Advertisement

ಹೈರಿಸ್ಕ್ ಸಮಯ; ಒಮ್ಮೆಲೆ ದಿನಸಿಗೆ ಧಾವಿಸದಿರಿ: ಡಿಸಿ

10:28 AM Apr 01, 2020 | sudhir |

ಉಡುಪಿ: ಒಂದೇ ಬಾರಿ ಅಂಗಡಿಗಳಿಗೆ ಸಾಮಗ್ರಿಗಳಿಗಾಗಿ ಧಾವಿಸಬೇಡಿ. ಇದೀಗ ಹೈರಿಸ್ಕ್ ಸಮಯ. ಮನೆಯಲ್ಲಿರುವ ಸಾಮಗ್ರಿಗಳಲ್ಲೇ ಹೊಂದಾಣಿಕೆ ಮಾಡಿಕೊಳ್ಳಿ. ತುರ್ತು ಅಗತ್ಯ ವಸ್ತುಗಳಿಗೆ ಮಾತ್ರ ಅಂಗಡಿಗಳಿಗೆ ಬನ್ನಿ. ಯಾರಿಗೂ ಸಾಮಗ್ರಿಗಳು ಇಲ್ಲವೆಂದಾಗುವುದಿಲ್ಲ. ಇಲ್ಲವಾದರೆ ದ.ಕ. ಜಿಲ್ಲೆಯಂತೆ ಸಂಪೂರ್ಣ ಬಂದ್‌ ಮಾಡಬೇಕಾಗಬಹುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

Advertisement

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಾರ್ವಜನಿಕರು ಪ್ರತೀ ದಿನ ಮನೆಯಿಂದ ಅನಗತ್ಯ ಹೊರಬಂದು ವಸ್ತುಗಳನ್ನು ಖರೀದಿಸದೆ ಅಗತ್ಯವಿದ್ದಾಗ ಮಾತ್ರ ಖರೀದಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ದಿನಸಿ ವಸ್ತು ಪೂರೈಕೆ ಮಾಡುವ ಸಗಟು ವಾಹನಗಳನ್ನು ಎಲ್ಲೂ ತಡೆಹಿಡಿದಿಲ್ಲ, ದಿನಸಿ ಸಾಗಾಟ ವಾಹನಗಳ ಸಂಚಾರವನ್ನು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತಡೆಯದಂತೆ ಆದೇಶವಿದೆ ಎಂದರು.

ದಾನಿಗಳ ನೆರವು
435 ವಲಸೆ ಕಾರ್ಮಿಕರನ್ನು ಶಿಬಿರಗಳಲ್ಲಿ ಇರಿಸಿ ದ್ದೇವೆ. ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದ್ದೇವೆ. ದಾನಿಗಳು, ದೇವಸ್ಥಾನದವರು ಊಟದ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ. ಪ್ರಕಾಶ ಶೆಟ್ಟಿ ಅವರು 5,000 ಕಿಟ್‌, ಜಿ. ಶಂಕರ್‌ 2,000 ಕಿಟ್‌, ಅಂಬಲಪಾಡಿ ದೇಗುಲದವರು ಕೊಡಲು ಮುಂದೆ
ಬಂದಿದ್ದಾರೆ. ಉದಯ ಹೆಗ್ಡೆ ಕುಂದಾಪುರದವರಾದ ಕಾರಣ ಸಹಾಯಕ ಕಮಿಷನರ್‌ ಅವರಿಗೆ ಸಮನ್ವಯ ಗೊಳಿಸಲು ತಿಳಿಸಿದ್ದೇನೆ ಎಂದರು.

ಕಾರ್ಮಿಕರಿಗೆ ವಾಸಇರುವ ಸ್ಥಳ ಮಾಲಕರಲ್ಲಿ 2 ತಿಂಗಳ ಬಾಡಿಗೆ ಕೇಳಬಾರದು ಮತ್ತು ಅವರನ್ನು ತೆರವುಗೊಳಿಸಲು ಹೇಳಬಾರದು ಎಂದು ಜಿಲ್ಲಾಧಿಕಾರಿ ಈಗಾಗಲೇ ಆದೇಶ ನೀಡಿದ್ದಾರೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.
ಮಲ್ಪೆ ಬಂದರಿನಲ್ಲಿ 385 ಕಾರ್ಮಿಕರು ಬಂದಿದ್ದಾರೆ. ಅವರ ವಸತಿ, ಊಟದ ವ್ಯವಸ್ಥೆ ಬೋಟು ಮಾಲಕರದ್ದು. ಇದಕ್ಕೇನಾದರೂ ವ್ಯತಿರಿಕ್ತವಾದರೆ ಬೋಟು ಮಾಲಕರ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

