Advertisement

ತಪ್ಪು ಸಾಬೀತಾಗದಿದ್ದರೂ ಅಮಾನತು ಶಿಕ್ಷೆ ! ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಅವಸ್ಥೆ

01:34 AM Apr 08, 2021 | Team Udayavani |

ಉಡುಪಿ: ಇಲಾಖೆ ವಿಚಾರಣಾ ವರದಿಯಲ್ಲಿ ಆರೋಪ ನಿರಾಧಾರ ಎಂದು ಸಾಬೀತಾಗಿದ್ದರೂ ಹಾಗೂ ಅನಾಮಧೇಯ ದೂರು ಪತ್ರ ಅನೂರ್ಜಿತಗೊಂಡಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ ಪ್ರಸಂಗ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ.

Advertisement

ಎರಡು ವರ್ಷಗಳಿಂದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಆಗಿರುವ ಮಂಜುಳಾ ಕೆ. ಅವರು ಈಗ ಅಮಾನತು ಶಿಕ್ಷೆ ಎದುರಿಸುತ್ತಿರುವವರು.

ಇಲಾಖೆಯಲ್ಲಿ 22 ವರ್ಷ ಸೇವೆ ಸಲ್ಲಿಸಿರುವ ಮಂಜುಳಾ ಅವರು 2 ವರ್ಷ 2 ತಿಂಗಳ ಕಾಲ ಉಡುಪಿ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಅಶೋಕ ಕೊರಂಗ್ರಪಾಡಿ ಬಿದ್ಕಲ್‌ ಕಟ್ಟೆ ಎನ್ನುವವರ ಹೆಸರಿನ ಪತ್ರದಲ್ಲಿ ಮಂಜುಳಾ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು.

ಇಲಾಖೆ ವಿಚಾರಣೆ
ಅಶೋಕ ಕೊರಂಗ್ರಪಾಡಿ ಬಿದ್ಕಲ್‌ಕಟ್ಟೆ ಎನ್ನುವವರು ಬರೆದಿದ್ದರು ಎನ್ನಲಾದ ಪತ್ರದಲ್ಲಿನ ಆರೋಪಗಳೆಂದರೆ, ಆರ್‌ಟಿಒ ಪರಿಶೀಲನೆಯಿಲ್ಲದೆ ಸರಕಾರಿ ವಾಹನ ದುರಸ್ತಿಗೆ 48 ಸಾವಿರ ರೂ. ವೆಚ್ಚ ಮಾಡಿರುವುದು, 2019ರ ಡಿಸೆಂಬರ್‌ನಲ್ಲಿ ಬಿಇಒ ಕಚೇರಿಯ ಶೌಚಾಲಯ ಕಟ್ಟಲು 5 ಲ.ರೂ.ಗುತ್ತಿಗೆ ನೀಡಿದ್ದು ದರಪಟ್ಟಿ ಇಲ್ಲದೆ ಹಣ ಪಾವತಿಸಿರುವುದು, ಆರ್‌ಟಿಒ ಪರಿಶೀಲನೆ, ದರಪಟ್ಟಿ ಇಲ್ಲದೆ ಕಚೇರಿ ವಾಹನವನ್ನು 2020ರ ಮೇ ತಿಂಗಳಲ್ಲಿ 67 ಸಾವಿರ ರೂ. ಪಾವತಿಸಿರುವುದು., 2019ರಲ್ಲಿ ಕೊರಗ ಮಕ್ಕಳ ಸರ್ವೆಗೆ ಮಂಜೂರಾಗಿದ್ದ 98 ಸಾವಿರ ರೂ.ಗಳನ್ನು ಮಕ್ಕಳಿಗೆ ಪಾವತಿಸದಿರುವುದು, 2019ರಲ್ಲಿ 4 ಲೋಡ್‌ ಪುಸ್ತಕ ಸಾಗಾಟದ ದರಪಟ್ಟಿ ಕರೆಯದಿರಲೆಂದು ಆಪಾದಿಸ ಲಾಗಿತ್ತು.

