Advertisement

ಉಡುಪಿ ನಗರ: ವಿದ್ಯುತ್‌ ಸಂಪರ್ಕವಿಲ್ಲದ 300 ಮನೆಗಳು

01:03 PM Nov 04, 2020 | Suhan S |

ಉಡುಪಿ, ನ. 3:  ಉಡುಪಿ ಜಿಲ್ಲೆಯಲ್ಲಿ ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ 2020ರಲ್ಲಿಯೂ ವಿದ್ಯುತ್‌ ಇಲ್ಲದ   ಮನೆಗಳೆಷ್ಟಿರಬಹುದು?  ಮೆಸ್ಕಾಂ, ನಗರಸಭೆಯವರು ಉಡುಪಿ ನಗರದಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳೇ ಇಲ್ಲ ಎನ್ನುತ್ತಾರೆ. ಇವರು ತಮಗೆ ಅರ್ಜಿ ಬಂದು, ಎಲ್ಲ ಸಕ್ರಮವಿದ್ದೂ ವಿದ್ಯುತ್‌ ಸಂಪರ್ಕವಾಗದೆ ಉಳಿದಿರುವ ಮನೆಗಳಾವುದೂ ಇಲ್ಲ ಎಂಬ ಮಾನದಂಡ ದಲ್ಲಿ ಹೇಳುತ್ತಾರೆ ವಿನಾ ಅರ್ಜಿಯನ್ನೇ ಸಲ್ಲಿಸಲಾಗದವರ ಅಂಕಿ ಅಂಶಗಳ ಆಧಾರದಲ್ಲಿ ಅಲ್ಲ.

Advertisement

ನಗರಸಭೆ ವ್ಯಾಪ್ತಿಯಲ್ಲಿ ಇನ್ನೂ ಸುಮಾರು 300 ಮನೆಗಳಿಗೆ ವಿದ್ಯುತ್‌ ಸಂಪರ್ಕವೇ ಇಲ್ಲ. ಮನೆ ತೆರಿಗೆ ಕಟ್ಟಲಾಗದವರು, ಬಾಡಿಗೆ ಮನೆಯಲ್ಲಿದ್ದು ಮಾಲಕರು ನಿರಾಕ್ಷೇಪಣ ಪತ್ರ ಸಲ್ಲಿಸಲು ನಿರಾಕರಿಸಿದವರು, ಒಬ್ಬರ ಮನೆ ಜಾಗದ ಮೇಲಿನಿಂದ ವಿದ್ಯುತ್‌ ತಂತಿಯನ್ನು ಎಳೆಯಬೇಕಾದ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸದವರು ಹೀಗೆ ವಿವಿಧ ಕಾರಣಗಳಿಂದ ಇಂತಹ ಮನೆಗಳಿಗೆ ವಿದ್ಯುತ್‌ ಸಂಪರ್ಕ ಆಗಿರಲಿಲ್ಲ. ಇವರಲ್ಲಿ ಎಲ್ಲರೂ ಕಡುಬಡತನದಲ್ಲಿರುವವರು.

ಇನ್ನೂ 26 ಮನೆಗಳಿಗೆ ವಿದ್ಯುತ್‌ ಸಂಪರ್ಕ  :  ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೆಬಲ್‌ ಟ್ರಸ್ಟ್‌ನವರು ಇಂತಹ 26 ಮನೆಗಳನ್ನು ಗುರುತಿಸಿ ವಿದ್ಯುತ್‌ ಸಂಪರ್ಕ  ಕಲ್ಪಿಸಿದ್ದು ಇದರಲ್ಲಿ ಎರಡು ಮನೆಗಳಿಗೆ ಸೋಲಾರ್‌ ದೀಪ ಅಳವಡಿಸ ಲಾಗಿದೆ.  ಇದೇ ಬರುವ ದೀಪಾವಳಿಯೊಳಗೆ ಇನ್ನೂ 26 ಮನೆಗಳನ್ನು ಹುಡುಕಿ ವಿದ್ಯುತ್‌ ಸಂಪರ್ಕ ಕೊಡಿಸ ಲಾಗುತ್ತಿದೆ. ಒಂದೊಂದು ಮನೆಗೆ 22ರಿಂದ 24 ಸಾವಿರ ರೂ. ತಗಲುತ್ತದೆ. ಇದರಲ್ಲಿ ಕಂಬದಿಂದ ತಂತಿ ಎಳೆಯುವುದು, ಮನೆಯೊಳಗೆ ತಂತಿ ಜೋಡಣೆ, ವಿದ್ಯುತ್‌ ಸಂಪರ್ಕ ಶುಲ್ಕ ಸೇರಿವೆ. ಇದಲ್ಲದೆ ಮನೆ ತೆರಿಗೆ ಕಟ್ಟಲು ಸಾಧ್ಯವಾಗದೆ ನನೆಗುದಿಗೆ ಬಿದ್ದ ಮನೆಯವ ರಿಗೆ ಟ್ರಸ್ಟ್‌ನಿಂದ ತೆರಿಗೆ ಮೊತ್ತವನ್ನು ನಗರಸಭೆಗೆ ಕಟ್ಟಿ ನಿರಾಕ್ಷೇಪಣ ಪತ್ರ ಪಡೆಯುವ ಕೆಲಸವೂ ನಡೆಯುತ್ತಿದೆ. ಪೆರಂಪಳ್ಳಿಯ ಒಂದು ಮನೆಗೆ ವಿದ್ಯುತ್‌ ಸಂಪರ್ಕವಾಗಬೇಕಾದರೆ ಮೂರು ಕಂಬಗಳು ಬೇಕಿದೆ. ಇಲ್ಲಿ ವಿದ್ಯುತ್‌ ಕಂಬಗಳನ್ನು ಹಾಕಿ ವಿದ್ಯುತ್‌ ಸಂಪರ್ಕ  ನೀಡಲಾಗುತ್ತಿದೆ.

