Advertisement

ಉಡುಪಿ ಜಿಲ್ಲೆ: ದೂರವಾದ‌ ಕೊರೊನಾ ಆತಂಕ

01:32 AM Mar 16, 2020 | Sriram |

ಉಡುಪಿ: ಜಿಲ್ಲೆಯಲ್ಲಿ ರವಿವಾರ ಕೊರೊನಾ ಶಂಕಿತ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Advertisement

ಶನಿವಾರ ಜಿಲ್ಲೆಯಲ್ಲಿ ಒಬ್ಬರು ಕೊರೊನಾ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲ ದ್ರವ ಮಾದರಿಯನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಅದು ನೆಗೆಟಿವ್‌ ಎಂದು ವರದಿ ಬಂದಿದೆ. ಜಿಲ್ಲೆಯಿಂದ ಇದುವರೆಗೆ ಕಳುಹಿಸಲಾದ ಮಾದರಿಗಳು ನೆಗೆಟಿವ್‌ ಬಂದಿದೆ ಎಂದವರು ತಿಳಿಸಿದ್ದಾರೆ.

ಅಪರಿಚಿತರ ಬಗ್ಗೆ ಎಚ್ಚರ
ಆರೋಗ್ಯ ಇಲಾಖೆಯ ಸಿಬಂದಿ, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಯಾರಾದರೂ ಅಪರಿಚಿತರು ಮನೆಗಳಿಗೆ ಬಂದರೆ ಅಂತಹ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಮನೆಯೊಳಗೆ ಪ್ರವೇಶ ನೀಡದಂತೆ ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ ಮನವಿ ಮಾಡಿದ್ದಾರೆ.

ಬನ್ನಂಜೆಯ ವೃದ್ಧ ದಂಪತಿ ಇದ್ದ ಮನೆಗೆ ರವಿವಾರ ಅಪರಿಚಿತರು ಬಂದು ಮಾಹಿತಿ ಕೇಳಿದ್ದರು. ಅವರಲ್ಲಿ ಗುರುತಿನ ಚೀಟಿ, ದಾಖಲೆ ಕೇಳಿದಾಗ ಅಲ್ಲಿಂದ ತೆರಳಿದ್ದಾರೆ. ಈ ಬಗ್ಗೆ ದಂಪತಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಜಿÇÉಾ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಇವರಿಗೆ ಇಲಾಖೆ ವತಿಯಿಂದ ಸಮವಸ್ತ್ರ, ಗುರುತಿನ ಚೀಟಿ, ಅಧಿಕೃತ ಆದೇಶ ಪತ್ರ ನೀಡಲಾಗಿದೆ.ಇವರಿಗೆ ಮಾತ್ರ ಅವರು ಬಯಸಿರುವ ಅಗತ್ಯ ಮಾಹಿತಿ ನೀಡುವಂತೆ ಹಾಗೂ ಇತರ ಅನಧಿಕೃತ ವ್ಯಕ್ತಿಗಳು ಮಾಹಿತಿ ಕೇಳಿ ಬಂದಲ್ಲಿ ತತ್‌ಕ್ಷಣ ಆರೋಗ್ಯ ಇಲಾಖೆಯ ದೂ.ಸಂ. 94498 43066 ಗೆ ಅಥವಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಡಿಚ್‌ಒ ತಿಳಿಸಿದ್ದಾರೆ.

ಶ್ರದ್ಧಾ ಕೇಂದ್ರಗಳಿಗೆ ಕಟ್ಟುನಿಟ್ಟಿನ ಸೂಚನೆ
ಕೊರೊನಾ ವೈರಸ್‌ಗೆ ಸಂಬಂಧಿಸಿ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಆರೋಗ್ಯ ಇಲಾಖೆ ತೆಗೆದುಕೊಂಡಿದೆ. ದೇವಸ್ಥಾನ, ಚರ್ಚ್‌, ಮಸೀದಿ, ಮಠ ಇತರೆ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಈ ಎಲ್ಲ ಸಂಸ್ಥೆಗಳಿಗೆ ಡಿಎಚ್‌ಒ ಅವರು ಮನವಿ ಮಾಡಿಕೊಂಡಿದ್ದಾರೆ. ಸರಕಾರದ ಆದೇಶ ಪಾಲಿಸದ ಮಾಲ್‌, ಚಿತ್ರಮಂದಿರ ಇತ್ಯಾದಿಗಳನ್ನು ಪತ್ತೆ ಮಾಡಿ ಬಂದ್‌ ಮಾಡುವಂತೆ ಸೂಚನೆಗಳನ್ನು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next