Advertisement

ಉಡುಪಿ-ಚಿಕ್ಕಮಗಳೂರು: ದೇಶ,ಅಭಿವೃದ್ಧಿ ಗೌಣ,ಅಭ್ಯರ್ಥಿ ಆಯ್ಕೆಯೇ ಪ್ರಧಾನ

01:27 AM Mar 22, 2019 | |

ಉಡುಪಿ/ಚಿಕ್ಕಮಗಳೂರು: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶೇ.80ರಷ್ಟು ಭೌಗೋಳಿಕ ಪ್ರದೇಶವನ್ನು ಒಳಗೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಮಲೆನಾಡು, ಬಯಲು ಸೀಮೆ ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರುತ್ತಿದ್ದು, ದೇಶದ ಹಿತ ಮತ್ತು ಅಭಿವೃದ್ಧಿ ವಿಷಯಗಳಿಗಿಂತ ಅಭ್ಯರ್ಥಿಗಳ ಆಯ್ಕೆಯೇ ರಾಜಕೀಯ ಪಕ್ಷಗಳಿಗೆ ತಲೆನೋವಾಗಿದೆ. ಜತೆಗೆ ಕ್ಷೇತ್ರ ಪುನಾರಚನೆಯಾದ ಅನಂತರ ಇದುವರೆಗೆ ಚಿಕ್ಕಮಗಳೂರು ಜಿಲ್ಲೆಯ ವರಿಗೆ ಟಿಕೆಟ್‌ ಸಿಗುವ ಅವಕಾಶ ದೊರಕಲಿಲ್ಲ ಎಂಬ ಕೊರಗು ಎಲ್ಲ ಪಕ್ಷಗಳನ್ನೂ ಕಾಡುತ್ತಿದ್ದು, ಈ ಬಾರಿಯೂ ಮುಂದುವರಿದಿದೆ.

Advertisement

 ಮೂರೂ ಪಕ್ಷಗಳಲ್ಲೂ ಅಸಮಾಧಾನ  
ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಜೆಡಿಎಸ್‌ಗೆ ಈ ಬಾರಿ ಮೈತ್ರಿ ಸೂತ್ರದನ್ವಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಗಿದೆ. ಇದು ವಿಶೇಷವಾಗಿ ಸ್ಥಳೀಯ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡಿದೆ.  ಬೂತ್‌ ಸಮಿತಿಗಳೇ ಇಲ್ಲದ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟಿರುವುದರಲ್ಲಿ ಏನರ್ಥವಿದೆ? ಎಂದು ಎರಡೂ ಜಿಲ್ಲೆಗಳ ಕಾಂಗ್ರೆಸ್‌ ನಾಯಕರು ಪ್ರಶ್ನಿಸುತ್ತಿದ್ದಾರೆ.  ಕೆಲವು ನಾಯಕರು ತಮ್ಮ ಅಸಮಾಧಾನವನ್ನು ಹೈಕಮಾಂಡ್‌ಗೆ ತಿಳಿಸಿದರೂ, ಪ್ರಯೋಜನ ಆಗಿಲ್ಲ. ಇನ್ನೊಂದೆಡೆ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳಿಗೆ ಬಾಗಿಲು ಮುಚ್ಚಿದಂತಾಗಿದೆ.

ಇನ್ನು ಜೆಡಿಎಸ್‌ನಲ್ಲಿ ಅವರದೇ ಅಭ್ಯರ್ಥಿಗಳಿಗಿಂತ ಇತರ ಪಕ್ಷಗಳ ನಾಯಕರನ್ನೇ ಗುರಿಯಾಗಿಸುವ ಯತ್ನ ನಡೆದಿದೆ. ಕಾಂಗ್ರೆಸ್‌ ನಾಯಕ ಪ್ರಮೋದ್‌ ಮಧ್ವರಾಜ್‌, ಈಗಾಗಲೇ ಜೆಡಿಎಸ್‌ ವರಿಷ್ಠ ದೇವೇಗೌಡ, ಸಿಎಂಕುಮಾರಸ್ವಾಮಿಯವರನ್ನು ಭೇಟಿಯಾಗಿ, ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರಿದ್ದಾರೆ. ಅವರಿಗೆ ಜೆಡಿಎಸ್‌ಗಿಂತ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಮನವೊಲಿಸುವುದು ಮುಖ್ಯವಾಗುತ್ತದೆ. ಇವೆಲ್ಲದರ ನಡುವೆ ಮೈತ್ರಿ ಸರಕಾರದ ಸಾಧನೆ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧದ ಅಸಮಾಧಾನ ಪಕ್ಷಕ್ಕೆ ವರದಾನವಾಗುವ ಸಾಧ್ಯತೆ ಹೆಚ್ಚು.

ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರು ಮರಳಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮತ್ತೆ ಕಣಕ್ಕಿಳಿಯಲಿದ್ದಾರೆ.  ಪಕ್ಷದಲ್ಲಿ ಪ್ರಭಾವಿಯಾಗಿದ್ದರೂ, ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರ ಜತೆ ಸಂಪರ್ಕ ಇಟ್ಟುಕೊಳ್ಳಲಿಲ್ಲ ಎಂಬ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ  “ಗೋ ಬ್ಯಾಕ್‌’ ಚಳವಳಿಯವರೆಗೆ ಮುಂದುವರಿದಿತ್ತು. 
ಇನ್ನು ಟ್ವಿಟರ್‌ ಅಂಕದಲ್ಲಿ ನೆಗೆತ ಕಂಡಿದ್ದ ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆಗೆ ಟಿಕೆಟ್‌ ತಪ್ಪಿರುವುದು ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿದೆ. ಇದರ ಪರಿಣಾಮ ದಾಖಲೆ ಪ್ರಮಾಣದಲ್ಲಿ  “ನೋಟಾ’ ಚಲಾವಣೆಯಾಗುವ ಸಾಧ್ಯತೆ ಇದೆ. ಹಿಂದೆ ಮೂರ್‍ನಾಲ್ಕು ಅವಧಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಹೆಗ್ಡೆಯವರು, ಈ ಬಾರಿ ಪಕ್ಷೇತರರಾಗಿ ಕೇವಲ ನಾಮಪತ್ರ ಸಲ್ಲಿಸಿದರೂ ಮೂರೂ ಪಕ್ಷಗಳ ಮತದಾರರ ಧ್ರುವೀಕರಣದಿಂದ ಗೆಲ್ಲುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಹೆಗ್ಡೆಯವರು ಈ ಹಂತದಲ್ಲಿ ಇಂಥ ನಿರ್ಧಾರ ತಳೆಯುವುದು ಅಸಂಭವ ಎಂದು ಹೇಳಲಾಗುತ್ತಿದೆ.

ಇವೆಲ್ಲದರ ನಡುವೆ, ಕಡೂರು-ಚಿಕ್ಕಮಗಳೂರು- ಮೂಡಿಗೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸು ವಲ್ಲಿ ಶೋಭಾ ಶ್ರಮ ಹೆಚ್ಚಿನದ್ದಾಗಿದೆ ಎಂಬುದು ಬಿಜೆಪಿಯವರ ಮಾತು. ಜತೆಗೆ ಪಕ್ಷದ ವರಿಷ್ಠರ ಬೆಂಬಲ, ವೈಯಕ್ತಿಕ ವರ್ಚಸ್ಸು, ಮೋದಿ ಹವಾ ಬಿಜೆಪಿಗೆ ಪ್ಲಸ್‌ ಪಾಯಿಂಟ್‌. 

Advertisement

ಕಾಫಿ ನಾಡಲ್ಲಿ ನೀಗಿಲ್ಲ ರೈತರ ಸಂಕಷ್ಟ
 “ಕಾಫಿ ನಾಡು’ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳೇ ಈ ಬಾರಿಯೂ ಚುನಾವಣ ಪ್ರಚಾರದ ಪ್ರಮುಖ ವಿಷಯಗಳಾಗಿವೆ. ಅಡಿಕೆಗೆ ಹಳದಿ ಎಲೆರೋಗ ಸಮಸ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಹಿಂದಿನ ಯುಪಿಎ ಸರಕಾರ ಗೋರಖ್‌ಸಿಂಗ್‌ ನೇತೃತ್ವದ ಸಮಿತಿಯನ್ನು 2009ರಲ್ಲಿ ಜಿಲ್ಲೆಗೆ ಕಳುಹಿಸಿತ್ತು. ವರದಿ ಸಲ್ಲಿಕೆಯಾಗಿದ್ದರೂ ಕೇಂದ್ರ ಸರಕಾರ ಈವರೆಗೂ ಸಮಿತಿಯ ವರದಿಯ ಅಂಶಗಳನ್ನು ಜಾರಿಗೆ ತಂದಿಲ್ಲ. ಜತೆಗೆ ಅಡಿಕೆ ವಿಷಕಾರಕ ಬೆಳೆಯಾಗಿದ್ದು, ಇದನ್ನು ನಿಷೇಧಿಸಬೇಕೆಂಬ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಇದು ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಇನ್ನು ಕಳಪೆ ಗುಣಮಟ್ಟದ ಮೆಣಸನ್ನು ಸಾರ್ಕ್‌ ರಾಷ್ಟ್ರಗಳ ಮೂಲಕ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಬೆಳೆಯುವ ಮೆಣಸಿನ ಬೆಲೆ ಕುಸಿದಿದೆ ಎಂಬ ಆರೋಪ ಬೆಳೆಗಾರರದ್ದು. ಹಾಗಾಗಿ ಮೆಣಸು ಮತ್ತು ಕಾಫಿ ಬೆಳೆಗಾರರ ಸಮಸ್ಯೆ ಕೂಡ ಚುನಾವಣ ಪ್ರಚಾರದ ವೇಳೆ ಪ್ರಸ್ತಾವವಾಗಲಿದೆ.

ಉಡುಪಿ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ, ಚಿಕ್ಕಮಗಳೂರಿನಲ್ಲಿ ವಿಭಾಗೀಯ ಅಂಚೆ ಕಚೇರಿ ಸ್ಥಾಪನೆ ಸಹಿತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಭಿವೃದ್ಧಿಗೆ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಮೊತ್ತದ ಹಣ ಬಿಡುಗಡೆ ಆಗಿದೆ.
– ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ.

Advertisement

Udayavani is now on Telegram. Click here to join our channel and stay updated with the latest news.

Next