Advertisement
ಉಡುಪಿ ಶ್ರೀಕೃಷ್ಣ ಮಠವೂ ಸೇರಿದಂತೆ ಉಡುಪಿಗೆ ಆಗಮಿಸುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷದಂತೆ ಈ ಬಾರಿಯೂ ಈ ಅವಧಿಯಲ್ಲಿ ಅಧಿಕವಾಗಿದೆ. ಕಳೆದೊಂದು ವಾರದಿಂದ ಪ್ರವಾಸಿಗರಿಗೂ ನೀರಿನ ಬಿಸಿ ತಟ್ಟತೊಡಗಿದೆ. ಒಂದೆಡೆ ಹೆಚ್ಚುತ್ತಿರುವ ಸೆಕೆ, ಇನ್ನೊಂದೆಡೆ ನೀರಿನ ಅಲಭ್ಯತೆಯಂದಾಗಿ ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಪ್ರಯಾಸಪಡುತ್ತಿರುವುದು ಕಂಡುಬಂದಿದೆ.
ಕಳೆದೆರಡು ದಿನಗಳಿಂದ ಉಡುಪಿ ಶ್ರೀಕೃಷ್ಣ ಮಠ ಗೀತಾಮಂದಿರ ಪಕ್ಕದ ಒಂದು ಛತ್ರದಲ್ಲಿ ತಂಗಲು ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ. “ನೀರಿನ ಕೊರತೆಯಿಂದಾಗಿ ರೂಮ್ ನೀಡುತ್ತಿಲ್ಲ. ಈಗ ಛತ್ರ ಪೂರ್ಣ ಖಾಲಿಯಾಗಿದೆ’ ಎಂದು ಛತ್ರದ ಸಿಬಂದಿ ಸೋಮವಾರ ತಿಳಿಸಿದರು. ಇಲ್ಲಿಯೇ ಇರುವ ಪಕ್ಕದ ಒಂದು ಛತ್ರ ಭರ್ತಿಯಾಗಿದ್ದು ರೂಮ್ ಕೇಳಿಕೊಂಡು ಬರುವ ಯಾತ್ರಾರ್ಥಿಗಳಿಗೆ ತೊಂದರೆಯಾಗಿದೆ. ಪಾರ್ಕಿಂಗ್ ಪ್ರದೇಶ ದಲ್ಲಿರುವ ಇನ್ನೊಂದು ಛತ್ರಕ್ಕೂ ನೀರಿನ ಕೊರತೆ ಉಂಟಾಗಿದೆ. “ಈಗ ಸ್ವಲ್ಪ ಸ್ವಲ್ಪ ನೀರು ಸಿಗುತ್ತಿದೆ. ಮುಂದೇನೆಂದು ಗೊತ್ತಿಲ್ಲ’ ಎಂದು ಛತ್ರದ ಸಿಬಂದಿ ಆತಂಕ ವ್ಯಕ್ತಪಡಿಸಿದರು. ಪಾರ್ಕಿಂಗ್ ಪ್ರದೇಶದಲ್ಲಿರುವ ಬಾವಿಯ ಮಣ್ಣು/ ಹೂಳು ತೆಗೆಯಲಾಗುತ್ತಿದೆ. ಟಾಯ್ಲೆಟ್: ಸ್ಥಳೀಯರಿಗೆ ನಿಷಿದ್ಧ
