Advertisement

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

04:54 AM Sep 19, 2024 | Team Udayavani |

ಉಡುಪಿ: ಸ್ಥಳೀಯ ಸಂಸ್ಥೆಗಳು ಭಿಕ್ಷಾಟನೆ ನಿರ್ಮೂಲಕ್ಕೆ ಸಂಗ್ರಹಿಸುವ ಉಪಕರ (ಸೆಸ್‌) ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ಜಿಲ್ಲೆಯ ಭಿಕ್ಷುಕರಿಗೊಂದು ಪರಿಹಾರ ಕೇಂದ್ರ ಕಟ್ಟಿಕೊಡಿ ಎಂದು ಜಿಲ್ಲಾಡಳಿತದ ಮುಂದೆ ಯಾಚಿಸುವಂತಾಗಿದೆ.”

Advertisement

ಜನರಿಂದಲೇ ಸಂಗ್ರಹಿಸಿದ ತೆರಿಗೆ ಹಣವಿದೆ, ಜಾಗವೂ ಮಂಜೂರಾಗಿದೆ. ಆದರೆ ಜಿಲ್ಲಾಡಳಿತದ ಇಚ್ಛಾಶಕ್ತಿ ಹಾಗೂ ಉಸ್ತುವಾರಿಯ ಕೊರತೆಯಿಂದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಉಡುಪಿಯಲ್ಲಿ ಪೊಲೀಸರು ಭಿಕ್ಷುಕರನ್ನು ವಶಕ್ಕೆ ಪಡೆದುಕೊಂಡು ಮಂಗಳೂರಿನ ಕೇಂದ್ರಕ್ಕೆ ಕರೆದೊಯ್ಯುವಂತಾಗಿದೆ.

ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ 1 ಕೋಟಿ ರೂ. ಗಿಂತಲೂ ಹೆಚ್ಚು ಹಾಗೂ ದ.ಕ.ದಲ್ಲಿ 3 ಕೋ.ರೂ.ಗೂ. ಹೆಚ್ಚು ಭಿಕ್ಷುಕರ ಉಪಕರ ಸಂಗ್ರಹವಾಗುತ್ತಿದೆ. ಈ ಮೊತ್ತ 2014-15ರಲ್ಲಿ ಉಡುಪಿಯಲ್ಲಿ 38 ಲಕ್ಷ ರೂ. ಹಾಗೂ ದಕ್ಷಿಣ ಕನ್ನಡದಲ್ಲಿ 10 ಲಕ್ಷ ರೂ. ಆಗಿದ್ದವು. 10 ವರ್ಷಗಳಲ್ಲಿ ಎರಡೂ ಜಿಲ್ಲೆಗಳಲ್ಲಿ ಸಂಗ್ರಹವಾದ ಮೊತ್ತ 27 ಕೋಟಿ ರೂ. ಗೆ ತಲುಪಿದೆ.

ಬೇಡಿಕೆ ಹೊಸದಲ್ಲ:
ಉಡುಪಿಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ತೆರೆಯಬೇಕು ಎಂಬ ಬೇಡಿಕೆ ಬಹಳ ವರ್ಷಗಳದ್ದು. ಭಿಕ್ಷಾಟನೆಯಿಂದ ರಕ್ಷಿಸಿದವರನ್ನು 3 ವರ್ಷಗಳ ವರೆಗೆ ಕೇಂದ್ರದಲ್ಲಿ ಇಟ್ಟುಕೊಂಡು ಅವರನ್ನು ಸ್ವ ಉದ್ಯೋಗಿಗಳನ್ನಾಗಿ, ಸ್ವತಂತ್ರವಾಗಿ ಬದುಕುವಂತೆ ಕೌಶಲಗಳನ್ನು ರೂಪಿಸಿ ಕಳುಹಿಸಬೇಕೆಂಬ ನಿಯಮವಿದೆ. ಆದರೆ ವ್ಯವಸ್ಥೆಯ ಕೊರತೆಯಿಂದ ಒಂದೇ ವರ್ಷದಲ್ಲಿ ಅವರನ್ನು ಕೇಂದ್ರದಿಂದ ಹೊರ ಹಾಕುವಂತಾಗಿದೆ. ಇದರಿಂದ ಇತ್ತ ಕೌಶ ಲವೂ ಇಲ್ಲ, ಮತ್ತೆ ಭಿಕ್ಷೆಯೇ ಅನಿವಾರ್ಯ ಎಂದು ಬೀದಿಗೆ ಬೀಳುವಂತಾಗಿದೆ.

