Advertisement

ಉಡುಪಿ: 22 ಮನೆಗಳಿಗೆ ಹಾನಿ: ಕುಂದಾಪುರದ ಹಲವೆಡೆ ನೆರೆ; ಗದ್ದೆ, ತೋಟ ಜಲಾವೃತ

02:44 AM Jul 09, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಗ್ರಾಮೀಣ, ನಗರ ಭಾಗದಲ್ಲಿ ಜನ ಜೀವನ ವ್ಯತ್ಯಯವಾಗಿದೆ. 8 ವಿದ್ಯುತ್‌ ಪರಿವರ್ತಕ (ಟಿಸಿ), 69 ವಿದ್ಯುತ್‌ ಕಂಬಗಳು, 2.19 ಮೀಟರ್‌ ವಿದ್ಯುತ್‌ ತಂತಿ ಸಹಿತ ಮೆಸ್ಕಾಂಗೆ ಒಟ್ಟು 21.59 ಲ.ರೂ. ನಷ್ಟ ಸಂಭವಿಸಿದೆ.

Advertisement

ಬೈಂದೂರು ತಾಲೂಕಿನಲ್ಲಿ 5, ಕುಂದಾಪುರ 9, ಕಾಪು 2, ಬ್ರಹ್ಮಾವರ 3, ಉಡುಪಿ ತಾಲೂಕಿನಲ್ಲಿ 3 ಮನೆ ಸಹಿತ ಜಿಲ್ಲೆಯಲ್ಲಿ 22 ಮನೆಗಳಿಗೆ ಹಾನಿ ಸಂಭವಿಸಿದೆ.

ಜಿಲ್ಲೆಯಲ್ಲಿ ಜು. 8ರಿಂದ ಇದು ವರೆಗಿನ ವಾಡಿಕೆ ಮಳೆ 367 ಮಿ.ಮೀ. ಆಗಿದ್ದು, 832 ಮಿ.ಮೀ. ಮಳೆಯಾಗಿದೆ. 250 ಹೆ. ಭತ್ತ ಬೆಳೆ ಹಾನಿಯಾಗಿದೆ. ನಗರ 93 ಕಿ.ಮೀ., ಗ್ರಾಮೀಣ 685 ಕಿ.ಮೀ. ರಸ್ತೆ, ಜಿಲ್ಲೆ ಹಾಗೂ ರಾಜ್ಯ ಹೆದ್ದಾರಿ 7.5 ಕಿ.ಮೀ.ಗಳಷ್ಟು ಹಾಳಾಗಿದೆ. 13 ಸೇತುವೆಗಳಿಗೆ ಹಾನಿಯಾಗಿದ್ದು, 64 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿ ಕಾರಿ ಕೂರ್ಮಾರಾವ್‌ ತಿಳಿಸಿದ್ದಾರೆ.

ಜಿಲ್ಲಾದ್ಯಂತ ಗುರುವಾರ ತಡರಾತ್ರಿ, ಶುಕ್ರವಾರ ವ್ಯಾಪಕ ಮಳೆಯಾಗಿದೆ. ಅಪಾಯದ ಮಟ್ಟದಲ್ಲಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜನರಲ್ಲಿ ನೆರೆ ಆತಂಕ ಮುಂದುವರಿದಿದೆ.

ಕುಂದಾಪುರ, ಬೈಂದೂರು ಭಾಗದಲ್ಲಿ ದಿನವಿಡೀ ಮಳೆಯಾಗಿದ್ದು, ಹಲವೆಡೆ ತಗ್ಗು ಪ್ರದೇಶ, ಕೃಷಿ ಭೂಮಿ ಜಲಾವೃತಗೊಂಡಿವೆ. ಉಡುಪಿ ಕಲ್ಯಾಣಪುರದಲ್ಲಿಯೂ ಸ್ವರ್ಣಾನದಿ ತುಂಬಿ ಹರಿಯುತ್ತಿದ್ದು, ಕುದ್ರು ಪ್ರದೇಶಗಳಲ್ಲಿ ನೆರೆ ಸೃಷ್ಟಿಯಾಗಿ ತೋಟಗಳಿಗೆ ನೀರು ನುಗ್ಗಿದೆ.