Advertisement

ಕೋವಿಡ್ 19 ದೃಢಪಟ್ಟ ಮಣಿಪುರದ ವ್ಯಕ್ತಿ ಬೇರೆ ಬೇರೆ ಕಡೆ ಓಡಾಡಿರುವುದು ತಿಳಿದುಬಂದಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಸ್ಯಾನಿಟೈಸರ್‌, ಮಾಸ್ಕ್ ಪೂರೈಕೆ
ಸ್ಯಾನಿಟೈಸರ್‌ ಕೊರತೆ ಇರುವುದನ್ನು ಮನಗಂಡು ಲಿಕ್ಕರ್‌ ಫ್ಯಾಕ್ಟರಿಯೊಂದಕ್ಕೆ ನಮ್ಮ ಜಿಲ್ಲೆಗೆ ಮತ್ತು ದ.ಕ. ಜಿಲ್ಲೆಗೆ ಬೇಕಾಗುವಷ್ಟು ಸ್ಯಾನಿಟೈಸರ್‌ ತಯಾರಿಸಿ
ಕೊಡಲು ತಿಳಿಸಿದ್ದೇವೆ. ಮಾಸ್ಕ್ ಕೂಡ ತರಿಸುತ್ತಿದ್ದೇವೆ. ಜಿ. ಶಂಕರ್‌ ಅವರು ಒಂದು ಲಕ್ಷ ಮಾಸ್ಕ್ ತರಿಸಿಕೊಡುತ್ತಾರೆ. ಇನ್ಫೋಸಿಸ್‌ನವರೂ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೀನು ಆಹಾರ ವಸ್ತು. ಮೀನುಗಾರರು ಬುಟ್ಟಿಯಲ್ಲಿ ಮಾರಬಹುದು. ಆದರೆ ಐದು ಜನರು ಸೇರಬಾರದು. ಮಲ್ಪೆ ಬಂದರಿನಲ್ಲಿ ಜನರು ಹೆಚ್ಚಿಗೆ ಸೇರಿ ಗೊಂದಲವಾದ ಕಾರಣ ನಿಷೇಧಿಸಲಾಗಿದೆ. ನಾಡದೋಣಿಗಳನ್ನು ನಿಷೇಧಿಸಿಲ್ಲ ಎಂದರು.

ಮದ್ಯಪಾನಿಗಳಿಗೆ ಕೌನ್ಸೆಲಿಂಗ್‌
ಮದ್ಯಪಾನದ ಅಭ್ಯಾಸವಿದ್ದವರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆಂದು ಗಮನ ಸೆಳೆದಾಗ, ಇಂತಹವರ ಬಗ್ಗೆ ಮನೆಯವರು ಗಮನಕ್ಕೆ ತಂದರೆ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದರು.

ಮಾಸ್ಕ್ ಕಡ್ಡಾಯವಲ್ಲ
ಆರೋಗ್ಯದಿಂದ ಇರುವವರಿಗೆ ಮಾಸ್ಕ್ ಅಗತ್ಯವಿಲ್ಲ. ಶೀತ, ಕೆಮ್ಮು ಇದ್ದವರು, ಕಾಯಿಲೆ ಪೀಡಿತರು ಮಾತ್ರ ರೋಗಾಣುಗಳು ಹರಡಬಾರದು ಎಂಬ ಉದ್ದೇಶಕ್ಕೆ ಧರಿಸದರೆ ಸಾಕು. ಈಗ ಮಾಸ್ಕ್ ಕುರಿತು ತಪ್ಪು ಕಲ್ಪನೆ ಮೂಡಿದೆ ಎಂದು ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದರು.

ಆರು ಗಂಟೆ ಬಳಿಕ ಅದನ್ನು ಬದಲಾಯಿಸಬೇಕು. ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಒಂದು ರೀತಿಯಲ್ಲಿ ಮಾಸ್ಕ್ನಿಂದ ತೊಂದರೆಯೇ ಇದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಬೆಟ್ಟು ಮಾಡಿದರು.

ಪ್ರಯೋಗಾಲಯಕ್ಕೆ ಮತ್ತೆ ಒತ್ತಾಯ
ಮಣಿಪಾಲ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳಿರುವು ದರಿಂದ ಇಲ್ಲಿ ಪ್ರಯೋಗಾಲಯ ಅಗತ್ಯವಿದೆ ಎಂದು ಸರಕಾರಕ್ಕೆ ಮನಗಾಣಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಾಹೆ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್‌ಪಿ ವಿಷ್ಣುವರ್ಧನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next