Advertisement

ಉಡುಪಿಯ ಹೆದ್ದಾರಿಯಲ್ಲಿ 30 ಬ್ಲಾಕ್‌ ಸ್ಪಾಟ್‌ : ಅಪಘಾತವಾದರೆ ಅಧಿಕಾರಿಗಳೇ ಹೊಣೆ

09:37 AM Sep 15, 2022 | Team Udayavani |

ಉಡುಪಿ : ಜಿಲ್ಲೆಯಲ್ಲಿ 30ಕ್ಕೂ ಅಧಿಕ ಅಪಘಾತ ವಲಯ (ಬ್ಲಾಕ್‌ ಸ್ಪಾಟ್‌)ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ, ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು ತತ್‌ಕ್ಷಣದಲ್ಲಿ ತಾತ್ಕಾಲಿಕ/ಶಾಶ್ವತ ಸುರಕ್ಷೆ ಕಾರ್ಯಗಳನ್ನು ಕೈಗೊಂಡು ಸಂಭಾವ್ಯ ಅಪಘಾತಗಳನ್ನು ತಪ್ಪಿಸಬೇಕು. ಹಾಗೆಯೇ ವಾರದೊಳಗೆ ವರದಿಯನ್ನು ಜಿಲ್ಲಾ ರಸ್ತೆ ಸುರಕ್ಷತ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಸೂಚನೆ ನೀಡಿದರು.

Advertisement

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಇಂದ್ರಾಳಿ ರೈಲ್ವೇ ಮೇಲ್ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅ. 1ರಂದು ಆರಂಭಿಸಿ ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಒಂದು ಬದಿಯ ರಸ್ತೆಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ವನ್ನು ರಾ.ಹೆ. ಪ್ರಾಧಿಕಾರದ ಅಧಿಕಾರಿ ಗಳು ಕೈಗೊಳ್ಳಬೇಕು. ಕಾಮಗಾರಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಪೊಲೀಸ್‌ ಇಲಾಖೆ, ನಗರಸಭೆ ಹಾಗೂ
ರೈಲ್ವೇ ಇಲಾಖೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಂಡು ಅಪಘಾತದ ಪ್ರಮಾಣವನ್ನು ಅತ್ಯಂತ ಕಡಿಮೆ ಗೊಳಿಸಬೇಕು. ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸುವಾಗ ನಿಯಮ ಗಳನ್ನು ತಪ್ಪದೇ ಪಾಲಿಸಬೇಕು. ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೂಚನ ಫಲಕಗಳನ್ನು ಅಳವಡಿಸಬೇಕು ಹಾಗೂ ಹಂಪ್ಸ್‌, ಕ್ಯಾಟ್‌ ಐ, ಪಾದಚಾರಿ ಮಾರ್ಗದ ಲೈನ್‌ ಸೇರಿದಂತೆ ಮತ್ತಿತರ ಸೂಚನೆಗಳನ್ನು ತಪ್ಪದೆ ಅಳವಡಿಸಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತ ರವಿಕುಮಾರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್‌, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ., ರಾ.ಹೆ. ಪ್ರಾಧಿಕಾರದ ಅಭಿಯಂತ ನಾಗರಾಜ್‌ ಉಪಸ್ಥಿತರಿದ್ದರು.

ಅಪಘಾತವಾದರೆ ಅಧಿಕಾರಿಗಳೇ ಹೊಣೆ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚೀಂದ್ರ ಮಾತನಾಡಿ, ರಾ.ಹೆ.ಯಲ್ಲಿ ಈ ಹಿಂದೆಯೇ ಅಪಘಾತ ವಲಯ ಸ್ಥಳಗಳನ್ನು ಗುರುತಿಸಿ, ಅಗತ್ಯ ವೈಜ್ಞಾನಿಕ ಕಾರ್ಯಗಳನ್ನು ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿ ಆಗದೇ ಇರುವ ಬಗ್ಗೆ ಸಮಿತಿಯ ಗಮನಕ್ಕೆ ತಂದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಸ್ಥಳದಲ್ಲಿ ಅಪಘಾತಗಳು ಸಂಭವಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಅಪರಾಧಿಗಳನ್ನಾಗಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ರಸ್ತೆ ನಿಯಮಗಳ ಉಲ್ಲಂಘನೆಯ 42,944 ಪ್ರಕರಣಗಳಲ್ಲಿ 1.96 ಕೋ.ರೂ.ಗಳಿಗೂ ಹೆಚ್ಚು ದಂಡ ಸಂಗ್ರಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next