ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಎರಡು ಜೀವಹಾನಿ ಪ್ರಕರಣವೂ ಸೇರಿದಂತೆ ಮಳೆಹಾನಿಯ ಒಟ್ಟು 100 ಪ್ರಕರಣಗಳು ಸಂಭವಿಸಿವೆ.
ಉಡುಪಿ ತಾಲೂಕಿನಲ್ಲಿ 84, ಕಾರ್ಕಳ ತಾಲೂಕಿನಲ್ಲಿ ಆರು, ಕುಂದಾಪುರ ತಾಲೂಕಿನಲ್ಲಿ ಮೂರು, ಕಾಪು ತಾಲೂಕಿನಲ್ಲಿ ಏಳು ಪ್ರಕರಣಗಳು ವರದಿಯಾಗಿವೆ.
ಉಡುಪಿ ತಾಲೂಕಿನಲ್ಲಿ 33.32 ಲ. ರೂ., ಕಾರ್ಕಳ ತಾಲೂಕಿನಲ್ಲಿ 2.6 ಲ. ರೂ., ಕುಂದಾಪುರ ತಾಲೂಕಿನಲ್ಲಿ 1 ಲ. ರೂ., ಕಾಪು ತಾಲೂಕಿನಲ್ಲಿ 8.45 ಲ.ರೂ. ಒಟ್ಟು 45 ಲ. ರೂ. ನಷ್ಟವಾಗಿದೆ.
ಇದರಲ್ಲಿ ಜಾನುವಾರುಗಳು ಸತ್ತದ್ದು, ಕಚ್ಚಾ ಮನೆಗೆ ಹಾನಿ, ಪಕ್ಕಾ ಮನೆಗೆ ಹಾನಿ, ಸಿಡಿಲು ಆಘಾತ ಇತ್ಯಾದಿಗಳು ಸೇರಿವೆ. ಇದು ಬುಧವಾರ ಮಧ್ಯಾಹ್ನದವರೆಗಿನ ವರದಿಯಾಗಿದ್ದು, ಅನಂತರ ಸಣ್ಣಪುಟ್ಟ ಪ್ರಕರಣಗಳು ದಾಖಲಾಗಿವೆ.
ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಸಾವಿಗೀಡಾದ ಪ್ರಕರಣಕ್ಕೆ ತಲಾ 4 ಲ. ರೂ. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲ.ರೂ. ಒಟ್ಟು 5 ಲ. ರೂ. ಮೊತ್ತವನ್ನು ಉಡುಪಿ ಜಿಲ್ಲೆಯಲ್ಲಿ ಸಾವಿಗೀಡಾದ ಇಬ್ಬರ ವಾರೀಸುದಾರರಿಗೆ ಬುಧವಾರ ಪರಿಹಾರ ನೀಡಲಾಗಿದೆ. ಮನೆ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಶೇ.15 ಪರಿಹಾರವನ್ನು ವಿತರಿಸಲು ಜಿಲ್ಲಾಡಳಿತಕ್ಕೆ ಅಧಿಕಾರವಿದ್ದು ಇದರ ಪ್ರಕಾರ 5,000 ರೂ. ಮೊತ್ತವನ್ನು ವಿತರಿಸಲು ಆರಂಭಿಸಿದ್ದೇವೆ. ಉಳಿದ ಮೊತ್ತವನ್ನು ಲೋಕೋಪಯೋಗಿ ಇಲಾಖೆಯ ವರದಿ ಬಂದ ಬಳಿಕ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.