ಉಡುಪಿ: ಜಿಲ್ಲೆಯ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜ. 10ರಿಂದ ಕೋವಿಡ್ -19 ಮುನ್ನೆಚ್ಚರಿಕೆ ಡೋಸ್ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ನಿರ್ದೇಶನ ನೀಡಿದ್ದಾರೆ.
ಈ ವಿಚಾರವಾಗಿ ಶನಿವಾರ ವರ್ಚುವಲ್ ಸಭೆ ನಡೆಸಿದ ಅವರು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಲಸಿಕಾ ಕೇಂದ್ರ ತೆರೆಯಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ನೌಕರರಿಗೆ ಮತ್ತು ಚಂದು ಮೈದಾನದಲ್ಲಿ ಪೊಲೀಸ್ ಸಿಬಂದಿಗೆ ವಿಶೇಷ ಲಸಿಕಾ ಕೇಂದ್ರ ತೆರೆಯುವಂತೆ ಹಾಗೂ ಜಿಲ್ಲೆಯ ಎಲ್ಲ ಪ್ರಾ.ಅರೋಗ್ಯ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಲು ಬೇಕಾದ ವ್ಯವಸ್ಥೆ ಮಾಡಲು ಸೂಚಿಸಿದರು.
ಜಿಲ್ಲೆಯ ಕಸ ವಿಲೆವಾರಿ ವಾಹನಗಳಲ್ಲಿ ಕೋವಿಡ್ ಸುರಕ್ಷಾ ಕ್ರಮಗಳ ಕುರಿತಂತೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲು ಹಾಗೂ ಗ್ರಾಮೀಣ ಕಾರ್ಯಪಡೆಗಳು, ವಾರ್ಡ್ ಮಟ್ಟದ ಕಾರ್ಯಪಡೆಗಳು ಸಭೆ ನಡೆಸಿ, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಡಿಎಚ್‌ಒ ಡಾ| ನಾಗಭೂಷಣ ಉಡುಪ, ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ| ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ| ಸತೀಶ್ಚಂದ್ರ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಇದನ್ನೂ ಓದಿ:ಇಂದೂ ಕೋವಿಡ್ ಹೆಚ್ಚಳ: ರಾಜ್ಯದಲ್ಲಿ 38,507 ಸಕ್ರಿಯ ಪ್ರಕರಣಗಳು
30 ಸಾವಿರ ಮಂದಿಗೆ ಲಸಿಕೆ
2ನೇ ಡೋಸ್ ಕೋವಿಶೀಲ್ಡ್ ಕೊವ್ಯಾಕ್ಸಿನ್ ಪಡೆದು 9 ತಿಂಗಳು ಪೂರೈಸಿದವರಿಗೆ (39 ವಾರಗಳು) ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ಡೋಸ್ ಪಡೆಯಲು 23,125 ಆರೋಗ್ಯ ಕಾರ್ಯಕರ್ತರನ್ನು ಹಾಗೂ ಕಂದಾಯ, ಪೋಲಿಸ್ ಇಲಾಖೆಯ ಅಧಿಕಾರಿ, ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ 7,311 ಮುಂಚೂಣಿ ಕಾರ್ಯಕರ್ತರನ್ನು ಕೂಡ ಗುರುತಿಸಲಾಗಿದೆ. ಜತೆಗೆ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹರಿಗೆ 7 ದಿನಗಳ ಒಳಗೆ ಲಸಿಕೆ ನೀಡಲು ಗುರಿ ನಿಗದಿಪಡಿಸಲಾಗಿದೆ.
– ಕೂರ್ಮಾ ರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