ಉಡುಪಿ: HIV ಪೀಡಿತರು ಸರಕಾರದ ಸೌಲಭ್ಯಗಳಿಗಾಗಿ ಇಲಾಖೆಗಳಿಗೆ ಅಲೆಯುವ ಬದಲು ತಾವು ಚಿಕಿತ್ಸೆ ಪಡೆಯುವ ART ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ, ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು. ಅವರು ಸೋಮವಾರ ಜಿಲ್ಲೆಯ HIV ಸೋಂಕು ಪೀಡಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. HIV ಪೀಡಿತರು ಸರಕಾರಿ ಸೌಲಭ್ಯಗಳಿಗೆ ಕಚೇರಿಗಳಿಗೆ ತೆರಳಿದಾಗ ಸೋಂಕು ಬಹಿರಂಗವಾಗುವ ಸಾಧ್ಯತೆ ಇದೆ. ಅವರು ಕಚೇರಿಗೆ ಅಲೆದಾಡುವುದು ತ್ರಾಸದಾಯಕವಾಗಿದ್ದು, ಇದನ್ನು ತಪ್ಪಿಸಲು ART ಸೆಂಟರ್ ಗಳಲ್ಲಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ಸೌಲಭ್ಯಗಳ ಮಂಜೂರು ಕೋರಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಸಾಲ ಮನ್ನಾ ಕೋರಿಕೆ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದದಿಂದ ಧನಶ್ರೀ ಯೋಜನೆಯಡಿ 2016- 17ರಲ್ಲಿ 26 ಮಂದಿಗೆ ಮತ್ತು 2017- 18ರಲ್ಲಿ ಅರ್ಜಿ ಸಲ್ಲಿಸಿರುವ 38 ಮಂದಿಗೆ ಸಾಲ ಮಂಜೂರು ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ತಿಳಿಸಿದರು. ಹೆಚ್ಚಿನ ಸೋಂಕು ಪೀಡಿತರು ಅನಾರೋಗ್ಯ ಕಾರಣದಿಂದ ಸಾಲ ಮರುಪಾವತಿ ಮಾಡಲು ಶಕ್ತರಿಲ್ಲ. ಹೀಗಾಗಿ ಕೃಷಿ ಸಾಲ ಮನ್ನಾ ರೀತಿ ತಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಸೋಂಕು ಪೀಡಿತರು ಜಿಲ್ಲಾಧಿಕಾರಿಗಳನ್ನು ಕೋರಿದರು. ಈ ಕುರಿತಂತೆ ನಿಗಮಕ್ಕೆ ಪತ್ರ ಬರೆಯುವಂತೆ ಡಿಸಿ ಸೂಚಿಸಿದರು.
ವಸತಿ ಸೌಲಭ್ಯ: ವಿಶೇಷ ವರ್ಗ ಯೋಜನೆಯಡಿ HIV ಪೀಡಿತ ಕುಟುಂಬದವರಿಗೆ ಜಿಲ್ಲಾಡಳಿತ ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಯೋಗದಲ್ಲಿ, 2014-15ರಲ್ಲಿ 36 ಮಂದಿಗೆ 2016-17ರಲ್ಲಿ 63 ಮಂದಿಗೆ, 2017-18ರಲ್ಲಿ 33 ಮಂದಿಗೆ ವಸತಿ ಸೌಲಭ್ಯ ನೀಡಲಾಗಿದೆ. ಅರ್ಹರಿಗೆ ನಿವೇಶನ ಗುರುತಿಸುವ ಕುರಿತಂತೆ ಹಾಗೂ RTCಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ನಿವೇಶನರಹಿತರು ಮತ್ತು ವಸತಿ ರಹಿತರ ಸಮೀಕ್ಷೆ ನಡೆಯುತ್ತಿದ್ದು, ನಿವೇಶನ ಮತ್ತು ವಸತಿ ರಹಿತ ಎಲ್ಲ HIV ಸೋಂಕಿತರು ಸಂಬಂಧಪಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಸರು ಸೇರಿಸುವಂತೆ ತಿಳಿಸಿದರು. ಉಡುಪಿ ಹಾಗೂ ಕುಂದಾಪುರದ ART ಸೆಂಟರ್ ಗಳಲ್ಲಿ HIV ಸೋಂಕು ಪೀಡಿತರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಖಾಸಗಿ ಬಸ್ ಗಳಲ್ಲಿ ಸೋಂಕಿತರಿಗೆ ನೀಡುತ್ತಿರುವ ರಿಯಾಯಿತಿ ಬಸ್ ಪಾಸ್‌ನಲ್ಲಿ ಸೋಂಕಿನ ಕುರಿತು ಗೌಪ್ಯತೆ ಕಾಪಾಡುವಂತೆ RTA ಅಧಿಕಾರಿಗೆ ಸೂಚಿಸಿದರು. ಜಿಲ್ಲೆಯ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ನೌಕರರ ನೇಮಕ ಸಂದರ್ಭ ಲಿಂಗತ್ವ ಅಲ್ಪಸಂಖ್ಯಾಕರಿಗೆ ಆದ್ಯತೆ ನೀಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರೋಹಿಣಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಉಪಸ್ಥಿತರಿದ್ದರು.