ಮಂಗಳೂರಿನ ವಾಮಂಜೂರಿನಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಸಾಮರ್ಥ್ಯವೂ 150 ಮಂದಿಗೆ ಸೀಮಿತ. ಆದರೆ 183ಕ್ಕೂ ಹೆಚ್ಚು ಮಂದಿಗೆ ವ್ಯವಸ್ಥೆ ಕಲ್ಪಿಸಬೇಕಿದೆ. ಇದರಿಂದ ಪರಿಹಾರ ಕೇಂದ್ರದ ಉದ್ದೇಶಕ್ಕೇ ಧಕ್ಕೆ ಬಂದಂತಾಗಿದೆ.

Advertisement

ಕಾರ್ಯಾಚರಣೆ ಹೇಗೆ?
ಭಿಕ್ಷಾಟನೆ ಕಂಡುಬಂದ ಕೂಡಲೇ ಅಥವಾ ಸ್ಥಳೀಯರಿಂದ ಮಾಹಿತಿ ಬಂದರೆ ಪೊಲೀಸರು ಭಿಕ್ಷುಕರನ್ನು ವಶಕ್ಕೆ ಪಡೆದು, ಅನಂತರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಮಾಹಿತಿ ನೀಡುತ್ತಾರೆ. ಕೇಂದ್ರದ ಅಧಿಕಾರಿಗಳು ಸಂಬಂಧಪಟ್ಟ ಠಾಣೆಗೆ ಆಗಮಿಸಿ ಅವರನ್ನು ಕರೆದುಕೊಂಡು ಹೋಗುತ್ತಾರೆ.

ಕೆಎಂಸಿ ವೈದ್ಯರಿಂದ ಕೌನ್ಸೆಲಿಂಗ್‌
ಕೇಂದ್ರದಲ್ಲಿರುವ ಉಚಿತ ಊಟ, ತಿಂಡಿ, ವಸತಿ ಹಾಗೂ ಸಮವಸ್ತ್ರದೊಂದಿಗೆ ಔಷಧೋಪಚಾರ ನೀಡಲಾಗುತ್ತದೆ. ಜತೆಗೆ ಕೆಎಂಸಿ ತಜ್ಞ ವೈದ್ಯರು ಕೇಂದ್ರಕ್ಕೆ ಆಗಮಿಸಿ ಕೌನ್ಸೆಲಿಂಗ್‌ ನೀಡುವರು. ಅವರ ಮನಃಪರಿವರ್ತನೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಜಾಗದ ಕಡತ ಕೇಂದ್ರ ಕಚೇರಿಯಲ್ಲಿ
ಜಿಲ್ಲೆಯಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲು ಹೆಬ್ರಿ ತಾಲೂಕಿನ ಬೆಳಂಜೆ ಗ್ರಾಮದಲ್ಲಿ 10 ಎಕ್ರೆ ಜಾಗ ಮಂಜೂರಾಗಿದೆ. ಆದರೆ ಭೂಮಿಗೆ ಸುಮಾರು 40 ಲಕ್ಷ ರೂ. ಕಟ್ಟಬೇಕು ಎಂದು ತಹಶೀಲ್ದಾರ್‌ ಸೂಚಿಸಿದ್ದಾರೆ. ಅದು ಜಿಲ್ಲಾಧಿಕಾರಿ ಕಚೇರಿಗೂ ಬಂದಿತ್ತು. ನಿರಾಶ್ರಿತರ ಪರಿಹಾರ ಕೇಂದ್ರವು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ನಿರ್ಮಾಣಕ್ಕೆ ಸರಕಾರದ ಇನ್ನೊಂದು ಇಲಾಖೆಗೆ ನೋಂದಣಿ ಶುಲ್ಕ ಹೊರತುಪಡಿಸಿ ಬೇರೆ ಹಣ ಕಟ್ಟುವ ವ್ಯವಸ್ಥೆ ಇಲ್ಲ. ಹೀಗಾಗಿ ತಾಂತ್ರಿಕ ಕಾರಣ ನೆಪವೊಡ್ಡಿ ಕಡತವನ್ನು ಬೆಂಗಳೂರಿಗೆ ಕಳುಹಿಸಿದ್ದು, ಅಲ್ಲಿ ಕಂದಾಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಧೂಳು ಹಿಡಿಯುತ್ತಿದೆ.

