Advertisement

ಉಡುಪಿ: ಕೊರೊನಾ ವೈರಸ್‌ ಭೀತಿ ದೂರ

01:03 AM Feb 10, 2020 | Sriram |

ಉಡುಪಿ: ಸಂಶಯಾಸ್ಪದ ಕೊರೊನಾ ವೈರಸ್‌ ಪರೀಕ್ಷೆಗೆಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾದ ಮೂವರ ರಕ್ತ, ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಯಾವುದೇ ರೋಗಲಕ್ಷಣ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಭೀತಿ ದೂರವಾಗಿದೆ.

Advertisement

ಬ್ರಹ್ಮಾವರದ ಇಬ್ಬರು ಹಾಗೂ ಕಾಪುವಿನ ಓರ್ವರು 15 ದಿನಗಳ ಹಿಂದೆ ಚೀನದಿಂದ ಆಗಮಿಸಿದ್ದು, ಶೀತ ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಚೀನದಲ್ಲಿ ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್‌ ಮುನ್ನೆಚ್ಚರಿಕೆ ಕ್ರಮವಾಗಿ ಅವರ ರಕ್ತ, ಗಂಟಲ ದ್ರವ ಮಾದರಿಯನ್ನು ಶುಕ್ರವಾರ ಪರೀಕ್ಷೆಗಾಗಿ ಬೆಂಗಳೂರಿನ ಬಿಎಂಸಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.

ಯಾವುದೇ ರೋಗಲಕ್ಷಣ ಇಲ್ಲದ ಕಾರಣ ವೈದ್ಯಕೀಯ ವರದಿ ಎರಡು ದಿನಗಳ ಮುಂಚಿತವಾಗಿಯೇ ಲಭ್ಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸೋಮವಾರ ಬಿಡುಗಡೆ ಆಗಲಿದ್ದಾರೆ.

ರವಿವಾರ ಯಾವುದೇ ಸಂಶಯಾಸ್ಪದ ಕೊರೊನಾ ಪ್ರಕರಣಗಳು ದಾಖಲಾಗಲಿಲ್ಲ. ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿಯೂ ರವಿವಾರದವರೆಗೆ ಯಾವುದೇ ಶಂಕಿತ ಪ್ರಕರಣ ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಕೆಎಂಸಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪ್ರಕರಣ ಇಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

Advertisement

ದ.ಕ.: ಮುಂಜಾಗ್ರತೆ ಕ್ರಮ ಮುಂದುವರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗ ದಲ್ಲಿ ಶಂಕಿತ ಕೊರೊನಾ ವೈರಸ್‌ ಬಾಧೆ ಈ ವರೆಗೆ ಪತ್ತೆ ಯಾಗಿಲ್ಲ. ಆದರೂ ನೆರೆಯ ಕೇರಳದಲ್ಲಿ ಸೋಂಕಿನ ಭೀತಿ ಇರುವುದರಿಂದ ಗಡಿ ಭಾಗವಾದ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣ, ನವಮಂಗಳೂರು ಬಂದರುಗಳಲ್ಲಿ ವಿಶೇಷ ತಪಾಸಣೆ ನಡೆಯುತ್ತಿದೆ.ಕೊರೊನಾ ಬಗ್ಗೆ ಹುಸಿ ಸಂದೇಶಗಳನ್ನು ರವಾನಿಸಿ ಜನತೆಯನ್ನು ಮತ್ತಷ್ಟು ಭೀತರ ನ್ನಾಗಿಸದಂತೆಯೂ ಹಾಗೆ ಮಾಡಿದಲ್ಲಿ ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮುನ್ನಚ್ಚರಿಕೆ ನೀಡಿದ್ದಾರೆ.

ಕಾಸರಗೋಡು: 101 ಮಂದಿಯ ಮೇಲೆ ನಿಗಾ
ಕುಂಬಳೆ: ಕೇರಳ ರಾಜ್ಯದಲ್ಲಿ ಒಟ್ಟು 343 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವ ಶಂಕೆ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಶಂಕಿತ ವೈರಸ್‌ ಬಾಧಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಸರಗೋಡಿನಲ್ಲಿ ಚೀನ ಸಹಿತ ವಿದೇಶಗಳಿಂದ ಆಗಮಿಸಿರುವ 101 ಮಂದಿಯ ಮೇಲೆ ನಿಗಾ ಇಡಲಾಗಿದೆ. ಇವರಲ್ಲಿ 19 ಮಂದಿಯ ತಪಾಸಣೆ ನಡೆಸಿದಾಗ ಫ‌ಲಿತಾಂಶ ನೆಗೆಟಿವ್‌ ಬಂದಿದೆ.

ಮೂವರ ಫ‌ಲಿತಾಂಶ ಇನ್ನಷ್ಟೇ ಬರಬೇಕಿದೆ.ವೈರಸ್‌ ಸೋಂಕು ಶಂಕೆಯಲ್ಲಿ ಮನೆಯಲ್ಲಿ ಇರುವವರು ಭಯಪಡದೆ ಸಾರ್ವಜನಿಕ ಸಂಪರ್ಕದಿಂದ ದೂರವಿದ್ದು ಆರೋಗ್ಯ ಇಲಾಖೆಯ ಸಲಹೆಯನ್ನು ಪಾಲಿಸಬೇಕು ಎಂದು ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next