ಕಟಪಾಡಿ: ಎಡೆಬಿಡದೆ ಸುರಿದ ಮಳೆಯಿಂದಾಗಿ ಮಟ್ಟುವಿನಲ್ಲಿ ಹರಿಯುತ್ತಿದ್ದ ಪಿನಾಕಿನಿ ಹೊಳೆಯು ಉಕ್ಕೇರಿ ಹರಿದ ಪರಿಣಾಮ ಮಟ್ಟು ನದಿ ಪಾತ್ರದಲ್ಲಿ ಸುಮಾರು 70 ಬೆಳೆಗಾರರು ಬೆಳೆದ ಜಿ.ಐ. ಮಾನ್ಯತೆ ಪಡೆದಿರುವ ಮಟ್ಟುಗುಳ್ಳದ ಬೆಳೆ ಹಾನಿಗೀಡಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿತ್ತು.
ಈ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ತೋಟಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆಗಾರರ ಸಂಕಷ್ಟವನ್ನು ಆಲಿಸಿ, ಬೆಳೆ ಹಾನಿಯನ್ನು ಪರಿಶೀಲನೆಯನ್ನು ನಡೆಸಿದರು.
ಮಟ್ಟುಗುಳ್ಳದ ಬೆಳೆಗಾಗಿ ಕಳೆದ ಎರಡು ತಿಂಗಳುಗಳ ಪರಿಶ್ರಮ ಮತ್ತು ತಮಗಾದ ನಷ್ಟದ ಬಗ್ಗೆ ಬೆಳೆಗಾರರು ಜಿಲ್ಲಾಧಿಕಾರಿ ಅವರ ಗಮನ ಸೆಳೆದಿದ್ದರು. 20 ದಿನಗಳೊಳಗಾಗಿ ಮಟ್ಟುಗುಳ್ಳದ ಫಸಲು ಕೈ ಸೇರಲು ಸಿದ್ಧವಾಗಿರುವ ನಡುವೆಯೇ ಮಟ್ಟುಗುಳ್ಳದ ಬೆಳೆ ಪ್ರವಾಹದಿಂದ ಹಾನಿಗೀಡಾಗಿದೆ. ಈಗಾಗಲೇ ಮಲ್ಚಿಂಗ್ ಶೀಟ್, ಗೊಬ್ಬರ, ಸಸಿ ಸಹಿತ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟವಾಗಿದ್ದು, ಇನ್ನು ಸಸಿ ಮಾಡಿ, ಮರು ಗೊಬ್ಬರ ಹಾಕಿ, ಮತ್ತೆ ನಾಟಿ ಮಾಡಬೇಕಾದ ಪ್ರಮೇಯ ಬಂದೊದಗಿದೆ ಎಂದು ಮನವರಿಕೆ ಮಾಡಿದರು. ಆ ನಿಟ್ಟಿನಲ್ಲಿ ಬೆಳೆ ನಷ್ಟಕ್ಕೆ ಹೆಚ್ಚಿನ ಮೊತ್ತದ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ನನಸಿನತ್ತ ಗಂಗೊಳ್ಳಿ -ಕುಂದಾಪುರ ಸೇತುವೆ ಕನಸು
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಎಷ್ಟು ಬೆಳೆಗಾರರ ಮತ್ತು ಎಷ್ಟು ಬೆಳೆಹಾನಿ ಸಂಭವಿಸಿದೆ ಎಂಬ ಬಗ್ಗೆ ನೈಜ ಬೆಳೆ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರಕಾರದಿಂದ ವಿಶೇಷವಾಗಿ ಪ್ಯಾಕೇಜ್ ಬಂದಲ್ಲಿ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಎನ್.ಡಿ.ಆರ್.ಎಫ್ ಮಾರ್ಗದರ್ಶನದಡಿ ಮಾತ್ರ ಪರಿಹಾರ ಹಣ ಕೊಡಲು ಸಾಧ್ಯ ಎಂದರು.
ಈ ಸಂದರ್ಭ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕಿ ಭುವನೇಶ್ವರೀ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಕುಮಾರ್, ಸಹಾಯಕ ಪ್ರಭಾರ ತೋಟಗಾರಿಕಾ ಅ„ಕಾರಿ ಶ್ವೇತಾ ಹಿರೇಮಠ್, ಸಿಡಿಪಿಒ ಇಲಾಖೆಯ ವೀಣಾ, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಗ್ರಾಮ ಲೆಕ್ಕಿಗ ಲೋಕನಾಥ ಲಮಾಣಿ, ಮಾಜಿ ಜಿ.ಪಂ. ಸದಸ್ಯೆ ಸರಸು ಡಿ. ಬಂಗೇರ, ಕೋಟೆ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ, ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ನಿ.ಪೂ. ಸದಸ್ಯರುಗಳು, ಮಟ್ಟುಗುಳ್ಳ ಬೆಳೆಗಾರರ ಸಂಘದ ನಿರ್ದೇಶಕರುಗಳಾದ ನಾಗರಾಜ ಮಟ್ಟು, ಯಶೋಧರ್, ದೇವೇಂದ್ರ, ಸಂತೋಷ್, ಪ್ರದೀಪ್, ಶರತ್, ಪ್ರಬಂಧಕ ಲಕ್ಷ್ಮಣ್ ಮಟ್ಟು, ಹಾಗೂ ಮಟ್ಟುಗುಳ್ಳ ಬೆಳೆಗಾರರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು