ಉಡುಪಿ: ಹಿರಿಯಡಕ ಸ್ವರ್ಣ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿದವರ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ಯಾವುದೇ ತೆರನಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿಕೆ ನೀಡಿದ್ದಾರೆ.
ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆಂದು ಜಿಲ್ಲಾಧಿಕಾರಿ ಸಹಿತ ಹತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾದ ಬಳಿಕ ಜಿಲ್ಲಾಧಿಕಾರಿಗಳು ಮಾಧ್ಯಮಗಳ ಜೊತೆ ಮಾತನಾಡಿದರು.
ನಗರಸಭೆಯಿಂದ ಕರೆಯಲಾಗಿದ್ದ ಟೆಂಡರ್ ಮಾರ್ಚ್ ಮೊದಲ ವಾರಕ್ಕೆ ಮುಗಿದಿದೆ. ಇದರ ಕುರಿತು ಟೆಂಡರುದಾರರಿಗೆ ನಗರಸಭೆ ಆಯುಕ್ತರು ಸೂಚನೆ ನೀಡಿದ್ದಾರೆ. ಸರ್ಕಾರದ ಟೆಂಡರ್ ಅವಧಿ ಮುಗಿದ ನಂತರ ಲಾಕ್ ಡೌನ್ ಸಮಯದಲ್ಲಿ ಕಾನೂನುಬಾಹಿರವಾಗಿ ಸ್ವರ್ಣ ನದಿಯಲ್ಲಿ ಹೂಳು ತೆಗೆದಿದ್ದಾರೆ. ಮರಳನ್ನು ಲೂಟಿ ಹೊಡೆದಿದ್ದಾರೆ. ಅಂತಹವರ ಮೇಲೆ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಿದೆ ಎಂದರು.
ಮರಳು ಲೂಟಿ ಮಾಡಿದವರ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದೇವೆ. ಐದು ವಾಹನಗಳನ್ನು ಜಪ್ತಿ ಮಾಡಿದ್ದೇವೆ. ನಿರ್ಲಕ್ಷ್ಯ ತೋರಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ತಿಳಿಸಿದ್ದೇವೆ. ಜಿಲ್ಲಾಡಳಿತದಿಂದ ಏನೆಲ್ಲಾ ಮಾಡಬಹುದು ಅದೆಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದರು.
ಗುರುವಾರ ಮತ್ತೆ ಮರಳು ಲೂಟಿಯ ಬಗ್ಗೆ ಮಾಹಿತಿ ಬಂದಿದ್ದು, ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲು ಭೇಟಿ ನೀಡಿದ್ದಾರೆ. ಎಲ್ಲಾ ಮಾಹಿತಿಗಳನ್ನು ಲೋಕಾಯುಕ್ತಕ್ಕೆ ನಾವು ನೀಡಿದ್ದೇವೆ. ಲೋಕಾಯುಕ್ತ ಮುಂದೆ ತೆಗೆದುಕೊಳ್ಳುವ ನಿರ್ಧಾರವನ್ನು ಜಿಲ್ಲಾಡಳಿತ ಸ್ವಾಗತಿಸುತ್ತದೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ ಎಂದರು.
ದೂರು ದಾಖಲಾದ ಕುರಿತು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಏನೆಲ್ಲಾ ಕೆಲಸ ಮಾಡುಬಹದು ಅದೆಲ್ಲವನ್ನೂ ಮಾಡಿದ್ದೇವೆ. ಕೋವಿಡ್ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ನದಿಗಳ ಮರಳನ್ನು ಕಾಯಲು ಜಿಲ್ಲಾಧಿಕಾರಿಗಳಿಗೆ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಅವರು ಕರ್ತವ್ಯ ಲೋಪ ಮಾಡಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.