ಹೊಸ 26 ಮನೆಗಳಲ್ಲಿ ಆರು ಮನೆಗಳಿಗೆ ಸೋಲಾರ್‌ ವಿದ್ಯುತ್‌ ಜೋಡಿಸಲಾಗುತ್ತಿದೆ. ಇದರಲ್ಲಿ ನಾಲ್ಕು ಬಲ್ಬ್, ಎರಡು ಫ್ಯಾನ್‌ಗಳು ದಿನದ 24 ಗಂಟೆಯೂ ಲಭ್ಯವಾಗುವಂತೆ ಮಾಡಲಾಗಿದೆ. ಇದಕ್ಕೆ ಮನೆಯೊಂದಕ್ಕೆ ವಯರಿಂಗ್‌ ಸೇರಿ 28,000 ರೂ. ತಗುಲುತ್ತಿದೆ. ವಿದ್ಯುತ್‌ ಶುಲ್ಕವನ್ನೂ ಕಟ್ಟಲು ಸಾಧ್ಯವಾಗದವರಿಗಾಗಿ ಈ ಮಾರ್ಗ.  ಇಂತಹ ಕಡುಬಡವರೆಂದರೆ ವಿಶೇಷವಾಗಿ ಕೊರಗ ಸಮುದಾಯದವರು, ಹಿಂದುಳಿದ ವರ್ಗದವರು, ಕ್ರೈಸ್ತ ಸಮುದಾಯದವರೂ ಇದ್ದಾರೆ.

ನಿರಾಕ್ಷೇಪಣ ಪತ್ರ ಅಗತ್ಯ :  ವಿದ್ಯುತ್‌ ಸಂಪರ್ಕ ಆಗ ಬೇಕಾದರೆ ಮೆಸ್ಕಾಂನವರಿಗೆ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣ ಪತ್ರ ಅಗತ್ಯ. ನಗರಸಭೆಯಲ್ಲಿ ಮನೆ ತೆರಿಗೆ ಬಾಕಿ ಇದ್ದಾಗ ನಿರಾಕ್ಷೇಪಣ ಪತ್ರ ನೀಡುವುದಿಲ್ಲ. ಇದರಿಂದ ಮೆಸ್ಕಾಂನಿಂದ ವಿದ್ಯುತ್‌ ಸಂಪರ್ಕವೂ ಸಾಧ್ಯವಿಲ್ಲ. ಹೀಗೆ ಬಹು ಕಾರಣಗಳಿಂದ ವಿದ್ಯುತ್‌ ಸಂಪರ್ಕ ಗಗನ ಕುಸುಮವಾಗಿದೆ.

Advertisement

ಶೇ. 100 ವಿದ್ಯುತ್‌ ಸಂಪರ್ಕ ಗುರಿ :  2022ರ ಒಳಗೆ ಉಡುಪಿ ನಗರದಲ್ಲಿ ಶೇ. 100 ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಾಧಿಸುವ ಗುರಿ ಇರಿಸಿಕೊಳ್ಳಲಾಗಿದೆ. ಪ್ರಧಾನ ಮಂತ್ರಿಯವರ ಕನಸಿನ “ಮನೆ ಮನೆ ವಿದ್ಯುತ್‌’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ. -ಪ.ವಸಂತ ಭಟ್‌, ಅಧ್ಯಕ್ಷ, ಆಸರೆ ಚಾರಿಟೆಬಲ್‌ ಟ್ರಸ್ಟ್‌, ಕಡಿಯಾಳಿ, ಉಡುಪಿ.

 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next