ಉಡುಪಿ: ಜಿಲ್ಲೆಯಲ್ಲಿ ಸಿಎನ್ಜಿ ಗ್ಯಾಸ್ ಕೊರತೆಯಿಂದ ಬಡ ರಿಕ್ಷಾ ಚಾಲಕರು ಮತ್ತು ಇತರ ಸಿಎನ್ಜಿ ಬಳಕೆಯ ವಾಹನ ಮಾಲೀಕರು ಪರದಾಡುವಂತಾಗಿದೆ. ದಿನಗಟ್ಟಲೆ ವಾಹನ ಸವಾರರು ಸಿಎನ್ಜಿ ಬಂಕ್ ಎದುರು ಪೂರೈಕೆಗಾಗಿ ನಿಲ್ಲುತ್ತಿದ್ದಾರೆ.
ಆದ್ದರಿಂದ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ಸಮಸ್ಯೆ ಪರಿಹರಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ 21,000 ಕೆ.ಜಿ ಸಿಎನ್ಜಿ ಬೇಡಿಕೆ ಇದ್ದು ಇದೀಗ 14,000 ಕೆ.ಜಿ ಪೂರೈಕೆಯಾಗುತ್ತಿದೆ. 8 ಜಿ ಸಿಎನ್ಜಿ ಬಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು ಹೆಚ್ಚುವರಿ ಬಂಕ್ ಗಳನ್ನು ಮಂಜೂರು ಮಾಡಬೇಕೆಂದು ಮತ್ತು ಸಿಎನ್ಜಿ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಸಂಬಂಧಿತ ಕಂಪನಿಗಳಿಗೆ ಆದೇಶ ನೀಡಬೇಕೆಂದು ಸಚಿವರಿಗೆ ಮನವರಿಕೆ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವರು ಕೂಡಲೆ ಕ್ರಮ ಜರುಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಉತ್ತರ ಕನ್ನಡ ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.