ಪಾರ್ಕಿಂಗ್ ಪ್ರದೇಶದಲ್ಲಿರುವ ಸಾರ್ವಜನಿಕ ಶೌಚಾಲಯದ ಕೆಲವು ಕೋಣೆಗಳನ್ನು ಮುಚ್ಚಲಾಗಿದೆ. ಸ್ಥಳೀಯರೆಂದು ಗೊತ್ತಾದರೆ ಶೌಚಾಲಯ ನಿರ್ವಹಿಸುವ ಸಿಬಂದಿ ಈ ಶೌಚಾಲಯ ಬಳಕೆಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸೂಚನೆ ಫಲಕ ಕೂಡ ಹಾಕಲಾಗಿದೆ. “ನಾವು ಮೊನ್ನೆ ಒಂದು ದಿನ ನೀರಿಲ್ಲದೆ ಟಾಯ್ಲೆಟ್ ಬಂದ್ ಮಾಡಿದೆವು. ಈಗ ಮತ್ತೆ ನೀರು ತರಿಸಿದ್ದೇವೆ. ಇನ್ನೆಷ್ಟು ದಿನವೋ ಗೊತ್ತಿಲ್ಲ. ಒಬ್ಬೊಬ್ಬರಿಗೆ ಕನಿಷ್ಠ 4ರಿಂದ 5 ಲೀಟರ್ ನೀರು ಬೇಕು. ಇದನ್ನು ಕೊಡುವುದು ಎಲ್ಲಿಂದ? ಬಂದ್ ಮಾಡಿದರೆ ಜನ ಇಲ್ಲಿ ಬಂದು ಗಲಾಟೆ ಮಾಡುತ್ತಾರೆ’ ಎಂದು ಸರ್ವೀಸ್ ಬಸ್ ನಿಲ್ದಾಣ ಸಮೀಪದ ಟಾಯ್ಲೆಟ್ ನಿರ್ವಾಹಕರು ಅಸಹಾಯಕತೆ ವ್ಯಕ್ತಪಡಿಸಿದರು.
Related Articles
ಬೀಡಿನಗುಡ್ಡೆಯಲ್ಲಿ ಜೋಪಡಿ ಹಾಕಿಕೊಂಡು ವಾಸವಿರುವ ಬಾಗಲಕೋಟೆ, ಕೊಪ್ಪಳ ಮೊದಲಾದ ಊರುಗಳ ಕೂಲಿ ಕಾರ್ಮಿಕರ ಕುಟುಂಬಗಳು ಕೂಡ ನೀರಿಲ್ಲದೆ ಕಂಗೆಟ್ಟಿವೆ. ಇವರು ಇದೇ ಪರಿಸರದ ಗದ್ದೆ ಸಾಲಿನಲ್ಲಿರುವ ಬಾವಿಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಈ ಪೈಕಿ ಒಂದು ಬಾವಿಯಲ್ಲಿ ನೀರು ಪೂರ್ಣ ತಳ ಹಿಡಿದಿದೆ. ಬಣ್ಣ ಬದಲಾಗಿದೆ. ಕುಡಿಯಲು ಯೋಗ್ಯವಿಲ್ಲ. ಇನ್ನೊಂದು ಬಾವಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದೆ. ಆದರೆ ಸುತ್ತಲಿನ ಸುಮಾರು 200ರಷ್ಟು ಜೋಪಡಿಯ ನಿವಾಸಿಗಳು ಇದೇ ಬಾವಿಯ ನೀರಿಗಾಗಿ ಸಾಲುಗಟ್ಟಿ ನಿಂತಿರುತ್ತಾರೆ. “ಇನ್ನು ಕೆಲವು ದಿನಗಳಲ್ಲಿ ಇದು ಕೂಡ ಬತ್ತಿ ಹೋಗಬಹುದು’ ಎಂಬ ಆತಂಕ ಇಲ್ಲಿನ ನಿವಾಸಿಗಳದ್ದು. ಅಶುದ್ಧ ನೀರಿನಿಂದ ಮಕ್ಕಳ ಆರೋಗ್ಯ ಕೆಡಬಹುದು ಎಂಬ ಭೀತಿಯೂ ಅವರಲ್ಲಿದೆ. ಇಲ್ಲಿ ನಳ್ಳಿನೀರಿನ ಸಂಪರ್ಕವಿಲ್ಲ. ಟ್ಯಾಂಕರ್ ನೀರು ಕೂಡ ತಲುಪುತ್ತಿಲ್ಲ.
