Advertisement
ಈಗ ಚುನಾವಣೆಯ ಕಾಲದಲ್ಲಿ ಅವರಿಗೆ ವಿಶೇಷಾಧಿ ಕಾರವಿರುತ್ತದೆ, ಜತೆಗೆ ಮತದಾನ ಹೆಚ್ಚಳವಾಗುವಂತೆ ಮಾಡುವ ಹೊಣೆಗಾರಿಕೆಯೂ ಇರುತ್ತದೆ. “ಚುನಾವಣೆ ಎಂದಾಗ ಅಕ್ರಮಗಳನ್ನು ನಡೆಸಲು ಯತ್ನಿಸುವುದು ಸಹಜ, ಇವುಗಳನ್ನು ನಿಯಂತ್ರಿಸಿ ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ಇವೆಲ್ಲವನ್ನು ನಿಭಾಯಿಸುತ್ತೇನೆ’ ಎಂಬ ವಿಶ್ವಾಸ ತಿರುವನಂತಪುರ ಮೂಲದ, 2009ರ ಬ್ಯಾಚ್‌ನ ಈ ಮಹಿಳಾ ಐಎಎಸ್ ಅಧಿಕಾರಿಗೆ ಇದೆ.
Related Articles
ಕಳೆದೊಂದು ವರ್ಷದಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ನಡೆದ ಕೋಮು ಗಲಭೆ, ಸಂಘರ್ಷ, ಅತ್ಯಾಚಾರ ಪ್ರಕರಣ, ಹಿಂದಿನ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಅತಿ ಹೆಚ್ಚು ಮತ ಬಿದ್ದಿರುವುದು, ಮತದಾರರಿಗೆ ಬೆದರಿಕೆಯೊಡ್ಡಿರುವುದು ಹೀಗೆ 23 ಅಂಶಗಳನ್ನು ಗಣಿಸಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗುತ್ತದೆ. 23 ಅಂಶಗಳಲ್ಲಿ ಒಂದು ಅಂಶ ಇದ್ದರೂ ಸೂಕ್ಷ್ಮ- ಅತಿಸೂಕ್ಷ್ಮ ಎಂದು ಪರಿಗಣಿಸುತ್ತೇವೆ. ಈಗಿನ್ನೂ ಇದನ್ನು ಅಂತಿಮಗೊಳಿಸಿಲ್ಲ. ಚುನಾವಣೆ ಸಮೀಪಿಸುವಾಗ ಈ ವರ್ಗೀಕರಣಗಳನ್ನು ಘೋಷಿಸುತ್ತೇವೆ.
Advertisement
ಚುನಾವಣಾ ಆಯೋಗವು ಮದ್ಯ ಮತ್ತು ಹಣ ಬಲವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಅದರ ಪ್ರಕಾರ ಅನುಮತಿ ಇಲ್ಲದೆ ನಗದು ಮತ್ತು ಚುನಾವಣಾ ಸಾಮಗ್ರಿ ಸಾಗಣೆ, ವೇಳೆ ಮೀರಿ ಅಥವಾ ವೇಳೆಗೆ ಮುನ್ನ ತೆರೆಯುವ ಮದ್ಯದಂಗಡಿಗಳ ಮೇಲೆ ಕ್ರಮ ಇತ್ಯಾದಿ ಕಾನೂನು ಕ್ರಮ ವಹಿಸಲಾಗುತ್ತಿದೆ. ಇಂತಹ ಕಾನೂನು ಉಲ್ಲಂಘನೆಯ ನಾಲ್ಕು ಎಫ್ಐಆರ್‌ಗಳನ್ನು ಪೊಲೀಸ್ ಠಾಣೆಗಳಲ್ಲಿ, ಏಳು ಪ್ರಕರಣಗಳನ್ನು ಅಬಕಾರಿ ಕಾಯಿದೆಯಡಿ ದಾಖಲಿಸಲಾಗಿದೆ.
