ಮಂಗಳೂರು: ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮೊದಲಾದವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:Kushtagi: ಪರಾರಿಯಾಗಲು ಯತ್ನಿಸಿದ ಕಳ್ಳನಿಗೆ ಸ್ಥಳೀಯರಿಂದ ಧರ್ಮದೇಟು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಿಹಾದಿಗಳೊಂದಿಗೆ ಕೈ ಜೋಡಿಸಿದೆ. ಹಿಂದೂ ವಿರೋಧಿಯಾಗಿ, ರಾಷ್ಟ್ರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅದರ ಭಾಗವಾಗಿ ಉಡುಪಿಯ ಕಾಲೇಜಿನಲ್ಲಿ ಘಟನೆ ನಡೆದಿದೆ. ಇದು ಕೇರಳ ಫೈಲ್ಸ್ ರೀತಿಯ ಘಟನೆ. ಇದನ್ನು ಮುಚ್ಚಿಹಾಕಲು ಸರಕಾರ ಯತ್ನಿಸಿದೆ. ಕಾಂಗ್ರೆಸ್ ಬೆಂಬಲದಿಂದ ಭಯೋತ್ಪಾದನಾ ಶಕ್ತಿಗಳು ಮತ್ತೆ ಎದ್ದು ನಿಲ್ಲುತ್ತಿವೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಉಡುಪಿ ಘಟನೆಯನ್ನು ಮಕ್ಕಳಾಟ ಎಂದು ಪರಿಗಣಿಸಬಾರದು. ಅದು ಸಣ್ಣ ಘಟನೆಯಲ್ಲ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಇದರ ಹಿಂದೆ ಪಿಎಫ್ ಐ, ಕೇರಳದ ಜಿಹಾದಿ ಶಕ್ತಿಗಳ ಕೈವಾಡವಿದೆ. ಇದರ ಹಿಂದಿರುವ ಎಲ್ಲರನ್ನೂ ಬಂಧಿಸುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ನಳಿನ್ ಹೇಳಿದರು.