ಈ ಸಂಬಂಧ ಇಲಾಖೆ ತನಿಖೆ ನಡೆಸಿದ ವಿಚಾರಣಾಧಿಕಾರಿ, ದೂರು ದಾರರಿಗೆ ನೋಟಿಸ್‌ ನೀಡಿದ್ದರು. ಆದರೆ ನೋಟಿಸ್‌ಗೆ ಪ್ರತಿಯಾಗಿ ದೂರುದಾರರು ಎಂದು ಹೇಳಲಾಗಿದ್ದ ಅಶೋಕ ಕೊರಂಗ್ರಪಾಡಿ ಬಿದ್ಕಲ್‌ಕಟ್ಟೆಯವರು ಪತ್ರ ಬರೆದು, ನಾನು ಕುಂದಾಪುರ ತಾಲೂಕಿನಲ್ಲಿ ಆಟೋರಿಕ್ಷಾ ಓಡಿಸಿಕೊಂಡು ಬದುಕುತ್ತಿರುವವನು. ನನಗೆ ಈ ದೂರಿನ ಬಗೆಗಾಗಲೀ, ನೀವು ಉಲ್ಲೇಖೀಸಲಾದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಬಗೆಗಾಗಲೀ ಏನೂ ತಿಳಿದಿಲ್ಲ. ಒಬ್ಬ ಉನ್ನತಾಧಿಕಾರಿ ಮಾನಕ್ಕೆ ಅಪಮಾನ ತರುವಂತಹ ದುಷ್ಕೃತ್ಯಕ್ಕೆ ಯಾರೋ ನನ್ನ ಹೆಸರನ್ನು ಬಳಸಿಕೊಂಡಿರಬಹುದು. ಈ ದೂರಿಗೂ ನನಗೂ ಯಾವುದೇ ಸಂಬಂಧವಿಲ್ಲವಾದ ಕಾರಣ, ವಿಚಾರಣೆಯಿಂದ ನನ್ನನ್ನು ಕೈ ಬಿಡಬೇಕೆಂದು ಮನವಿ ಮಾಡಿದ್ದರು. ಆ ಬಳಿಕ ವಿಚಾರಣಾಧಿಕಾರಿಯವರು ತನಿಖೆಯ ವೇಳೆಯಲ್ಲಿ ಆರೋಪಿತ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದಲೂ ಪ್ರತಿಕ್ರಿಯೆ ಪಡೆದಿದ್ದರು.

Advertisement

ಅಂತಿಮವಾಗಿ ವಿಚಾರಣಾಧಿಕಾರಿಯವರು, ದೂರು ದಾರರು ತಾವು ದೂರು ನೀಡಿಲ್ಲ, ತಮಗೆ ಈ ಅಧಿಕಾರಿಯೇ ಗೊತ್ತಿಲ್ಲ ಎಂದು ಹೇಳಿರುವುದರಿಂದ ಈ ಆರೋಪಗಳು ಸಾಬೀತಾಗಿಲ್ಲ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿತ್ತು.

ವ್ಯವಸ್ಥಿತ ಪಿತೂರಿ ?
ಬೇನಾಮಿ ಪತ್ರದ ಮೇಲಿನ ಆರೋಪಗಳು ಸಾಬೀತಾಗಿಲ್ಲ ಎಂದು ವಿಚಾರಣಾಧಿಕಾರಿಯವರು ವರದಿ ನೀಡಿ ಪ್ರಕರಣ ಅಂತ್ಯಗೊಳಿಸಿದ್ದರೂ ಅದರಲ್ಲಿನ ಕೆಲವು ಆರೋಪಗ ಳೊಂದಿಗೆ ಹೊಸ ಆರೋಪಗಳನ್ನೂ ಹೊರಿಸಿ ಆರು ತಿಂಗಳ ಬಳಿಕ ಅಮಾನತುಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂಬ ಸಂಶಯಕ್ಕೆಡೆ ಮಾಡಿದೆ.

ಹೊಸ ಕಾರಣ ಸೇರ್ಪಡೆ
ಈಗ ಅಮಾನತಿಗೆ ನೀಡಿರುವ ಕಾರಣದಲ್ಲಿ ಹಳೆಯ ಆರೋಪ ದೊಂದಿಗೆ, ಹೊಸದಾಗಿ ಶಾಲೆಯೊಂದಕ್ಕೆ ಬಂದ ಪರಿಹಾರ ಹಣವನ್ನು ಇಲಾಖೆಗೆ ಹಾಕದೇ, ಅನುಮತಿ ಪಡೆಯದೇ ಎಸ್‌ಡಿಎಂಸಿ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಆರೋಪವೊಂದು ಹೊಸದಾಗಿ ಸೇರಿಕೊಂಡಿದೆ. ಈ ಸಂಬಂಧ ಇಲಾಖೆ ತನಿಖೆ ಕಾದಿರಿಸಿ ಅಮಾನತುಗೊಳಿಸಲಾಗಿದೆ.