26 ಕೋ.ರೂ.ಗಳಿಗೂ ಅಧಿಕ ಸೆಸ್‌ ಸಂಗ್ರಹ
ಭಿಕ್ಷಾಟನೆ ನಿರ್ಮೂಲಕ್ಕಾಗಿ ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲಾಗುತ್ತದೆ. 2014-15ರಿಂದ ಈವರೆಗೆ ಉಡುಪಿಯಲ್ಲಿ 8.01 ಕೋ.ರೂ., ದ.ಕ. ಜಿಲ್ಲೆಯಲ್ಲಿ 18.87 ಕೋ.ರೂ. ಸಂಗ್ರಹಿಸಲಾಗಿದೆ. ದ.ಕ. ಜಿಲ್ಲೆಯಲ್ಲಿರುವ ಕೇಂದ್ರಕ್ಕೆ ಅಗತ್ಯ ಅನುದಾನವನ್ನು ಪೂರೈಕೆ ಮಾಡಲಾಗುತ್ತಿದೆ.

“ಉಡುಪಿ ಜಿಲ್ಲೆಯಲ್ಲಿ ಕೇಂದ್ರ ತೆರೆಯಲು ಜಾಗವೂ ಸಿಕ್ಕಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಇಂದಿಗೂ ಕಟ್ಟಡ ನಿರ್ಮಿಸಿಲ್ಲ. ನೋಂದಣಿ ಶುಲ್ಕ ಪಾವತಿಸಲು ನಾವು ಸಿದ್ಧರಿದ್ದೇವೆ. ಸದ್ಯ ಭಿಕ್ಷಾಟನೆ ವೇಳೆ ವಶಕ್ಕೆ ಪಡೆಯುವ ಉಡುಪಿ ಮತ್ತು ದ.ಕ. ಜಿಲ್ಲೆಯವರನ್ನು ಒಂದೇ ಕೇಂದ್ರದಲ್ಲಿ ನಿರ್ವಹಿಸಲಾಗುತ್ತದೆ.”
– ಅಶೋಕ್‌ ಶೆಟ್ಟಿ, ಅಧೀಕ್ಷಕರು, ದ.ಕ. ಉಡುಪಿ, ನಿರಾಶ್ರಿತರ ಪರಿಹಾರ ಕೇಂದ್ರ.

“ನಿರಾಶ್ರಿತರ ಕೇಂದ್ರ ತೆರೆಯಲು ಮಂಜೂರಾಗಿದ್ದ ಅನುದಾನ ತಾಂತ್ರಿಕ ಕಾರಣದಿಂದ ವಾಪಸ್‌ ಹೋಗಿದೆ. ಈ ಸಂಬಂಧ ಹೊಸ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಅಲ್ಲಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲ.”  ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next