಕ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next