ಅಕ್ರಮ ಎಸಗಿದವರಿಗೆ ವರ್ಗಾವಣೆಯ ಶ್ರೀ ರಕ್ಷೆ !
ಇಲಾಖೆಯಲ್ಲಿ ಶಿಕ್ಷಣ ಸಂಯೋಜಕರಾಗಿದ್ದವರೊಬ್ಬರ ವಿರುದ್ಧ ಹಣ ದುರುಪಯೋಗ, ತೀರ್ಪುಗಾರರ ನಕಲಿ ಸಹಿ ಮಾಡಿರುವುದು, ಶಿಕ್ಷಕರ ಸಹಿ ಫೋರ್ಜರಿ ಮಾಡಿರುವುದೂ ಸೇರಿದಂತೆ ಹಲವಾರು ಗುರುತರ ಆರೋಪಗಳ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ ಮಂಜುಳಾ ಅವರು ಇಲಾಖೆಗೆ ಪತ್ರ ಬರೆದಿದ್ದರು. ಹಿಂದಿನ ಬಿಇಒಗಳ ಸೀಲ್‌ ಮತ್ತು ಸಹಿ ಫೋರ್ಜರಿಯಂತ ಆರೋಪಗಳಿದ್ದವು. ಆದರೂ ಅವರನ್ನು ಶಾಲೆಯೊಂದಕ್ಕೆ ಮುಖ್ಯಸ್ಥರನ್ನಾಗಿ ವರ್ಗಾಯಿಸಿದ್ದು ಬಿಟ್ಟರೆ ಗುರುತರ ಆರೋಪಗಳ ವಿರುದ್ಧ ತನಿಖೆಯಾಗಲೀ , ಕ್ರಮವಾಗಲೀ ಜರಗಲಿಲ್ಲ. ಮತ್ತೂಬ್ಬ ಚಾಲಕ ಸಿಬಂದಿಯ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗೆ ಮಂಜುಳಾ ಅವರು ಕೋರಿದ್ದರು. ಅದಾದ ಬಳಿಕ ಆ ಆರೋಪಿತ ಸಿಬಂದಿಯ ಸೇವೆಯನ್ನು ಮೇಲಧಿಕಾರಿಗಳಿಗೆ ನಿಯೋಜಿ(ಬಡ್ತಿ1)ಸಲಾಯಿತು.

ಮತ್ತೂಬ್ಬ ಶಿಕ್ಷಕರು ಇಲಾಖೆಯ ಮತ್ತೂಂದು ವಿಭಾಗಕ್ಕೆ ನಿಯೋಜನೆ ಹೊಂದಿದ್ದರು. ಆದರೆ ಒಂದೂವರೆ ವರ್ಷದಿಂದ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೇ, ಆಗಾಗ್ಗೆ ಅನಧಿಕೃತ ಗೈರು ಹಾಜರಿಯಾಗಿರುತ್ತಿದ್ದರು. ಇದನ್ನು ಪ್ರಶ್ನಿಸಿ ನೋಟಿಸ್‌ ನೀಡಿದ್ದಕ್ಕೆ ಉತ್ತರಿಸಿಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ಕ್ರಮ ಜರಗಿಸುವಂತೆ ಜಿ.ಪಂ. ಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಇದು ವರೆಗೂ ಯಾವುದೇ ಕ್ರಮ ಜರಗಿಲ್ಲ. ಆದರೆ, ಕ್ರಮ ಕೈಗೊಳ್ಳಲು ಆದೇಶಿಸಿದ್ದ ಅಧಿಕಾರಿಯವರು ಅಮಾನತುಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕೆಲವು ಜನಪ್ರತಿನಿಧಿಗಳ ಚಿತಾವಣೆ
ಮಂಜುಳಾ ಅವರು ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದ ಕೆಲವು ಸಿಬಂದಿಯವರಿಗೂ ಹಾಗೂ ಜಿ.ಪಂ. ನ ಕೆಲವು ಜನಪ್ರತಿನಿಧಿಗಳಿಗೂ ಸಂಬಂಧವಿದೆ ಎನ್ನಲಾಗಿದ್ದು, ಈ ಸಂಬಂಧ ಮಂಜುಳಾ ಅವರೂ ಇಲಾಖೆ ಹಾಗೂ ಸರಕಾರದ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈಗ ಅಂತ್ಯಗೊಂಡಿದ್ದ ಪ್ರಕರಣದಲ್ಲಿನ ಕೆಲವು ಆರೋಪಗಳನ್ನು ಆಧರಿಸಿ ಜಿ.ಪಂ. ಸ್ಥಾಯಿ ಸಮಿತಿಯವರ ವರದಿ ಪಡೆದು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇದಕ್ಕೆ ತಪ್ಪಿತಸ್ಥ ಸಿಬಂದಿ ಹಾಗೂ ಕೆಲವು ಜನಪ್ರತಿ ನಿಧಿಗಳ ಚಿತಾವಣೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next