ಉಡುಪಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಮತ್ತು ಉಡುಪಿ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ.
ಶ್ರೀಕೃಷ್ಣ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಭಕ್ತರಾದ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಳೆದ ಮಾರ್ಚ್ 12ರಂದು ಉಡುಪಿಗೆ ಆಗಮಿಸಿ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದಿದ್ದರು. ಆ ಬಳಿಕ ಪುತ್ತಿಗೆ ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಆಗ ಪುತ್ತಿಗೆ ಶ್ರೀಗಳು ಮುಂದೆ ಮುಖ್ಯಮಂತ್ರಿಯಾಗಿ ಕಾಣುವಂತಾ ಗಬೇಕು ಎಂದು ಆಶೀರ್ವಚನ ನೀಡಿದ್ದರು. ಮಾತ್ರವಲ್ಲದೇ ತಮ್ಮ ಚತುರ್ಥ ಪರ್ಯಾಯದ ಅವಧಿಯಲ್ಲಿ ನಡೆಯುತ್ತಿರುವ ಕೋಟಿ ಗೀತಾ ಲೇಖನ ಯಜ್ಞದ ಮಹತ್ವವನ್ನು ತಿಳಿಸಿ, ಭಗವದ್ಗೀತಾ ಪ್ರಚಾರ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದರು.
ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಶ್ರೀಗಳಿಂದ ಲೇಖನ ಯಜ್ಞದಲ್ಲಿ ಭಾಗವಹಿಸುವ ದೀಕ್ಷೆ ಪಡೆದಿದ್ದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಠದ ರತೀಶ್ ತಂತ್ರಿ, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು ಮೊದಲಾದವರು ಜತೆಗಿದ್ದರು.
ಆರ್‌ಎಸ್‌ಎಸ್ ಕಾರ್ಯಕರ್ತನ ಮನೆಗೆ ಭೇಟಿ
ಇದೇ ಸಂದರ್ಭದಲ್ಲಿ ಅವರು ಸಂಘ ಮತ್ತು ಪಕ್ಷದ ಸೂಚನೆಯ ಮೇರೆಗೆ, ಅಯೋಧ್ಯೆಯಲ್ಲಿ ನಿಧನ ಹೊಂದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಪಾಂಡುರಂಗ ಶ್ಯಾನುಭಾಗ್ ಪಾಂಗಾಳ ಅವರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದ್ದರು.