Advertisement

ಉಡುಪಿಗೆ ನೆರೆ ಜಿಲ್ಲೆಗಳದ್ದೇ ಆತಂಕ

12:00 PM May 11, 2020 | sudhir |

ಉಡುಪಿ: ಉಡುಪಿ ಜಿಲ್ಲೆಯ ಸುತ್ತಲ ಜಿಲ್ಲೆಗಳಲ್ಲಿ ಕೋವಿಡ್ ದಾಳಿ ಮುಂದುವರಿಯುತ್ತಿದ್ದರೆ, ಇನ್ನೊಂದೆಡೆ ಹೊರ ರಾಜ್ಯ, ಹೊರ ಜಿಲ್ಲೆಯವರ ಆಗಮನ ನಡೆಯುತ್ತಲೇ ಇದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳಿಲ್ಲದಿದ್ದರೂ ಒಳಗೊಳಗೇ ಗಾಬರಿ ಹೆಚ್ಚಿಸುತ್ತಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರವಿವಾರ ಹೊಸ 7 ಸೋಂಕು ಪ್ರಕರಣಗಳು, ಇದುವರೆಗೆ ಒಂದೇ ಒಂದು ಪ್ರಕರಣವಿಲ್ಲದ ಶಿವಮೊಗ್ಗ ಜಿಲ್ಲೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ದ.ಕ. ಜಿಲ್ಲೆಯಲ್ಲಿ ಶನಿವಾರ ಮೂರು ಪ್ರಕರಣಗಳು ದಾಖಲಾಗಿದ್ದವು.

ಏತನ್ಮಧ್ಯೆ ಮಂಗಳೂರಿನ ಫ‌ಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕ ಹೊಂದಿದ ಉಡುಪಿ ಜಿಲ್ಲೆಯ 30 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಜತೆಗೆ ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕೋವಿಡ್ ಪೀಡಿತ ಜಿಲ್ಲೆಗಳಿಗೆ ಹೋಗಿ ಬಂದ ಪಡುಬಿದ್ರಿಯ ಒಬ್ಬರಿಗೆ ಜ್ವರ ಲಕ್ಷಣಗಳು ಬಂದಿದ್ದು ಅವರ ಮಾದರಿಯನ್ನೂ ಕಳುಹಿಸಲಾಗಿದೆ. ಇವರೆಲ್ಲರ ವರದಿಗಳಿನ್ನೂ ಕೈಸೇರಿಲ್ಲ. ಸೋಮವಾರ ಕೈಸೇರುವ ಸಾಧ್ಯತೆ ಇದೆ.

133 ಮಂದಿ ಹೊರ ರಾಜ್ಯದವರು
ಜಿಲ್ಲೆಗೆ ಅನ್ಯರಾಜ್ಯದವರ ಆಗಮನ ನಡೆಯುತ್ತಿದೆ. ರವಿವಾರ ಒಟ್ಟು 133 ಜನರು ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಮೇ 4ರಿಂದ 10ರ ವರೆಗೆ ಒಟ್ಟು ಆಗಮಿಸಿದವರ ಸಂಖ್ಯೆ 471. ಇವರು ತೆಲಂಗಾಣ, ಗೋವಾ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಕೇರಳ, ಆಂಧ್ರಪ್ರದೇಶ ರಾಜ್ಯಗಳಿಂದ ಆಗಮಿಸಿದ್ದಾರೆ. ಇವರಿಗೆ ಆಯಾ ತಾಲೂಕು ಕೇಂದ್ರಗಳ ನೋಂದಣಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ನಿಗದಿತ ಕೇಂದ್ರಗಳಿಗೆ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ಎಲ್ಲ 24 ವರದಿ ನೆಗೆಟಿವ್‌
ರವಿವಾರ ಒಟ್ಟು 93 ಜನರ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಐವರು ಉಸಿರಾಟದ ಸಮಸ್ಯೆ, ಒಬ್ಬರು ಕೋವಿಡ್ ಸಂಪರ್ಕದವರು, ಆರು ಜನರು ಫ್ಲೂ ಜ್ವರದವರು, 81 ಮಂದಿ ಹಾಟ್‌ಸ್ಪಾಟ್‌ ಸಂಪರ್ಕದವರಿದ್ದಾರೆ. 24 ಜನರ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ. 232 ಜನರ ವರದಿ ಇನ್ನಷ್ಟೇ ಬರಬೇಕಾಗಿದೆ.

Advertisement

ಚೆನೈ ಚಾಲಕನಿಗೆ ಸೋಂಕು
ಕಾರ್ಕಳ: ತಮಿಳುನಾಡು ರಾಜ್ಯದಿಂದ ಸಿಮೆಂಟ್‌ ಹೇರಿಕೊಂಡು ಎ. 22ರಂದು ಕಾರ್ಕಳಕ್ಕೆ ಬಂದು ವಾಪಸಾಗಿರುವ ಲಾರಿ ಚಾಲಕನಿಗೆ ಮೇ 9ರಂದು ಚೆನೈಯಲ್ಲಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next