Advertisement

ಮರಳು ಸಮಸ್ಯೆ: ನ. 10ರಂದು ಉಡುಪಿ ಜಿಲ್ಲೆ ಬಂದ್‌

10:57 AM Nov 01, 2018 | |

ಉಡುಪಿ: ಮರಳುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವವರೆಗೆ ಅನಿರ್ದಿಷ್ಟಾವಧಿ ಧರಣಿ ಕೈಬಿಡುವುದಿಲ್ಲ. ನ. 10ರಂದು ಉಡುಪಿ ಜಿಲ್ಲಾ ಬಂದ್‌ಗೆ ಕರೆ ನೀಡುತ್ತಿದ್ದೇವೆ ಎಂದು ಶಾಸಕ ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮರಳು ಮುಷ್ಕರದ ಏಳನೇ ದಿನವಾದ ಬುಧವಾರ ಸರ್ವ ಸಂಘಟನೆಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್‌ಝಡ್‌ ಮತ್ತು ನಾನ್‌ ಸಿಆರ್‌ಝಡ್‌ ವ್ಯಾಪ್ತಿಯ ಎಲ್ಲ 171 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯಲು ಅನುಮತಿ ನೀಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಆದರೆ ಜಿಲ್ಲಾಧಿಕಾರಿಗಳು ಮರಳು ಸಮಸ್ಯೆಯನ್ನು ಕಗ್ಗಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆ ನ. 10ರಂದು ಜಿಲ್ಲಾ ಬಂದ್‌ ಮಾಡಲಾಗುವುದು. ಆ ಬಳಿಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಅಂಗಡಿ ಮುಂಗಟ್ಟುಗಳು, ಸಾರಿಗೆ ವ್ಯವಸ್ಥೆ, ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ ಎಂದರು.

ಕಗ್ಗಂಟಾಗಿಸುವ ಯತ್ನ
ಅ. 25ರಂದು ಪ್ರತಿಭಟನೆ ಆರಂಭಿಸಿದಾಗ ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಬೇರೆ ಮರಳು ದಿಬ್ಬಗಳನ್ನು ಗುರುತಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದಿದ್ದರು. ಇದರಲ್ಲಿ 2011ರ ಪೂರ್ವ ಮತ್ತು ಅನಂತರದ ಯಾವುದೇ ವಿಚಾರವನ್ನು ಪ್ರಸ್ತಾವಿಸಿಲ್ಲ. ಅ. 26ರಂದು ಅಪರ ಜಿಲ್ಲಾಧಿಕಾರಿಗಳು “ರಾಜ್ಯ ಸರಕಾರದಿಂದ ಆದೇಶ ಬಂದಿದೆ, 2011ರ ಪೂರ್ವದ 93 ಮಂದಿಗೆ ಮಾತ್ರ ಮರಳು ತೆಗೆಯಲು ಪರವಾನಿಗೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ. ಇದೆಲ್ಲ ಪರಿಸ್ಥಿತಿಯನ್ನು ಕಗ್ಗಂಟು ಮಾಡುವ ಯತ್ನವೆಂದು ಭಟ್‌ ಆರೋಪಿಸಿದರು.

ಜಿಲ್ಲಾಡಳಿತ ಅನುಷ್ಠಾನ ಮಾಡಿಲ್ಲ
ಮರಳು ಸಮಸ್ಯೆಯಲ್ಲಿ ಸಿಎಂ ನೀಡಿದ ಸೂಚನೆಯನ್ನು ಜಿಲ್ಲಾಡಳಿತ ಅನುಷ್ಠಾನ ಮಾಡಿಲ್ಲ. ಅ. 15ರೊಳಗೆ ಮರಳು ಸಮಸ್ಯೆ ಇತ್ಯರ್ಥ ಮಾಡು ವುದಾಗಿ ಸರಕಾರ ಮತ್ತು ಜಿಲ್ಲಾಡಳಿತ ತಿಳಿಸಿತ್ತು. ಈಗ ಈ ಕಾರ್ಯ ನಡೆಯದಕ್ಕೆ ಜಿಲ್ಲಾಧಿಕಾರಿಯನ್ನು ಹೊಣೆ ಮಾಡುವುದನ್ನು ಬಿಟ್ಟು ನಮ್ಮ ವಿರುದ್ಧ ಆಕ್ರೋಶ ವ್ಯಕ್ತ ಮಾಡುವುದು ತಪ್ಪು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶಾಸಕರಾದ ಲಾಲಾಜಿ ಮೆಂಡನ್‌, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಜಿ.ಪಂ. ಉಪಾಧ್ಯಕ್ಷೆ ಶಿಲ್ಪಾ ಶೆಟ್ಟಿ, ಹೊಯಿಗೆ ದಕ್ಕೆ ಮಾಲಕರ ಸಂಘ ಅಧ್ಯಕ್ಷ ಸುಧಾಕರ್‌ ಅಮೀನ್‌, ಶ್ಯಾಮಲಾ ಕುಂದರ್‌ ಪತ್ರಿಕಾಗೋಷ್ಠಿಯಲ್ಲಿದ್ದರು. 

ಧರಣಿ ಸ್ಥಳದಲ್ಲಿ ರಾಜ್ಯೋತ್ಸವ
ಗುರುವಾರ ಕರ್ನಾಟಕ ರಾಜ್ಯೋತ್ಸವವನ್ನು ಧರಣಿ ಸ್ಥಳದಲ್ಲಿಯೇ ಆಚರಿಸಲಾಗುವುದು.
ರಘುಪತಿ ಭಟ್‌, ಶಾಸಕರು

Advertisement

ಕೇಂದ್ರಕ್ಕೆ ನಿಯೋಗ 
ಕೇಂದ್ರ ಪರಿಸರ ಇಲಾಖೆ  ಜತೆ ನಾವು ಮಾತುಕತೆ ನಡೆಸುತ್ತಿದ್ದು ಸದಾನಂದ ಗೌಡರ ಮೂಲಕ ಸಚಿವರ ಭೇಟಿಗೆ ಪ್ರಯತ್ನಿಸುತ್ತಿದ್ದೇವೆ. ಕೆ. ಜಯಪ್ರಕಾಶ್‌ ಹೆಗ್ಡೆ ಮತ್ತು ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕರ ನಿಯೋಗ ದಿಲ್ಲಿಗೆ ತೆರಳಿ ಈ ಸಂಬಂಧ ಚರ್ಚೆ ನಡೆಸಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next