ಉಡುಪಿ: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ವರ್ಷಗಳ ಹಿಂದೆ ನಡೆದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೋಕೊÕ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು 10 ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ.
ಭರತ್ (30) ಶಿಕ್ಷೆಗೆ ಒಳಗಾದ ಆರೋಪಿ. ಈತ 2015ರಲ್ಲಿ ಬಾಲಕಿಯನ್ನು ಪ್ರೀತಿಸುತ್ತೇನೆಂದು, ಮದುವೆಯಾಗೋಣ ಎಂದು ನಂಬಿಸಿ ಮನೆಯಲ್ಲಿ ಅವಳ ಇಚ್ಛೆಯ ವಿರುದ್ಧವಾಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಬಳಿಕ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಬೆಂಗಳೂರು ಕಡೆಗೆ ಹೋಗಿ ದಾರಿ ಮಧ್ಯೆ ಸಿಕ್ಕಿದ ದೇವಸ್ಥಾನದಲ್ಲಿ ತಾನು ತಂದಿದ್ದ ಅರಸಿನ ದಾರವನ್ನು ಆಕೆಯ ಕೊರಳಿಗೆ ಕಟ್ಟಿ ನಮ್ಮ ಮದುವೆ ಆಯಿತು ಎಂದು ತಿಳಿಸಿ ಬೆಂಗಳೂರಿನಲ್ಲಿ ರೂಮಿಗೆ ಕರೆದುಕೊಂಡು ಹೋಗಿದ್ದ.
ಸಂತ್ರಸ್ತ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ತಂದೆ ದೂರು ನೀಡಿದ್ದು, ಪೊಲೀಸರು ಆರೋಪಿ ಹಾಗೂ ನೊಂದ ಬಾಲಕಿಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದರು. ಬಾಲಕಿ ಕೊಟ್ಟ ಹೇಳಿಕೆಯಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆರೋಪಿ ಜಾಮೀನು ಪಡೆದಿದ್ದ.
ಕುಂದಾಪುರ ಮಹಿಳಾ ಪೊಲೀಸ್ ಠಾಣೆಯ ಸುಜಾತಾ ಸಾಲ್ಯಾನ್ ತನಿಖೆ ನಡೆಸಿದ್ದು, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ತನಿಖೆಯನ್ನು ಮುಂದುವರಿಸಿದ್ದರು. ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಒಟ್ಟು 21 ಸಾಕ್ಷಿಗಳ ಪೈಕಿ 20 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕಿಯ ಸಾಕ್ಷಿ ಆರೋಪಿಯನ್ನು ದೋಷಿ ಎಂಬುದನ್ನು ಸಾಬೀತು ಪಡಿಸುವಲ್ಲಿ ಅಭಿಯೋಜನೆಗೆ ಸಹಕಾರಿಯಾಗಿತ್ತು. ಪ್ರಾಸಿಕ್ಯೂಶನ್ ಪರ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.
ಬಾಲಕಿಯ ಅಪಹರಣಕ್ಕೆ 3 ವರ್ಷಗಳ ಶಿಕ್ಷೆ, ಅತ್ಯಾಚಾರಕ್ಕೆ 10 ವರ್ಷ ಕಠಿನ ಶಿಕ್ಷೆ ಮತ್ತು 1 ಲಕ್ಷ ರೂ. ಸರಕಾರದಿಂದ ಸಂತ್ರಸ್ತ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.