Advertisement
ಪರ್ಯಾಯ ಶ್ರೀ ಪುತ್ತಿಗೆ ಮಠ, ದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ, ಭಾರತೀಯ ವಿದ್ವತ್ ಪರಿಷತ್ ಸಹಿತವಾಗಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ 51ನೇ ಅಖಿಲ ಭಾರತ ಪ್ರಾಚ್ಯವಿದ್ಯ ಸಮ್ಮೇಳನದಲ್ಲಿ ಶುಕ್ರವಾರ “ಭಾರತೀಯ ಭಾಷೆಗಳು: ಅನ್ವಯಿಕತೆ ಮತ್ತು ಅವಕಾಶಗಳು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
ಕೇರಳದ ಕೋಯಿಕ್ಕೋಡ್ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ| ಸುಂದರೇಶ್ವರನ್ ಎನ್.ಕೆ. ಮಾತನಾಡಿ, ಪ್ರಾದೇಶಿಕ ಭಾಷೆಗಳಿಂದ ಸಂಸ್ಕೃತವನ್ನು ದೂರ ಮಾಡುವ ಬಹುದೊಡ್ಡ ಪ್ರಯತ್ನ ದೇಶಾದ್ಯಂತ ನಡೆಯುತ್ತಿದೆ. ಕೇರಳದಲ್ಲೂ ಮಲೆಯಾಳಂನಿಂದ ಸಂಸ್ಕೃತವನ್ನು ದೂರ ಮಾಡುವ ಯತ್ನ ಸಾಗುತ್ತಿದೆ. ಈ ಪ್ರಯತ್ನವೂ ಒಂದು ರೀತಿಯಲ್ಲಿ ಮಕ್ಕಳು ತಾಯಿಯನ್ನು ಮೂಲೆಗುಂಪು ಮಾಡಿದಂತೆ ಆಗುತ್ತದೆ. ಇದನ್ನು ತಪ್ಪಿಸಲು ಸಂಸ್ಕೃತದಲ್ಲಿ ಆಧುನಿಕ ವಿಷಯ ಇಟ್ಟುಕೊಂಡು ಸಾಹಿತ್ಯ ರಚನೆಯ ಕಾರ್ಯ ಹೆಚ್ಚಾಗಬೇಕು. ಸಾಮಾನ್ಯರಿಗೂ ಶಾಸ್ತ್ರೀಯ ವಿಷಯಗಳನ್ನು ಗೊತ್ತುಪಡಿಸುವ ಕಾರ್ಯವೂ ಆಗಬೇಕು ಹಾಗೂ ಪ್ರಾದೇಶಿಕ ಸಾಹಿತ್ಯಗಳು ಸಂಸ್ಕೃತ ಭಾಷೆಯಲ್ಲೂ ಬರಬೇಕು ಎಂದು ಹೇಳಿದರು.
Related Articles
Advertisement
ಎಐಗೂ ಪೂರ್ವಗ್ರಹವೆ? ಇಂಡಿಕಾ ನಿರ್ದೇಶಕ ನಾಗರಾಜ ಪಟೂರಿ ಮಾತನಾಡಿ, ಕೃತಕ ಬುದ್ದಿಮತ್ತೆ ಪ್ರಸ್ತುತ ಸಾಕಷ್ಟು ಪ್ರಭಾವ ಬೀರುತ್ತಿದೆ. ಇದರಲ್ಲಿಯೂ ಸಿದ್ಧಾಂತದ ಸಮಸ್ಯೆಯಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಷ್ಟು ತಮಾಷೆಯ ವಿಷಯಗಳು ಬೇಕಾದರೂ ಅದರಲ್ಲಿ ಸಿಗುತ್ತವೆ. ಅದೇ ಅನ್ಯ ಧರ್ಮಕ್ಕೆ ಸಂಬಂಧಿಸಿದಂತೆ ಈ ರೀತಿಯ ಯಾವ ತಮಾಷೆಯೂ ಸಿಗುವುದಿಲ್ಲ. ಆಗ “ನೋ ಕಮೆಂಟ್’ ಎಂದು ಎಐ ಕೂಡ ಹೇಳುತ್ತದೆ. ಹೀಗೆ ಎಐ ಒಳಗೂ ಸೈದ್ಧಾಂತಿಕತೆ ತುಂಬಲಾಗುತ್ತಿದೆ. ಎಐ ಆಧಾರಿತ ಭಾಷಾಂತರದಲ್ಲಿಯೂ ದೊಡ್ಡ ಮಟ್ಟದ ಸೈದ್ಧಾಂತಿಕ ರಾಜಕೀಯ ನಡೆಯುತ್ತಿದೆ ಎಂದು ಹೇಳಿದರು. ಮಧ್ಯಪ್ರದೇಶದ ವಿಜಯ ಕುಮಾರ್ ತಮ್ಮ ವಿಚಾರ ಮಂಡಿಸಿದರು. ಗಮನ ಸೆಳೆದ ಕವಿಗೋಷ್ಠಿ
