Advertisement

Udupi: ಕಾರ್ಮಿಕರ ದಾಖಲೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

07:20 PM Nov 06, 2024 | Team Udayavani |

ಉಡುಪಿ: ಕಾರ್ಮಿಕರ ಸೇವೆಯನ್ನು ಪಡೆಯಲು ಕೆಲಸಗಾರರನ್ನು ನಿಯೋಜಿಸಿಕೊಳ್ಳುವ ಪ್ರತಿಯೊಬ್ಬ ಮಾಲಕರು ಅವರ ಗುರುತಿನ ಚೀಟಿ, ಶಾಶ್ವತ ಹಾಗೂ ತಾತ್ಕಾಲಿಕ ವಾಸ ಸ್ಥಾನದ ವಿವರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ವಿವರಗಳನ್ನು ಸಂಬಂಧಿಸಿದ ಸರಕಾರಿ ಕಚೇರಿಗಳಿಗೆ ತಪ್ಪದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಅಕ್ರಮ ಬಾಂಗ್ಲಾದೇಶೀಯ ವಲಸೆ ಕಾರ್ಮಿಕರಿಗೆ ಹಾಗೂ ನಾಗರಿಕರಿಗೆ ಸಂಬಂಧಿಸಿ ವಿವಿಧ ಸಂಸ್ಥೆಗಳ ಮೂಲಕ ಜಿಲ್ಲೆಯ ಜನರನ್ನು ಜಾಗೃತಗೊಳಿಸುವ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಕಾರ್ಮಿಕರು ಜಿಲ್ಲೆಯಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಲ್ಲದೆ ಸ್ಥಳೀಯವಾಗಿ ಕೆಲವು ದಾಖಲೆಗಳನ್ನು ಸೃಷ್ಟಿಸಿಕೊಂಡು ಕಾನೂನು ಬಾಹಿರವಾಗಿ ವಾಸವಿದ್ದರೆ, ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಚ್ಚರ ವಹಿಸಲು ನಿರ್ದೇಶನ ನೀಡಿದೆ. ಕಾರ್ಮಿಕ, ಕೈಗಾರಿಕೆ, ಮೀನುಗಾರಿಕೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಸೂಕ್ತ ದಾಖಲೆಗಳು ಅಧಿಕಾರಿಗಳ ಕೈಸೇರಿದ ಬಳಿಕವೂ ಆಗಿಂದಾಗ್ಗೆ ಅವರು ಕೆಲಸ ನಿರ್ವಹಿಸುವ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದರು.

ಹೊರ ರಾಜ್ಯಗಳಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಕಾನೂನು ಬಾಹಿರವಾಗಿ ಮೀನುಗಾರಿಕೆ ಬೋಟ್‌ಗಳು ಬಂದ ಸಂದರ್ಭದಲ್ಲಿ ಕಾನೂನಿನ ಅನ್ವಯ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದನ್ನು ಮಾಡುವುದನ್ನು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

Advertisement

ಮನೆಯ ಮಾಲಕರು ತಮ್ಮ ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳುವುದು ಸೂಕ್ತ. ಕಾರ್ಮಿಕ, ಉದ್ಯೋಗ ಪರ ಸಂಘಟನೆಗಳು ಸಹ ಅಕ್ರಮ ವಿದೇಶಿ ವಲಸಿಗರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.

ಮೀನುಗಾರಿಕೆ ಬಂದರಿನಲ್ಲಿ ನಿಗದಿತ ಸೂಕ್ತ ಸ್ಥಳಗಳಲ್ಲಿ ಸಿಸಿಟಿವಿ ಕೆಮರಾಗಳನ್ನು ಆಳವಡಿಸಬೇಕು ಎಂದು ಬಂದರು ಹಾಗೂ ಸಿ.ಆರ್‌.ಝೆಡ್‌ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌ ಮಾತನಾಡಿ, ಕೆಲಸ ಕಾರ್ಯಗಳಿಗೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಮೊದಲು ಅವರ ಪೂರ್ವಾಪರ ಮಾಹಿತಿ ಹಾಗೂ ಅವರ ಗುರುತಿನ ಚೀಟಿಯನ್ನು ಪಡೆದುಕೊಳ್ಳುವುದರ ಜತೆಗೆ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು. ಒಂದೊಮ್ಮೆ ಕಾನೂನು ಬಾಹಿರ ವ್ಯಕ್ತಿಗಳನ್ನು ಕೆಲಸಕ್ಕೆ ತೊಡಗಿಸಿಕೊಂಡ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕರ ಜತೆಗೆ ನೇಮಿಸಿಕೊಂಡ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.

ಆಧಾರ್‌ ಕಾರ್ಡ್‌ ಮೂಲವನ್ನು ಪರಿಶೀಲಿಸುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್‌ ಎಚ್‌.ಎನ್‌., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್‌ ಷಾ ಅಲ್ತಾಫ್ ಅಹಮದ್‌, ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್‌ ವಿ. ನಾಯಕ್‌, ವಿವಿಧ ಸಂಘಟನೆಗಳ-ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next