ಸ್ವೀಪ್ – ಮತದಾರ ಜಾಗೃತಿಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ವಾದ ಊರುಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗಾಗಿ ಯಕ್ಷಗಾನ ನಡೆಸಲಾಗು ತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರಿಸ್ಕ್ರಿಪ್ಷನ್ ಚೀಟಿ ಮೇಲೆ ಮತ್ತು ಎಲ್ಲ ಇಲಾಖೆಗಳಿಗೆ ಬರುವ ಅರ್ಜಿಗಳಿಗೆ ಕೊಡುವ ಹಿಂಬರಹಗಳಿಗೆ ಇಲಾಖೆ ಮುದ್ರೆಯೊಂದಿಗೆ “ಮತ ಚಲಾಯಿಸಿ, ಪ್ರಜಾ ಪ್ರಭುತ್ವ ಬೆಳೆಸಿ’ ಎನ್ನುವ ಮುದ್ರೆ ಹಾಕಲಾಗುತ್ತದೆ. ಜಿಲ್ಲೆಯ ಎಲ್ಲ ಗ್ರಾ.ಪಂ., ನಿಗಮ, ಮಂಡಳಿಗಳು ಸೇರಿದಂತೆ ಇಂತಹ ಸುಮಾರು 400 ಮುದ್ರೆಗಳನ್ನು ಸರಬರಾಜು ಮಾಡಲಾಗಿದೆ. ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಮಲ್ಪೆ ಕಡಲ ತೀರದಲ್ಲಿ ಅಂಗವಿಕಲರನ್ನು ಒಳಗೊಳಿಸಿ ಪ್ಯಾರಾಚೂಟ್‌ನಲ್ಲಿ ಮತದಾನ ಜಾಗೃತಿ ಕುರಿತು ಸಂದೇಶ ಸಾರಲಾಗುತ್ತಿದೆ. ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಮತದಾನ ಮಾಡುವಂತೆ ವಿನಂತಿಸುತ್ತಿದ್ದಾರೆ. ಚುನಾವಣೆ ಸಂಬಂಧಿಸಿ ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದರೆ ಸಾರ್ವಜನಿಕರು ದೂರುಗಳನ್ನು ಕಂಟ್ರೋಲ್ ರೂಮ್‌ಗೆ (ಟೋಲ್ ಫ್ರೀ ನಂಬರ್ 1077; 0820-2574802/ 2574360) ಕರೆ ನೀಡಬಹುದು. ಕಂಟ್ರೋಲ್ ರೂಮ್ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಈ ಬಾರಿ ವಿದ್ಯುನ್ಮಾನ ಮತಯಂತ್ರದ ಜತೆಗೆ ಮತದಾರ ತನ್ನ ಮತ ಸರಿಯಾಗಿ ಚಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಲು ವಿವಿ ಪ್ಯಾಟ್ ಯಂತ್ರಗಳಿರುತ್ತವೆ. ಇದರ ಬಗೆಗೆ ಗ್ರಾ.ಪಂ. ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಎ. 8ರಂದು ಮತದಾರರ ಪಟ್ಟಿಯ ವಿಶೇಷ ಅಭಿಯಾನ “ಮಿಂಚಿನ ನೋಂದಣಿ’ಯನ್ನು ಎಲ್ಲ ತಾಲೂಕುಗಳಲ್ಲಿ ಮತಗಟ್ಟೆ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ಹೊಸ ಹೆಸರು ಸೇರ್ಪಡೆ, ಹೆಸರು ತೆಗೆಯುವಿಕೆ, ತಿದ್ದುಪಡಿಗಳಿಗೆ ಅವಕಾಶವಿದೆ. ಎ. 14ರ ವರೆಗೂ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಮಾನವಶಕ್ತಿ, ಖರ್ಚು, ಪರಿಣಾಮ…