Advertisement

ಕಾರ್ಕಳ, ಹೆಬ್ರಿ, ಅಜೆಕಾರು, ಮಿಯಾರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಉಡುಪಿ ನಗರ, ಮಲ್ಪೆ, ಮಣಿಪಾಲ, ಪಡುಬಿದ್ರಿ, ಬ್ರಹ್ಮಾವರದಲ್ಲಿ ಮಧ್ಯಾಹ್ನದ ಬಳಿಕ ಮಳೆ ಪ್ರಮಾಣ ತಗ್ಗಿದೆ.

ಹಲವೆಡೆ ನೆರೆ; ಗದ್ದೆ, ತೋಟ ಜಲಾವೃತ
ಕುಂದಾಪುರ: ಶುಕ್ರವಾರ ದಿನವಿಡೀ ಸುರಿದ ಭಾರೀ ಮಳೆಯಿಂದಾಗಿ ಕುಂದಾಪುರ, ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ತಗ್ಗು ಪ್ರದೇಶಗಳು, ನದಿ ತೀರದ ಭಾಗಗಳಲ್ಲಿ ನೆರೆ ಸೃಷ್ಟಿಯಾಗಿದೆ. ವಿವಿಧೆಡೆಗಳಲ್ಲಿ ಹೆಕ್ಟೇರ್‌ಗಟ್ಟಲೆ ಗದ್ದೆ, ತೋಟಗಳು ಜಲಾವೃತಗೊಂಡಿವೆ.

ನಾವುಂದದ ಅರೆಹೊಳೆ, ಬಾಂಗಿನ್‌ಮನೆ, ಕಂಡಿಕೇರಿ ಸುತ್ತಮುತ್ತ ಶುಕ್ರವಾರವೂ ನೆರೆ ಪರಿಸ್ಥಿತಿ ಮುಂದು ವರಿದಿದೆ. 4 ದಿನಗಳಿಂದ ಇಲ್ಲಿ ಇದೇ ಪರಿಸ್ಥಿತಿಯಿದೆ. 80ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಕಾಳಜಿ ಕೇಂದ್ರ ತೆರೆಯಲಾಗಿದೆ. ತಾತ್ಕಾಲಿಕ ಜಾನುವಾರು ಶೆಡ್‌ ವಿಳಂಬವಾಗಿ ತೆರೆದಿದ್ದರಿಂದ ಪ್ರಯೋ ಜನವಿಲ್ಲದಂತಾಗಿದೆ. ಆಸುಪಾಸಿನ ಸುರಕ್ಷಿತ ಸ್ಥಳಗಳಲ್ಲಿ ದನಗಳನ್ನು ಕಟ್ಟಿದರೂ ಅಲ್ಲೀಗ ಮೇವು ಕೊರತೆಯಿದೆ. ಕುಂದಾಪುರ ಎಸಿ ಕೆ. ರಾಜು, ಬೈಂದೂರು ತಹಶೀಲ್ದಾರ್‌ ಕಿರಣ್‌ ಗೌರಯ್ಯ ಭೇಟಿ ನೀಡಿದರು.

2 ಕಿ.ಮೀ. ರಸ್ತೆ
ಸಂಪೂರ್ಣ ಮುಳುಗಡೆ
ನಾವುಂದ-ಅರೆಹೊಳೆಗೆ ಸಂಪರ್ಕ ಕಲ್ಪಿ ಸುವ 2 ಕಿ.ಮೀ. ದೂರದ ರಸ್ತೆ ಸಂಪೂರ್ಣ ಮುಳುಗಿದೆ. ನೆರೆ ಸಂತ್ರಸ್ತ ಜನರು ದಿನಸಿ, ಅಗತ್ಯ ಸಾಮಗ್ರಿಗಳಿಗಾಗಿ ದೋಣಿ ಮೂಲಕ ಪೇಟೆಗೆ ಬರುವಂತಾಗಿದೆ. 30 ಹೆಕ್ಟೇರ್‌ ನಾಟಿ ಮಾಡಿದ ಗದ್ದೆಗಳು 4-5 ದಿನಗಳಿಂದ ಸಂಪೂರ್ಣ ಜಲಾವೃತಗೊಂಡಿದೆ. ವಾರದ ಹಿಂದಷ್ಟೆ ಇಲ್ಲಿ ನಾಟಿ ಮಾಡಲಾಗಿತ್ತು.