Advertisement
ವಸತಿ ಸಂಕೀರ್ಣಗಳ ಗೋಳುನಗರಸಭೆ ಕೆಲವು ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಆದರೆ ವಸತಿ ಸಂಕೀರ್ಣಗಳಿಗೆ ನೀಡುತ್ತಿಲ್ಲ. ಇದು ವಸತಿ ಸಂಕೀರ್ಣಗಳ ನಿವಾಸಿಗಳಿಗೆ ಭಾರೀ ತೊಂದರೆಯನ್ನುಂಟು ಮಾಡಿದೆ. ಬೋರ್‌ವೆಲ್‌ನ್ನು ನಂಬಿದ್ದ ಕೆಲವು ವಸತಿ ಸಂಕೀರ್ಣಗಳು ಈಗ ದಿಕ್ಕು ತೋಚದಂತಾಗಿವೆ. ವಾರದಲ್ಲಿ ಹೊಟೇಲ್‌ಗಳ ಮುಚ್ಚುಗಡೆ?
ನಗರದಲ್ಲಿ ಹೊಟೇಲ್, ಲಾಡ್ಜ್ಗಳು ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಇದೇ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿದರೆ ಕೆಲವು ಹೊಟೇಲ್/ಲಾಡ್ಜ್ಗಳು ಮುಚ್ಚಲ್ಪಡುವ ಸಾಧ್ಯತೆ ಇದೆ ಎಂದು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ನೀರು ಪರೀಕ್ಷೆಗೆ ಸೂಚನೆ
ನೀರಿನ ಕೊರತೆ ಇರುವುದರಿಂದ ಕೆಲವು ಅಶುದ್ಧ ನೀರಿನ ಮೂಲಗಳ ಬಳಕೆಯಾಗುವ ಸಾಧ್ಯತೆಗಳು ಕೂಡ ಇರುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರದ ನೀರಿನ ಮೂಲಗಳ ಶುದ್ಧತೆ ಬಗ್ಗೆ ನಿಯಮಿತವಾಗಿ ಪರೀಕ್ಷೆ ನಡೆಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ತಿಳಿಸಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸರ್ವೆಕ್ಷಣಾ ಘಟಕಕ್ಕೆ ನೀರಿನ ಮಾದರಿ ನೀಡಿ ಅಲ್ಲಿಯೂ ನೀರಿನ ಶುದ್ಧತೆ ಪರೀಕ್ಷಿಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓಂ ಪ್ರಕಾಶ್ ಕಟ್ಟಿàಮನಿ ಅವರು ಪ್ರತಿಕ್ರಿಯಿಸಿದ್ದಾರೆ. ನಾಗರಿಕ ಸಮಿತಿಯಿಂದ ಇಂದಿನಿಂದ ನೀರು
ನಾಗರಿಕ ಸಮಿತಿ ಮಂಗಳವಾರದಿಂದ ನಗರದಲ್ಲಿ ಉಚಿತವಾಗಿ ಕುಡಿಯುವ ನೀರು ವಿತರಣೆಗೆ ಸಿದ್ಧತೆ ನಡೆಸಿದೆ. “ಈ ಹಿಂದಿನ ವರ್ಷಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ದಾನಿಗಳ ಸಹಕಾರದೊಂದಿಗೆ ಉಚಿತವಾಗಿ ನೀರು ವಿತರಿಸಿದ್ದೇವೆ. ಈ ಬಾರಿ ಟ್ಯಾಂಕರ್ ಲಭಿಸದೆ ಸ್ವಲ್ಪ ವಿಳಂಬವಾಯಿತು. ಮಂಗಳವಾರದಿಂದ 5,000 ಲೀಟರ್‌ನ ಸಿಂಟೆಕ್ಸ್ ಟ್ಯಾಂಕರ್ ಮೂಲಕ ವಾಹನದಲ್ಲಿ ಮನೆ ಮನೆಗಳಿಗೆ ತೆರಳಿ ಉಚಿತವಾಗಿ ನೀರು ಪೂರೈಸುತ್ತೇವೆ. ಆದರೆ ನಾವು ಮೊದಲು ಸ್ಲಂ ಏರಿಯಾಗಳಿಗೆ ನೀರು ವಿತರಿಸುತ್ತೇವೆ. ಕುಡಿಯುವುದಕ್ಕೆ ಬೇಕಾದಷ್ಟು ಅಂದರೆ ಸುಮಾರು 150 ಲೀಟರ್‌ನಷ್ಟು ನೀರು ಮಾತ್ರ ಒದಗಿಸುತ್ತೇವೆ’ ಎಂದು ಸಮಿತಿಯ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ನಾಗರಿಕರು ಏನು ಮಾಡಬಹುದು?
