Advertisement
ಕಳೆದ ವರ್ಷ ಜನವರಿ ಯಿಂದ ಆರಂಭಗೊಂಡು, ಡಿಸೆಂಬರ್‌ವರೆಗೂ ಬಹುತೇಕ ಎಲ್ಲ ತಿಂಗಳು ಜಿಲ್ಲೆಯಲ್ಲಿ ಮಳೆಯಾಗಿದ್ದರ ಪರಿಣಾಮ ಈಗ ಹಿಂದಿನ ವರ್ಷಗಳಿಗಿಂತ ಅಂತರ್ಜಲ ಮಟ್ಟದಲ್ಲಿಯೂ ಭಾರೀ ಸುಧಾರಣೆ ಕಂಡು ಬಂದಿದೆ. 7ರ ಆಸುಪಾಸಿನಲ್ಲಿದ್ದ ಜಿಲ್ಲೆಯ ಅಂತರ್ಜಲ ಮಟ್ಟ ಈಗ 6.17ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯ 7 ತಾಲೂಕುಗಳ ಪೈಕಿ ಕಾಪು ತಾ|-4.65 ಮೀ. ಅಂತರ್ಜಲ ಮಟ್ಟವಿದ್ದರೆ, ಅನಂತರದ ಸ್ಥಾನ ಕುಂದಾಪುರ ತಾ| – 5.53 ಮೀ., ಹೆಬ್ರಿ ತಾ| – 5.74 ಮೀ., ಬೈಂದೂರು ತಾ| – 6.4 ಮೀ., ಕಾರ್ಕಳ ತಾ| – 6.57 ಮೀ., ಬ್ರಹ್ಮಾವರ ತಾ| – 6.72 ಮೀ. ಹಾಗೂ ಉಡುಪಿ ತಾ| -7.59 ಮೀ. ಅಂತರ್ಜಲ ಮಟ್ಟವಿದೆ. ಉಡುಪಿ ತಾ| ಜಿಲ್ಲೆಯಲ್ಲಿಯೇ ಕನಿಷ್ಠ ಅಂತರ್ಜಲ ಮಟ್ಟವನ್ನು ಹೊಂದಿರುವ ತಾಲೂಕಾಗಿದೆ. ಒಟ್ಟಾರೆ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 6.17 ಮೀ. ಆಗಿದೆ. ಅಂತರ್ಜಲ ವೃದ್ಧಿಗೆ ಕಾರಣಗಳೇನು?
ಬಹುತೇಕ ಎಲ್ಲ ಕಡೆಗಳಲ್ಲಿಯೂ ನೀರಿನ ಅಂತರ್ಜಲ ಮಟ್ಟ ಕಳೆದ ಬಾರಿಗಿಂತ ಉತ್ತಮವಾಗಿದೆ. ಆದರೂ ಕೆಲವೆಡೆಗಳಲ್ಲಿ ಮಾತ್ರ ಕಳೆದ ಬಾರಿಗಿಂತ ಹೆಚ್ಚಿದ್ದರೂ, ಸರಾಸರಿ ನೋಡಿದರೆ, ಇನ್ನಷ್ಟು ಸುಧಾರಣೆಯಾಗಬಹುದಿತ್ತು. ಅಂತರ್ಜಲ ಮಟ್ಟ ಉತ್ತಮವಾಗಿರಲು ಪ್ರಮುಖ ಕಾರಣ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಕಾಪು, ಕುಂದಾಪುರ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮ ಪ್ರಮಾಣದಲ್ಲಿದೆ. ಬೈಂದೂರು, ಕಾರ್ಕಳ ಸಹ ಸಾಧಾರಣ ಮಟ್ಟದಲ್ಲಿದೆ. ಆದರೆ ಉಡುಪಿ, ಬ್ರಹ್ಮಾವರ ಹಾಗೂ ಕಾರ್ಕಳದಲ್ಲಿ ತುಸು ಇಳಿಮುಖವಾಗಿದೆ. ಡಿಸೆಂಬರ್‌ವರೆಗೂ ನಿರಂತರ ಮಳೆ ಇದ್ದುದರಿಂದ ನದಿ, ಕೆರೆ, ಬಾವಿಗಳ ನೀರು ಕೃಷಿಗೆ ಬಳಸುವುದು ತುಸು ಕಡಿಮೆ. ಇನ್ನು ಮಳೆಯಿಂದಾಗಿ ಹಿಂಗಾರು ಹಂಗಾಮಿನ ಕೃಷಿಗೆ ಲಾಭವಾಗಿದ್ದು, ಹಿಂದೆಲ್ಲ ಹಡಿಲು ಬಿಡುವವರು ಈ ಬಾರಿ ಭತ್ತದ ಕೃಷಿಯನ್ನು ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಲ್ಲಿ ನೀರು ನಿಲ್ಲುವಂತೆ ಮಾಡುವುದರಿಂದ ಇದು ಸಹ ಅಂತರ್ಜಲ ಮಟ್ಟ ವೃದ್ಧಿಗೂ ಸಹಕಾರಿಯಾಗಿದೆ.
Related Articles
ಕಳೆದ ವರ್ಷ ಜನವರಿಯಿಂದ ಆರಂಭಗೊಂಡು ಡಿಸೆಂಬರ್‌ವರೆಗೆ ಹೆಚ್ಚು ಕಡಿಮೆ ವರ್ಷದ ಎಲ್ಲ ತಿಂಗಳು ಮಳೆಯಾಗಿದೆ. ಇದು ಅಂತರ್ಜಲ ಮಟ್ಟ ಏರಿಕೆಗೆ ಪೂರಕವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬೋರ್‌ವೆಲ್ ಕೊರೆಯಿಸುವವರ ಸಂಖ್ಯೆಯೂ ಕಡಿಮೆ ಇದ್ದಂತೆ ಕಾಣಿಸುತ್ತದೆ. ಆದರೂ ನೀರಿನ ಮಿತವಾದ ಬಳಕೆಗೆ ಆದ್ಯತೆ ಕೊಡಬೇಕಿದೆ. ಬೋರ್‌ವೆಲ್ ಕೊರೆಯಿಸಿದವರು ಕಡ್ಡಾಯವಾಗಿ ಮರುಪೂರಣ ಮಾಡಲೇಬೇಕು.
– ಡಾ| ಎಂ.ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ವಿಭಾಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ
Advertisement
– ಪ್ರಶಾಂತ್ ಪಾದೆ