ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ 191 ಬಿಎಸ್‌ಎನ್‌ಎಲ್ ಟವರ್‌ಗಳಿದ್ದು, ಅವುಗಳ ಪೈಕಿ ಬಹಳಷ್ಟು ಟವರ್‌ಗಳು 3ಜಿಯಿಂದ 4ಜಿಗೆ ಮೇಲ್ದರ್ಜೆಗೇರಲು ವಿಳಂಬವಾಗುತ್ತಿವೆ. ಈ ಕಾರ್ಯವನ್ನು ಆದಷ್ಟು ಬೇಗ ಮಾಡಬೇಕು ಹಾಗೂ ಟವರ್ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಇಲ್ಲವಾದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ
ಪೂಜಾರಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ನಡೆದ ಬಿಎಸ್‌ಎನ್‌ಎಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸುಮಾರು 60ಕ್ಕೂ ಅಧಿಕ ಟವರ್‌ಗಳಿಗೆ ಬ್ಯಾಟರಿ ಕೊರತೆಯಿಂದ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿವೆ. ಕೆಲವು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆ, ಗುತ್ತಿಗೆದಾರರ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಗಮನ ಹರಿಸಬೇಕು ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಹೊಸ ಬ್ಯಾಟರಿಗಳು ಬಂದಿವೆ. ಆದರೆ ಅಳವಡಿಸಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದಾಗ ಸಂಸದರು ಆಕ್ಷೇಪಿಸಿ ಬ್ಯಾಟರಿ ಬಂದರೂ ಅಳವಡಿಸದೆ ಇರುವುದಕ್ಕೆ ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಸಹಾಯಕ ಎಂಜಿನಿಯರ್ ಜನಾರ್ದನ, ಗುತ್ತಿಗೆದಾರರು ವಿಳಂಬ ಧೋರಣೆ ಹೊಂದಿದ್ದಾರೆ. ಇದರಿಂದ ಸಾಕಷ್ಟು ತೊಂದರೆಗಳಾಗಿವೆ ಎಂದರು. ಅಗತ್ಯವಿದ್ದರೆ ಪ್ರಕರಣ ದಾಖಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
ಸುಮಾರು 30ಕ್ಕೂ ಹೆಚ್ಚು ಹೊಸ ಟವರ್‌ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಎಲ್ಲ ಟವರ್‌ಗಳಿಗೂ ತತ್‌ಕ್ಷಣ ಅನುಮತಿ ನೀಡುವಂತೆ ಸೂಚನೆ ನೀಡಿದರು. ಬಿಎಸ್‌ಎನ್‌ಎಲ್ ಖಾಸಗಿ ಕಂಪೆನಿಗಳಿಗೆ ಸಡ್ಡು ಹೊಡೆಯುವಂತೆ ಬೆಳೆಯಬೇಕು. ಆಗ ಮಾತ್ರ ಜನರಿಗೆ ವಿಶ್ವಾಸ ಬರಲು ಸಾಧ್ಯ. ಎಲ್ಲ ಅಧಿಕಾರಿ ಗಳು ಒಟ್ಟಾಗಿ ಈ ಕುರಿತು ಕೆಲಸ ಮಾಡಿ ಹಳ್ಳಿ ಹಳ್ಳಿಗೂ ನೆಟ್‌ವರ್ಕ್ ಸಂಪರ್ಕ ಸಿಗುವಂತೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಬಿಎಸ್‌ಎನ್‌ಎಲ್, ಡಿಜಿಎಂ ನವೀನ್ ಗುಪ್ತ, ಎಜಿಆರ್‌ಎಂ ಬಿಂಧು ಮುರಳೀಧರ್ ಮೊದಲಾದವರು ಉಪಸ್ಥಿತರಿದ್ದರು.