Advertisement

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

12:14 AM Nov 08, 2024 | Team Udayavani |

ಡರ್ಬನ್‌: ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಯುವ ತಂಡ ಶುಕ್ರವಾರದಿಂದ ದಕ್ಷಿಣ ಆಫ್ರಿಕಾದಲ್ಲಿ 4 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳ ಲಿದೆ. ಇನ್ನೊಂದೆಡೆ ಆತಿಥೇಯ ದಕ್ಷಿಣ ಆಫ್ರಿಕಾ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿದ್ದು, ಹೆಚ್ಚು ಬಲಿಷ್ಠ ಹಾಗೂ ಫೇವರಿಟ್‌ ಆಗಿ ಗೋಚರಿಸುತ್ತಿದೆ.

Advertisement

ಇದು ಟಿ20 ವಿಶ್ವಕಪ್‌ ಫೈನಲ್‌ ಬಳಿಕ ಭಾರತ- ದಕ್ಷಿಣ ಆಫ್ರಿಕಾ ನಡುವಿನ ಮೊದಲ ಮುಖಾಮುಖೀ. ಅಲ್ಲಿ ಅನುಭವಿಸಿದ ಸೋಲಿಗೆ ದೊಡ್ಡ ಮಟ್ಟದಲ್ಲೇ ಸೇಡು ತೀರಿಸಿಕೊಳ್ಳುವುದು ಐಡನ್‌ ಮಾರ್ಕ್‌ ರಮ್‌ ಪಡೆಯ ಯೋಜನೆ ಆಗಿದ್ದರೆ ಅಚ್ಚರಿಯೇನಿಲ್ಲ.

ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಅವರ ಯುಗದ ಬಳಿಕ ಯುವ ಪಡೆಯೊಂದನ್ನು ಕಟ್ಟಿಕೊಂಡು ವಿಶ್ವ ಸಂಚಾರ ಮಾಡಬೇಕಾದ ಸಮಯವಿದು. ಹಾಗೆಯೇ ಯಂಗ್‌ ಇಂಡಿಯಾದ ಸಾಮ ರ್ಥ್ಯವನ್ನು ಒರೆಗೆ ಹಚ್ಚುವ ಕಾಲಘಟ್ಟವೂ ಇದಾಗಿದೆ. ಬಹುತೇಕ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರೇ ಈ ತಂಡದಲ್ಲಿದ್ದಾರೆ. ಇದೊಂದು ಭವಿಷ್ಯದ ತಂಡವೂ ಹೌದು.

ನಾಯಕ ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಅರ್ಷದೀಪ್‌ ಸಿಂಗ್‌ ಅವರನ್ನಷ್ಟೇ ಅನುಭವಿ ಗಳೆಂದು ಕರೆಯಬಹುದು. ಕರ್ನಾಟಕದ ಭರವಸೆಯ ಬೌಲರ್‌ ವಿಜಯ್‌ಕುಮಾರ್‌ ವೈಶಾಖ್‌ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿದ ಬಹಳಷ್ಟು ಮಂದಿ ಹೊಡಿ ಬಡಿ ಆಟಗಾರರು ತಂಡದಲ್ಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಬೌನ್ಸಿ ಟ್ರ್ಯಾಕ್‌ ಮೇಲೆ, ಅವರ ಘಾತಕ ಬೌಲಿಂಗ್‌ ದಾಳಿಗೆ ಎದೆ ಯೊಡ್ಡಿ ನಿಲ್ಲುವ ಸಾಮರ್ಥ್ಯ ಇವರಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬ ಪ್ರಶ್ನೆ ಕಾಡದೆ ಇರದು.

Advertisement

ಎಡಗೈ ಓಪನರ್‌ ಅಭಿಷೇಕ್‌ ಶರ್ಮ ಅವರ ನಿರ್ವಹಣೆ ಇಡೀ ತಂಡದ ಸಾಧನೆಗೊಂದು ದಿಕ್ಸೂಚಿ ಆಗಬೇಕಿದೆ. ಕಳೆದ ಜುಲೈಯಲ್ಲಿ ಜಿಂಬಾಬ್ವೆ ಎದುರಿನ ಹರಾರೆ ಪಂದ್ಯದಲ್ಲಿ 47 ಎಸೆತಗಳಿಂದ ಸೆಂಚುರಿ ಹೊಡೆದ ಸಾಹಸ ಇವರದಾಗಿತ್ತು. ಆದರೆ ಅನಂತರದ 6 ಇನ್ನಿಂಗ್ಸ್‌ಗಳಲ್ಲಿ ಶರ್ಮ ಸಣ್ಣ ಮೊತ್ತಕ್ಕೆ ಔಟಾಗುತ್ತ ಹೋಗಿದ್ದರು (0, 10, 14, 16, 15, 4). ತಿಲಕ್‌ ವರ್ಮ ಅವರಿಗೂ ಅನ್ವಯಿಸುವ ಮಾತಿದು. 2003ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಪ್ರಚಂಡ ಆರಂಭ ಪಡೆದಿದ್ದ ತಿಲಕ್‌, ಅನಂತರ ಲಕ್‌ ಎಲ್ಲಿದೆ ಎಂಬುದನ್ನು ಹುಡು ಕುತ್ತಲೇ ಇದ್ದಾರೆ.

ಭಾರತದ ಮೇಲುಗೈ ಯಲ್ಲಿ ಸೂರ್ಯ, ಸ್ಯಾಮ್ಸನ್‌, ರಿಂಕು ಸಿಂಗ್‌, ಪಾಂಡ್ಯ, ಜಿತೇಶ್‌ ಶರ್ಮ, ವರುಣ್‌ ಚಕ್ರವರ್ತಿ, ಅರ್ಷದೀಪ್‌, ರಮಣ್‌ದೀಪ್‌ ಅವರ ಯಶಸ್ಸು ಮುಖ್ಯ ಪಾತ್ರ ವಹಿಸಲಿದೆ. ಇವರೆಲ್ಲ ಸೇರಿಕೊಂಡು ವಿಶ್ವಕಪ್‌ ವಿಜೇತ ತಂಡದ ಘನತೆ ಹಾಗೂ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬರುವ ನಿಟ್ಟಿನಲ್ಲಿ ಸಾಂ ಕ ಹೋರಾಟ ನಡೆಸಬೇಕಿದೆ.

ದಕ್ಷಿಣ ಆಫ್ರಿಕಾ ಬಲಿಷ್ಠ
ದಕ್ಷಿಣ ಆಫ್ರಿಕಾ ತಂಡದ ಆಯ್ಕೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಮಾರ್ಕ್‌ರಮ್‌, ಹೆಂಡ್ರಿಕ್ಸ್‌, ಜಾನ್ಸೆನ್‌, ಕ್ಲಾಸೆನ್‌, ಮಿಲ್ಲರ್‌, ಸ್ಟಬ್ಸ್ ಅವರಂಥ ಘಟಾನುಘಟಿ ಹಾಗೂ ಟಿ20 ಸ್ಪೆಷಲಿಸ್ಟ್‌ ಕ್ರಿಕೆಟಿಗರನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next