Advertisement

ಉಡುಪಿ ಜಿಲ್ಲೆ: 2 ಲಕ್ಷ ಬಿಜೆಪಿ ಸದಸ್ಯತ್ವ ಗುರಿಗೆ ಚಾಲನೆ

09:46 PM Jul 07, 2019 | Sriram |

ಉಡುಪಿ: ದೇಶದ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರಕಿದ ಶನಿವಾರವೇ ಉಡುಪಿ ಜಿಲ್ಲಾ ಮತ್ತು ನಗರ ಬಿಜೆಪಿ ವತಿಯಿಂದ “ಸಂಘಟನಾ ಪರ್ವ’ದ ಅಂಗವಾಗಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಮಣಿಪಾಲ ಬಸ್‌ ನಿಲ್ದಾಣದ ಬಳಿ ಆರಂಭಿಸಲಾಯಿತು.

Advertisement

ಸಂಸದೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ಶೋಭಾ ಕರಂದ್ಲಾಜೆಯವರು ಬಲೂನು ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ರಾಜ್ಯದಲ್ಲಿ ಕಳೆದ ಬಾರಿ 84 ಲಕ್ಷ ಸದಸ್ಯರು ನೋಂದಣಿಯಾಗಿದ್ದರೆ ಈ ಬಾರಿ 50 ಲಕ್ಷ ಹೆಚ್ಚುವರಿಯಾಗಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ 1.7 ಲಕ್ಷ ಸದಸ್ಯರಾಗಿದ್ದರೆ ಈ ಬಾರಿ 2 ಲಕ್ಷದ ಗುರಿ ಇದೆ ಎಂದರು.

ಪ್ರತಿ ಬೂತ್‌ನಲ್ಲಿ 200 ಸದಸ್ಯರನ್ನು ನೋಂದಾಯಿಸುವ ಗುರಿ ಇದೆ. ಆ. 11ರವರೆಗೆ ಮಿಸ್‌ ಕಾಲ್‌ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು. ಸಾಂಪ್ರದಾಯಿಕವಾಗಿಯೂ ಸದಸ್ಯತ್ವ ರಶೀದಿ ಪಡೆಯುವ ಕ್ರಮ ಇದೆ. 25 ಸದಸ್ಯರನ್ನು ನೋಂದಾಯಿಸುವವರು ಸಕ್ರಿಯ ಸದಸ್ಯರಾಗುತ್ತಾರೆ.
ಆ. 11ರಿಂದ 31ರವರೆಗೆ ಸಕ್ರಿಯ ಸದಸ್ಯರ ನೋಂದಣಿ ನಡೆಯಲಿದೆ ಎಂದು ಶೋಭಾ ಹೇಳಿದರು.

ಜನಸಂಖ್ಯೆಯಲ್ಲಿ ಮುಂದಿರುವ ಚೀನಾದಲ್ಲಿ ಕಮ್ಯುನಿಸ್ಟ್‌ ಪಕ್ಷ ಸರ್ವಾಧಿಕಾರಿ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದರೆ ನಮ್ಮ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ವಂಶಾಡಳಿತದಲ್ಲಿ ನಡೆಯುತ್ತಿದೆ. ನಮ್ಮ ಪಕ್ಷ ಮಾತ್ರ ಪ್ರಜಾತಂತ್ರದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದು 11 ಕೋಟಿ ಸದಸ್ಯರನ್ನು ನೋಂದಾಯಿಸುವ ಮೂಲಕ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿದೆ. ಹೀಗಾಗಿಯೇ ವೆಂಕಯ್ಯ ನಾಯ್ಡು, ಕುಶಭಾವು ಠಾಕ್ರೆ, ಜನಾ ಕೃಷ್ಣಮೂರ್ತಿ, ಅಮಿತ್‌ ಶಾ ಅಂತಹ ಚಿರಪರಿಚಿತರಲ್ಲದವರು ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಶೋಭಾ ನುಡಿದರು.

ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಸದಸ್ಯತ್ವ ಅಭಿಯಾನದ ಸಂಚಾಲಕರಾದ ಕುಯಿಲಾಡಿ ಸುರೇಶ ನಾಯಕ್‌ ಕಾರ್ಯಕ್ರಮ ನಿರ್ವಹಿಸಿ ಮಹೇಶ್‌ ಠಾಕೂರ್‌ ವಂದಿಸಿದರು. ಶಾಸಕ ಕೆ.ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಕಲ್ಪನಾ ಸುದಾಮ, ಪಕ್ಷದ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯರಾದವರಿಗೆ ಶ್ರೀಗಂಧದ ಗಿಡಗಳನ್ನು ವಿತರಿಸಲಾಯಿತು.

Advertisement

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಸದಸ್ಯತ್ವ!
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 1.9 ಕೋಟಿ ಮತಗಳನ್ನು ಪಡೆದ ಬಿಜೆಪಿ 171 ವಿಧಾನಸಭಾ ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಮತಗಳನ್ನು ಪಡೆಯಿತು. ಅದೇ ರೀತಿ ಕಾಂಗ್ರೆಸ್‌ ಶಾಸಕರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸದಸ್ಯರಾದರೂ ಆಶ್ಚರ್ಯವಿಲ್ಲ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯ ಹೊಸ ಆಶಾವಾದವನ್ನು ಸಂಸದೆ ಶೋಭಾ ಕರಂದ್ಲಾಜೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next