Advertisement

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

11:53 PM Apr 13, 2024 | Team Udayavani |

ಉಡುಪಿ: ಕ್ಷೇತ್ರ ಮರುವಿಂಗಡನೆಯ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಒಂದು ಉಪಚುನಾವಣೆ ಸಹಿತ ಈಗ 4ನೇ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿದೆ. ಎಲ್ಲ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದವರು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದು ಕರಾವಳಿಯವರನ್ನೇ !

Advertisement

ಉಡುಪಿ ಲೋಕಸಭಾ ಕ್ಷೇತ್ರವು 2008ರಲ್ಲಿ ಮರುವಿಂಗಡನೆ ಹೊಂದಿ ಉಡುಪಿ-ಚಿಕ್ಕಮಗಳೂರು ಎಂದು ಹೊಸ ಕ್ಷೇತ್ರವಾಯಿತು. ಉಡುಪಿ ಜಿಲ್ಲೆಯ ಐದರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತು ಉಡುಪಿ ಚಿಕ್ಕಮಗಳೂರು ಕ್ಷೇತ್ರ. ಉಳಿದ ಒಂದು ವಿಧಾನಸಭಾ ಕ್ಷೇತ್ರ ಬೈಂದೂರು ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಸೇರ್ಪಡೆ ಆಯಿತು. ಆ ಬಳಿಕ ಈ ಕ್ಷೇತ್ರಕ್ಕೆ ಕರಾವಳಿ ಮತ್ತು ಮಲೆನಾಡು ಪ್ರದೇಶದ ಮೆರುಗು ಬಂದಿತು.

2009ರಲ್ಲಿ ಹೊಸ ಕ್ಷೇತ್ರದ ಮೊದಲ ಚುನಾವಣೆ. ಬಿಜೆಪಿಯು ಸುಳ್ಯ ಮೂಲದ ಡಿ.ವಿ.ಸದಾನಂದ ಗೌಡ, 2012ರಲ್ಲಿ ಕಾರ್ಕಳದ ವಿ.ಸುನಿಲ್‌ ಕುಮಾರ್‌, 2014, 2019ರಲ್ಲಿ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆ ಹಾಗೂ ಈಗ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್‌ ನೀಡಿದೆ. ಇದರಲ್ಲೂ ವಿಶೇಷವೆಂದರೆ ಹೆಚ್ಚು ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಜಿಲ್ಲೆಯ ಹೊರಗಿನವರೇ.

ಕಾಂಗ್ರೆಸ್‌ 2009ರಿಂದ 2014ರ ವರೆಗಿನ ಮೂರು ಚುನಾವಣೆಯಲ್ಲೂ ಕುಂದಾಪುರ ಕೊರ್ಗಿಯ ಜಯಪ್ರಕಾಶ್‌ ಹೆಗ್ಡೆಯವರಿಗೆ ಟಿಕೆಟ್‌ ನೀಡಿತ್ತು. 2019ರಲ್ಲಿ ಉಡುಪಿಯ ಪ್ರಮೋದ್‌ ಮಧ್ವರಾಜ್‌ ಅವರಿಗೆ ಮತ್ತು ಈಗ ಜಯಪ್ರಕಾಶ್‌ ಹೆಗ್ಡೆಯವರಿಗೆ ಮತ್ತೆ ಅವಕಾಶ ನೀಡಿದೆ. ಒಟ್ಟಾರೆಯಾಗಿ ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳೆರಡೂ ನೆಚ್ಚಿಕೊಂಡಿ ರುವುದು ಕರಾವಳಿಗರನ್ನೇ.

ಹಲವು ಲೆಕ್ಕಾಚಾರ
ಕರಾವಳಿ ನಾಯಕರ ಪರಿಚಯ ಮಲೆನಾಡು ಭಾಗ ದವರಿಗೆ ಹಾಗೂ ಹಾಗೆಯೇ ಮಲೆನಾಡು ಭಾಗದ ನಾಯಕರ ಪರಿಚಯ ಕರಾವಳಿಗರಿಗೆ ಇರದು. ಜಿಲ್ಲಾ ನಾಯಕರಿಗೆ ಟಿಕೆಟ್‌ ನೀಡಿದರೆ ಎರಡೂ ಪಕ್ಷಕ್ಕೂ ಹೊಡೆತ ಬೀಳುವ ಸಾಧ್ಯತೆ ಇರಲಿದೆ ಎಂಬುದು ಒಂದು ಲೆಕ್ಕಾಚಾರ. ಜತೆಗೆ ರಾಜ್ಯ ವ್ಯಾಪ್ತಿ ಪರಿಚಿತ ಮುಖ ಹಾಗೂ ಜಾತಿ ಲೆಕ್ಕಾಚಾರದ ಆಧಾರದಲ್ಲೇ ಇದುವರೆಗೂ ಟಿಕೆಟ್‌ ಹಂಚಲಾಗುತ್ತಿದೆ.