ಮಳೆ ಬಾರದಿದ್ದರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ನಿಚ್ಚಳ. ಹಾಗಾಗಿ ಕೊನೆಯ ಕ್ಷಣದಲ್ಲಿಯಾದರೂ ಹೆಚ್ಚಿನ ಎಚ್ಚರ ವಹಿಸುವುದು ಅತ್ಯಗತ್ಯ. ಸದ್ಯ ನಗರ ಮತ್ತು ಹೊರವಲಯದಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸಲು ನಾಗರಿಕರು ಈ ಕೆಳಗಿನ ಉಪಕ್ರಮಗಳನ್ನು ಮಾಡಬಹುದು.
– ಯಥೇತ್ಛ ನೀರು ಇರುವ ಬಾವಿ/ ಕೆರೆಗಳ ಬಗ್ಗೆ ಟ್ಯಾಂಕರ್/ನಗರಸಭೆಯವರಿಗೆ ಮಾಹಿತಿ ನೀಡುವುದು.
– ತಮ್ಮ ಮನೆ ಬಾವಿಯಲ್ಲಿ ಬೇಕಾದಷ್ಟು ನೀರಿದೆ ಎಂದಾದರೆ ಅದನ್ನು ತೋಟಗಳಿಗೆ ಬಳಸದೆ ಇತರರು ಬಳಸಲು/ ಸಾಗಿಸಲು ಅವಕಾಶ ಮಾಡಿಕೊಡುವುದು.
-ಸಾರ್ವಜನಿಕ ಸಂಘ ಸಂಸ್ಥೆಗಳು ಟ್ಯಾಂಕರ್ ನೀರು ಪೂರೈಕೆಗೆ ಸಾಮೂಹಿಕವಾಗಿ ಕೈಜೋಡಿಸುವುದು.
– ವಾಹನಗಳನ್ನು ತೊಳೆಯಲು, ಕೈ ತೋಟಗಳಿಗೆ ಸದ್ಯ ಶುದ್ಧ ನೀರು ಬಳಕೆ ಮಾಡದಿರುವುದು. ದರ ಏರುಮುಖ
ನಗರಸಭೆಯಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದೆಯಾದರೂ ಟ್ಯಾಂಕರ್ ನೀರಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚುತ್ತಲೇ ಇದೆ. 12,000 ಲೀಟರ್ ಟ್ಯಾಂಕರ್ ನೀರಿಗೆ 1,500ರಷ್ಟಿದ್ದ ಬೆಲೆ ಈಗ 3,000 ತಲುಪಿದೆ. ಬೆಲೆ ಹೆಚ್ಚು ನೀಡುವವರು ಇದ್ದಾರಾದರೂ ನೀರು ಸಿಗುತ್ತಿಲ್ಲ. ಕೆಲವು ಬಾವಿಗಳು ಬತ್ತಿ ಹೋಗಿರುವುದರಿಂದ ಟ್ಯಾಂಕರ್ ಮಾಲಕರು ಹೊಸ ಬಾವಿಗಳ ಹುಡುಕಾಟದಲ್ಲಿದ್ದಾರೆ. – ಸಂತೋಷ್ ಬೊಳ್ಳೆಟ್ಟು