ಕುಚ್ಚಟ್ಟು: ಮನೆಗಳಿಗೆ ನುಗ್ಗಿದ ನೀರು
ವಾರಾಹಿ, ಕುಬ್ಜಾ ನದಿ ತಟದ ಗುಲ್ವಾಡಿ ಗ್ರಾಮದ ಸೌಕೂರು ಕುದ್ರು ಹಾಗೂ ಕುಚ್ಚಟ್ಟು ಪರಿಸರದಲ್ಲಿ ಭಾರೀ ನೆರೆಯಾಗಿದ್ದು, ಇಲ್ಲಿನ 20 ಮನೆಗಳಿಗೆ ನೀರು ನುಗ್ಗಿದೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೋರಿ ಕುಸಿತ: ಸಂಪರ್ಕ ಕಡಿತ
ಯಡ್ತರೆ ಹೊಸೂರಿನ ಅತ್ತಿಕೇರಿಯ ಕಿರು ಸೇತುವೆ ಕುಸಿದಿದ್ದು, ಈ ಮಾರ್ಗದಲ್ಲಿ ಸಂಪರ್ಕ ಕಡಿತಗೊಂಡಿದೆ. ಶಿರೂ ರಿನ ನಿರೋಡಿಯಲ್ಲಿ 5 ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಬೈಂದೂರು – ವೀರಾಜಪೇಟೆ ರಾಜ್ಯ ಹೆದ್ದಾ ರಿಯ ಹಾಲಾಡಿ ಬಳಿ ಗುಡ್ಡ ಕುಸಿತ ಮುಂದುವರಿದಿದ್ದು, ರಸ್ತೆಗೂ ಅಪಾಯ ಎದುರಾಗಿದೆ.

ಬೇಳೂರಿನ ದೇಲಟ್ಟು, ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದ್ದು, ಕೃಷಿ ಭೂಮಿ ಮುಳು ಗಡೆಯಾಗಿದೆ. ವಕ್ವಾಡಿ ಪರಿಸರದ ವಾರಾಹಿ ಕಾಲುವೆ ಆಸುಪಾಸಿನಲ್ಲಿ ಭೂ ಕುಸಿತ ಮುಂದು ವರಿದಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಸೋನ್ಸ್‌ ಶಾಲೆ ಬಳಿ 5 ವಿದ್ಯುತ್‌ ಕಂಬ ಗಾಳಿಗೆ ಬಿದ್ದಿದ್ದು, 2 ಕಂಬ ತುಂಡಾಗಿದೆ. ಚಕ್ರೇಶ್ವರಿ ದೇಗುಲ ಸಮೀಪ ಕೃತಕ ನೆರೆಯಿಂದಾಗಿ ಮನೆಗೆ ನೀರು ನುಗ್ಗಿದೆ.

ವಿವಿಧೆಡೆ ಕೃತಕ ನೆರೆ
ನಾವುಂದ, ಮರವಂತೆ, ಪಡುಕೋಣೆ, ಬಡಾಕೆರೆ, ಹಡವು, ನಾಡದ ಕೆಲವೆಡೆ, ಹೊಸಾಡು, ತಲ್ಲೂರು, ಉಪ್ಪಿನಕುದ್ರು, ರಾಜಾಡಿ, ಜಾಲಾಡಿ – ಹೊಸ್ಕಳಿ, ತ್ರಾಸಿಯ ಮೊವಾಡಿ ಸೇರಿದಂತೆ ಹಲವೆಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮೊವಾಡಿಯಲ್ಲಿ 1 ಮನೆಯವರನ್ನು ಸ್ಥಳಾಂತರಿಸಲಾಗಿದೆ. ಕುಂದಾಪುರ, ಬೈಂದೂರಿನ ನೂರಾರು ಹೆಕ್ಟೇರ್‌ ನಾಟಿ ಮಾಡಿದ ಗದ್ದೆ, ಅಡಿಕೆ, ತೆಂಗಿನ ತೋಟಗಳು ಜಲಾವೃತಗೊಂಡಿವೆ. ಮರವಂತೆ, ಕಂಚುಗೋಡು, ಕೋಡಿ, ನಾವುಂದ, ಕಿರಿಮಂಜೇಶ್ವರ ಭಾಗದಲ್ಲಿ ಕಡಲ್ಕೊರೆತ ಮುಂದುವರಿದಿದೆ.

ನೆರೆಗೆ ಸಿಲುಕಿ ಕರು ಸಾವು
ನಾವುಂದದಲ್ಲಿ ನೆರೆಗೆ ಸಿಲುಕಿದ ದನದ ಕರುವೊಂದು ಸಾವನ್ನಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next