Advertisement

2009ರಿಂದ 2019ರ ಚುನಾವಣೆವರೆಗೂ(ಉಪ ಚುನಾವಣೆ ಹೊರತುಪಡಿಸಿ) ಬಿಜೆಪಿ ಹೊರ ಜಿಲ್ಲೆಯವರಿಗೆ ಟಿಕೆಟ್‌ ನೀಡಿದ್ದರೂ ಕರಾವಳಿಗರಿಗೆ ಕೊಟ್ಟಿದೆ. ಕಾಂಗ್ರೆಸ್‌ ಎಲ್ಲ ಚುನಾವಣೆಯಲ್ಲೂ ಉಡುಪಿ ಜಿಲ್ಲೆಯವರಿಗೇ ಟಿಕೆಟ್‌ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯಿಂದ ಸಿಟಿ ರವಿ, ಕಾಂಗ್ರೆಸ್‌ನಿಂದ ಡಾ| ಅಂಶುಮತ್‌, ಸುಧೀರ್‌ ಕುಮಾರ್‌ ಮರೋಳಿ ಆಕಾಂಕ್ಷಿಗಳಾಗಿ ದ್ದರೂ ಅವಕಾಶ ದೊರೆತಿರುವುದು ಕರಾವಳಿಗರಿಗೆ.

ಆಡಳಿತಾತ್ಮಕ
ಲೆಕ್ಕಾಚಾರವೂ ಇದೆ
ಲೋಕಸಭಾ ಕ್ಷೇತ್ರದ ಕೇಂದ್ರ ಉಡುಪಿ ಜಿಲ್ಲೆ. ಜಿಲ್ಲಾಧಿಕಾರಿ ಕಚೇರಿಯೇ ಚುನಾವಣಾಧಿಕಾರಿ ಕಚೇರಿ. ಹೀಗಾಗಿ ಬಹುಪಾಲು ಚುನಾವಣ ಪ್ರಕ್ರಿಯೆಗಳು ಇಲ್ಲಿಂದಲೇ ನಡೆಯಲಿದೆ. ಹೀಗಾಗಿ ಈ ಕ್ಷೇತ್ರವು ಉಡುಪಿಗೆ ಹೆಚ್ಚು ನೆಚ್ಚಿಕೊಂಡಿದೆ. ಮತದಾರರ ಸಂಖ್ಯೆಯಲ್ಲೂ ಉಡುಪಿಯೇ ಮೇಲಿದೆ. ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 7.30 ಲಕ್ಷ ಮತದಾರರಿದ್ದರೆ, ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪು ಮತಕ್ಷೇತ್ರದಲ್ಲಿ 8.42 ಲಕ್ಷ ಮತದಾರರಿದ್ದಾರೆ. ಭೌಗೊಳಿಕ ವ್ಯಾಪ್ತಿ ದೊಡ್ಡದಿರುವುದರಿಂದ ಚಿಕ್ಕಮಗಳೂರಿನಲ್ಲಿ ಮತಗಟ್ಟೆಗಳು ಹೆಚ್ಚಿವೆ.

ಜಾತಿ ಲೆಕ್ಕಾಚಾರ
ಉಡುಪಿ ಜಿಲ್ಲೆಯಲ್ಲಿ ಬಿಲ್ಲವ, ಬಂಟ ಹಾಗೂ ಮೊಗವೀರ ಸಮುದಾಯಗಳು ಪ್ರಧಾನ ಪಾತ್ರ ವಹಿಸುತ್ತವೆ.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದವರು ಪ್ರಮುಖ. ಎರಡೂ ಜಿಲ್ಲೆಗಳಲ್ಲೂ ಅಲ್ಪಸಂಖ್ಯಾಕರ ಮತವೂ ಸಾಕಷ್ಟಿದೆ. ಇತರೆ ಹಿಂದುಳಿದ ವರ್ಗ ಹಾಗೂ ಎಸ್ಸಿ, ಎಸ್ಟಿ ಮತಗಳು ಗಣನೀಯ ಪ್ರಮಾಣದಲ್ಲಿದೆ. 2009ರಿಂದ ಈಚೆಗೆ ಕಾಂಗ್ರೆಸ್‌ ಒಮ್ಮೆ ಮೊಗವೀರ(ಜೆಡಿಎಸ್‌ ಕಾಂಗ್ರೆಸ್‌ ಒಟ್ಟಾಗಿದ್ದಾಗ), ಉಳಿದಂತೆ ಬಂಟರಿಗೆ ಹಾಗೂ ಬಿಜೆಪಿ ಎರಡು 3 ಬಾರಿ ಒಕ್ಕಲಿಗ ಹಾಗೂ 2 ಬಾರಿ ಬಿಲ್ಲವರಿಗೆ ಮಣೆ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next