ಕವಿಗೋಷ್ಠಿಯಲ್ಲಿ ದೇಶದ ವಿವಿಧ ಭಾಗದಿಂದ 15 ಯುವ ಕವಿಗಳು ಪಾಲ್ಗೊಂಡಿದ್ದರು. ದೇವತಾಸ್ತುತಿ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುಗಳು, ಸಾಂಪ್ರದಾಯಿಕ ಶೈಲಿಯ ಛಂದಸ್ಸುಗಳನ್ನು ಒಳಗೊಂಡ ಸಂಸ್ಕೃತ ಕವಿತೆಗಳ ವಾಚನ ನಡೆಯಿತು. ಕೇಂದ್ರೀಯ ಸಂಸ್ಕೃತ ವಿ.ವಿ.ಯ ಭೋಪಾಲ ಕೇಂದ್ರದ ನಿರ್ದೇಶಕ ಪ್ರೊ| ರಮಾಕಾಂತ ಪಾಂಡೆ, ನಾಗಪುರ ಕವಿಕುಲಗುರು ಕಾಳಿದಾಸ ವಿ.ವಿ.ಯ ಸಾಹಿತ್ಯ ವಿಭಾಗದ ಪ್ರೊ| ಪರಾಗ್ ಜೋಶಿ, ಚಾಣಕ್ಯ ವಿ.ವಿ.ಯ ಡಾ| ರಾಮಕೃಷ್ಣ ಪೆಜತ್ತಾಯ ಉಪಸ್ಥಿತರಿದ್ದರು. ಯುವ ಮಹಿಳಾ ವಿದ್ವಾಂಸರ ಸಂವಾದ.
ಕಲ್ಯಾಣಿ (ಪಂಡಿತ ಪರಿಷತ್) ವಾಕ್ಯಾರ್ಥಗೋಷ್ಠಿ ಎಐಒಸಿ ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿತ್ತು. ಸಂಸ್ಕೃತದ ಬೇರೆ ಬೇರೆ ಶಾಸ್ತ್ರಪರಂಪರೆ ವಾಗ್ವಾದಗಳನ್ನು ಜೀವಂತವಾಗಿ ಪ್ರತಿಪಾದಿಸಿ ಸಭೆಗೆ ಆಶ್ಚರ್ಯ ಮೂಡಿಸಿದವರು ಯುವ ಮಹಿಳಾ ವಿದ್ವಾಂಸರು. ವೇದಾಂತ, ವ್ಯಾಕರಣ, ನ್ಯಾಯಶಾಸ್ತ್ರ, ಸಾಹಿತ್ಯಶಾಸ್ತ್ರ ಮೊದಲಾದ ವಿಷಯದಲ್ಲಿ ಯುವ ವಿದುಷಿಯರು ಸಂವಾದ ನಡೆಸಿದರು. ಪುರಿಯ ಪ್ರೊ| ನಂದಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸರಾದ ವನಿತಾ ರಾಮಸ್ವಾಮಿ, ಕೋಟೆಮನೆ ರಾಮಚಂದ್ರ ಭಟ್ ಮತ್ತು ಕೊರಾಡ ಸುಬ್ರಹ್ಮಣ್ಯಂ ಕೇಳಿದ ಪ್ರಶ್ನೆಗಳಿಗೆ ಮಹಿಳಾ ಯುವ ವಿದ್ವಾಂಸರು ಸಮರ್ಥವಾಗಿ ಉತ್ತರಿಸಿದರು. ತಾವು ಪ್ರತಿಪಾದಿಸಿದ ವಿಷಯದಲ್ಲಿ ಸುಲಲಿತ ಭಾಷಾ ಪ್ರಯೋಗ, ತರ್ಕಗಳ ಮೂಲಕ ಎಲ್ಲರ ಗಮನ ಸೆಳೆದರು. ವ್ಯಾಕರಣ ಶಾಸ್ತ್ರದಲ್ಲಿ ಪಲ್ಲವಿ, ಚೈತ್ರಾ, ವನಜಾ, ವೇದಾಂತ ವಿಷಯದಲ್ಲಿ ಶ್ವೇತಾ, ನಂದಿನಿ ಮೊದಲಾದವರು ತಮ್ಮ ವಿಷಯ ಪ್ರತಿಪಾದನೆ ಮಾಡಿದರು. ಪ್ರಾಚೀನ ಈ ವಾದಪರಂಪರೆಗೆ ಹೊಸ ದಿಕ್ಕು, ಆಶಯ ಕೊಟ್ಟ ಯುವ ಮಹಿಳಾ ವಿದ್ವಾಂಸರು ಸಂಸ್ಕೃತದ ಶಾಸ್ತ್ರೀಯ ವಿಷಯದಲ್ಲಿ ಪ್ರವೇಶ ಪಡೆದದ್ದು ಸಂಸ್ಕೃತಕ್ಕೊಂದು ದೊಡ್ಡ ಭರವಸೆ ಮೂಡಿದೆ ಎಂಬ ಅಭಿಪ್ರಾಯವನ್ನು ವಿದ್ವಾಂಸರು ವ್ಯಕ್ತಪಡಿಸಿದರು.