ಚುನಾವಣಾ ಸಿಬಂದಿ ಮತ್ತು ಭದ್ರತಾ ಸಿಬಂದಿ ಸೇರಿದಂತೆ ಸುಮಾರು 10,000 ಸಿಬಂದಿ ಕೇವಲ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರಲ್ಲಿ ಹಿರಿಯ ಅಧಿಕಾರಿಗಳ ಶ್ರಮ ಸುಮಾರು 45 ದಿನಗಳ ಕಾಲವೂ ವಿನಿಯೋಗವಾಗುತ್ತದೆ. ಅಧಿಕೃತವಾಗಿ 70 ಲ. ರೂ. ಖರ್ಚು ತಗಲುತ್ತದೆ ಎಂದು ಹೇಳಿದರೂ ಬಹುತೇಕ ಇಲಾಖೆಗಳ ಕೆಲಸ 45 ದಿನಗಳ ಕಾಲ ಸ್ಥಗಿತಗೊಳ್ಳುವುದರಿಂದ ಅದನ್ನೂ ಪರಿಗಣಿಸುವುದಾದರೆ ಚುನಾವಣೆಗಾಗಿ ಸರಕಾರ ಮಾಡುವ ಖರ್ಚು ಅಪಾರ. ಇವು ನಮ್ಮ ತೆರಿಗೆಯ ಹಣ. ಉಡುಪಿ ಜಿಲ್ಲೆಯಲ್ಲಿ 9.78 ಲಕ್ಷ ಮತದಾರರಿದ್ದಾರೆ. ಹೀಗೆ ತಲಾವಾರು ಮತದಾರರ ಮೇಲೆ ಖರ್ಚಾಗುವ ಮೊತ್ತ ಸಾರ್ಥಕವಾಗಬೇಕಾದರೆ ಅರ್ಹ ಮತದಾರರೆಲ್ಲರೂ ಮತದಾನವನ್ನು ಮಾಡಬೇಕಾಗಿದೆ. ಚುನಾವಣಾ ಫ್ಲೆಕ್ಸ್, ಬ್ಯಾನರ್‌ಮುಕ್ತ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆಗೆ ಸಂಬಂಧಿಸಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಹಾಕಲು ಬಿಡುತ್ತಿಲ್ಲ. ಉಡುಪಿ ನಗರವು ಈ ವಿಷಯದಲ್ಲಿ ಅಧಿಸೂಚಿತ ಪ್ರದೇಶವಾದರೂ ಸೀಮಿತ ಅವಕಾಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಅವಕಾಶ ಕೊಡುವುದು ಕಷ್ಟ. ಎಷ್ಟೇ ಕಾನೂನುಬದ್ಧವಾಗಿ ಅನುಮತಿ ಕೊಟ್ಟರೂ ತಮಗೆ ಸಿಗಲಿಲ್ಲ ಎಂಬ ದೂರುಗಳು ಬರುತ್ತವೆ. ಆದ್ದರಿಂದ ರಾಜಕೀಯ ಪಕ್ಷಗಳ ಸಭೆಯಲ್ಲಿ ಯಾರಿಗೂ ಅನುಮತಿ ಕೊಡದಂತೆ ನಿರ್ಣಯಿಸಲಾಯಿತು. ಯಾರಿಗೂ ಕೊಡದಿರುವ ನೀತಿಯನ್ನು ಎಲ್ಲ ಪಕ್ಷಗಳೂ ಒಪ್ಪಿಕೊಂಡಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಆ ಕಾರ್ಯಕ್ರಮ ನಡೆಯುವ ಎರಡು ಗಂಟೆ ಮೊದಲು ಫ್ಲೆಕ್ಸ್, ಬ್ಯಾನರ್ ಹಾಕಿ ಕಾರ್ಯಕ್ರಮ ಮುಗಿದ ಎರಡು ಗಂಟೆಗಳಲ್ಲಿ ತೆಗೆಯಬೇಕು. ಇದನ್ನು ಚುನಾವಣಾ ವೆಚ್ಚದ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ. – ಮಟಪಾಡಿ ಕುಮಾರಸ್ವಾಮಿ