Advertisement

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

02:13 PM Sep 19, 2024 | Team Udayavani |

ಉಡುಪಿ: ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಬಿರುಕುಬಿಟ್ಟು ಹುಡಿಯಾಗಿರುವುದಿಂದ ಆ್ಯತ್ಲೀಟ್‌ಗಳಿಗೆ ನಿತ್ಯ ಅಭ್ಯಾಸ ಕಷ್ಟವಾಗುತ್ತಿದೆ ಮತ್ತು ಸರಿಪಡಿಸದೆ ಇದ್ದರೆ ಮುಂದೆ ಕ್ರೀಡಾಕೂಟ ಆಯೋಜನೆಯೂ ಕಷ್ಟವಾಗಲಿದೆ.

Advertisement

ಜಿಲ್ಲಾ ಕ್ರೀಡಾಂಗಣವು ಇತ್ತೀಚೆಗೆ ಮೇಲ್ದರ್ಜೆಗೆ ಏರಿಸುವ ಕಾರ್ಯ ಆರಂಭವಾಗಿದೆ. ಸುಮಾರು 75 ಲಕ್ಷ ವೆಚ್ಚದಲ್ಲಿ ಪ್ರವೇಶ ದ್ವಾರದ ಒಳ ಭಾಗದಲ್ಲಿ ಮೇಲ್ಛಾವಣಿ ನಿರ್ಮಾಣ ಮಾಡಲಾಗಿದೆ. ಉಳಿದಂತೆ ಆಸನದ ವ್ಯವಸ್ಥೆ, ಕ್ರೀಡಾಪಟುಗಳಿಗೆ ನಿತ್ಯ ತರಬೇತಿಗೆ ಬೇಕಾದ ವಿವಿಧ ಪರಿಕರ ಇತ್ಯಾದಿಗಳನ್ನು ಪೂರೈಸುವ ಕಾರ್ಯವೂ ನಡೆಯುತ್ತಿದೆ. ಆದರೆ ಸಿಂಥೆಟಿಕ್‌ ಟ್ರ್ಯಾಕ್‌ ಎದ್ದಿರುವುದರಿಂದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಕೂಟ ಆಯೋಜನೆಗೂ ಸಮಸ್ಯೆಯಾಗುತ್ತಿದೆ.

2013ರಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿತ್ತು. ಅಳವಡಿಸುವ ಸಂದರ್ಭದಲ್ಲೇ 10 ವರ್ಷದ ಕಾಲಮಿತಿ ನೀಡಲಾಗಿತ್ತು. ಈಗ ನಿರ್ದಿಷ್ಟ ಕಾಲಮಿತಿ ಮೀರಿದ್ದರೂ ಸಿಂಥೆಟಿಕ್‌ ಟ್ರ್ಯಾಕ್‌ ಬದಲಾವಣೆಯಾಗಿಲ್ಲ. ನಿರಂತರ ಮಳೆಯೂ ಇರುವುದರಿಂದ ಟ್ರ್ಯಾಕ್‌ ದುರಸ್ತಿ ಸಾಧ್ಯವಾಗಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಆದರೆ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ತಿಯೂ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದ(ಗುತ್ತಿಗೆ ಪಡೆದ) ಖಾಸಗಿ ಸಂಸ್ಥೆಯೇ ಮಾಡಬೇಕಿದೆ.

ನಿರಂತರ ಕ್ರೀಡಾಕೂಟ
ಮಳೆ ಮುಗಿಯುತ್ತಿದ್ದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ನಿರಂತರ ಕ್ರೀಡಾಕೂಟಗಳು ನಡೆಯುತ್ತವೆ. ಅಷ್ಟು ಮಾತ್ರವಲ್ಲದೇ ಸರಕಾರಿ ಇಲಾಖೆಗಳ ಕ್ರೀಡಾಕೂಟ, ವಿವಿಧ ಸಂಘಟನೆಗಳ, ಕಾಲೇಜುಗಳ ಕ್ರೀಡಾಕೂಟ ನಡೆಯುತ್ತದೆ. ಈ ಮಧ್ಯೆ ವಿವಿಧ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತರಬೇತಿ ಶಿಬಿರಗಳು ಇಲ್ಲಿ ಆಗುತ್ತಿರುತ್ತದೆ. ಹೀಗಾಗಿ ಜಿಲ್ಲೆಯ ಪ್ರಮುಖ ಕ್ರೀಡಾಂಗಣವೇ ಇದಾಗಿದ್ದರಿಂದ ಆಷ್ಟು ಬೇಗ ಟ್ರ್ಯಾಕ್‌ ದುರಸ್ತಿ ಮಾಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಟಿ

ಪ್ರಸ್ತಾವನೆ ಸಲ್ಲಿಕೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಘಟಕದಿಂದ ಸಿಂಥೆಟಿಕ್‌ ಟ್ರ್ಯಾಕ್‌ ಸರಿಪಡಿಸಲು ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಕೇಂದ್ರ ಕಚೇರಿಯಿಂದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಿದ್ದಾರೆ. ಅನಂತರ ಟ್ರ್ಯಾಕ್‌ ಅಳವಡಿಸಲಿರುವ ಸಂಸ್ಥೆಯ ಪ್ರತಿನಿಧಿಗಳು ಆಗಮಿಸಿ ಅದರ ಉದ್ದಳತೆಯನ್ನು ಪಡೆದುಕೊಂಡು ಹೋಗಿದ್ದಾರೆ. ಆದರೆ ಇನ್ನೂ ಟ್ರ್ಯಾಕ್‌ ಅಳವಡಿಸುವ ಪ್ರಕ್ರಿಯೆ ಶುರುವಾಗಿಲ್ಲ.

Advertisement

ನಿರ್ವಹಣೆಯ ಸಮಸ್ಯೆ
ಜಿಲ್ಲಾ ಕ್ರೀಡಾಂಗಣವಾದರೂ ನಿರ್ವ ಹಣೆಯ ಕೊರತೆ ಎದ್ದು ಕಾಣುತ್ತಿದೆ. ನಿತ್ಯ ವಿವಿಧ ಅಭ್ಯಾಸ ಮಾಡುವವರಿಗೆ ಕನಿಷ್ಠ ವ್ಯವಸ್ಥೆಯನ್ನು ಕಲ್ಪಿಸುವ ಜತೆಗೆ ಕ್ರೀಡಾಂಗಣದ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಆಸನಗಳ ಸ್ವತ್ಛತೆ ಸೇರಿದಂತೆ ಕ್ರೀಡಾಂಗಣದ ಒಳಭಾಗದಲ್ಲಿ ಹುಲ್ಲು ಬೆಳೆದಿರುವುದನ್ನು ಸರಿಯಾಗಿ ಕಟಾವು ಮಾಡದೇ ಇರುವುದು ಮತ್ತು ಅಭ್ಯಾಸದ ನೆಟ್‌ಗಳು ದುರ್ಬಲವಾಗಿರುವುದು ಸೇರಿದಂತೆ ಹಲವು ಸಮಸ್ಯೆಯಿದೆ.

ಮಳೆ ಪೂರ್ಣ ನಿಂತ ಬಳಿಕ ದುರಸ್ತಿ
ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಿ 10 ವರ್ಷ ಆಗಿರುವುದರಿಂದ ಅದನ್ನು ದುರಸ್ತಿಗೊಳಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರಂತೆ ಸಂಬಂಧಪಟ್ಟ ಸಂಸ್ಥೆಯ ಅಧಿಕಾರಿಗಳು ಬಂದು ಉದ್ದಳತೆ ತೆಗೆದುಕೊಂಡು ಹೋಗಿದ್ದಾರೆ. ಮಳೆ ಪೂರ್ಣ ನಿಂತ ಅನಂತರದಲ್ಲಿ ದುರಸ್ತಿ ಕಾರ್ಯ ಆರಂಭಿಸುವ ಸಾಧ್ಯತೆ ಇದೆ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ

ವ್ಯವಸ್ಥಿತ ಶೌಚಾಲಯದ ಕೊರತೆ
ಜಿಲ್ಲಾ ಕ್ರೀಡಾಂಗಣದಲ್ಲಿ ಬಹುಮುಖ್ಯವಾದ ಸಮಸ್ಯೆಯೆಂದರೆ ವ್ಯವಸ್ಥಿತ ಶೌಚಾಲಯ ಇಲ್ಲದೇ ಇರುವುದು. ಈಗಿರುವ ಶೌಚಾಲಯ ಸ್ವತ್ಛವಾಗಿಲ್ಲ ಮತ್ತು ಬಳಸುವ ಸ್ಥಿತಿಯಲ್ಲೂ ಇಲ್ಲ. ಇನ್ನೂ ಕಾರ್ಯಕ್ರಮಗಳು ನಡೆದ ಸಂದರ್ಭದಲ್ಲಂತೂ ಸಾರ್ವಜನಿಕರು, ವಿದ್ಯಾರ್ಥಿಗಳು ಶೌಚಾಲಯದ ಸಮಸ್ಯೆಯಿಂದ ಸಾಕಷ್ಟು ಸಂಕಟ ಎದುರಿಸುವ ಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next