Advertisement

Udupi ನಾಲ್ವರ ಹತ್ಯೆ ಪ್ರಕರಣ: ಮುಂದುವರಿದ ಮಹಜರು ಪ್ರಕ್ರಿಯೆ

11:23 PM Nov 19, 2023 | Team Udayavani |

ಉಡುಪಿ: ನೇಜಾರಿನಲ್ಲಿ ನಾಲ್ವರ ಹತ್ಯೆ ಪ್ರಕರಣದ ಆರೋಪಿಯ ಮಹಜರು ಪ್ರಕ್ರಿಯೆ ರವಿವಾರವೂ ಮಂಗಳೂರಿನಲ್ಲಿ ನಡೆಯಿತು. ಬಹುತೇಕ ಎಲ್ಲ ವಸ್ತುಗಳನ್ನು ಆತನಿಂದ ವಶಕ್ಕೆ ಪಡೆಯಲಾಗಿದ್ದು, ಒಂದು ಬಟ್ಟೆಯನ್ನು ಮಾತ್ರ ಸುಟ್ಟಿರುವ ಮಾಹಿತಿಯನ್ನು ಆರೋಪಿ ನೀಡಿದ್ದು, ಸುಟ್ಟಿರುವ ಜಾಗದಲ್ಲಿ ಸೋಮವಾರ ಮಹಜರು ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ.

Advertisement

ಹತ್ಯೆ ನಡೆದ ಸಂದರ್ಭ ಮನೆಯೊಳಗೆ ರಕ್ತದ ಓಕುಳಿಯೇ ಹರಿದಿದೆ. ಸಾಕಷ್ಟು ಪೂರ್ವತಯಾರಿ ನಡೆಸಿಯೇ ಈ ಕೃತ್ಯ ಮಾಡಿದಂತಿತ್ತು ಎನ್ನುತ್ತಾರೆ ಘಟನೆ ನಡೆದ ದಿನ ಬೆಳಗ್ಗಿನಿಂದ ಸಂಜೆಯವರೆಗೂ ಆ ಮನೆಯೊಳಗಿದ್ದ ಸಮಾಜ ಸೇವಕ ಈಶ್ವರ ಮಲ್ಪೆ ಅವರು. ಮೃತದೇಹವನ್ನು ತರಲು ಸಹಾಯಕರಾಗಿ ಈಶ್ವರ ಅವರು ತೆರಳಿದ್ದರು.

ಇದುವರೆಗೆ ಇಂತಹ ಭೀಕರ ಘಟನೆಯನ್ನು ನಾನೆಂದೂ ಕಂಡಿಲ್ಲ. ದೇಹದ ಯಾವ ಭಾಗಕ್ಕೆ ಚೂರಿ ಹಾಕಿದರೆ ಹೆಚ್ಚು ರಕ್ತ ಬರುತ್ತದೋ ಅದೇ ಭಾಗಕ್ಕೆ ಚೂರಿ ಇರಿದಿದ್ದಾನೆ. ಎಲ್ಲರ ಸಾವನ್ನು ಖಚಿತಪಡಿಸಿಕೊಂಡೇ ಆತ ತೆರಳಿದ್ದಾನೆ ಎನ್ನಬಹುದು.

ಹೊಟ್ಟೆ, ಎದೆ, ಕುತ್ತಿಗೆ ಭಾಗಕ್ಕೆ ಮನಬಂದಂತೆ ಚುಚ್ಚಲಾಗಿತ್ತು. ಆತ ಚುಚ್ಚಿದ ರಭಸಕ್ಕೆ ಎಲ್ಲರೂ ಅತೀವ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುತ್ತಾರೆ ಈಶ್ವರ್‌ ಅವರು.

ಮಂಗಳವಾರ ಕೋರ್ಟ್‌ಗೆ ಹಾಜರು?
ನ. 15ರಂದು ಆರೋಪಿಯನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಟಿಲ ಪ್ರಕರಣವಾಗಿದ್ದ ಕಾರಣ ತನಿಖೆ ನಡೆಸಲು ಪೊಲೀಸರು 14 ದಿನ ಆರೋಪಿಯನ್ನು ನಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಲ್ಲಿ ಕೋರಿಕೊಂಡಿದ್ದರು. ಅದರಂತೆ 14 ದಿನ ಅಂದರೆ ನ. 28ರ ವರೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಧೀಶರು ಆದೇಶ ಮಾಡಿದ್ದರು. ಮಹಜರು ಪ್ರಕ್ರಿಯೆ ಸಹಿತ ಆರೋಪಿ ಕೊಲೆಗೆ ಬಳಸಿದ್ದ ಬಹುತೇಕ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಾಗಿದೆ. ತನಿಖೆಯನ್ನೂ ಪೊಲೀಸರು ತ್ವರಿತಗತಿಯಲ್ಲಿ ಮಾಡುತ್ತಲೇ ಇದ್ದಾರೆ. ತನಿಖಾ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಬಲವಾದ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವಂತೆ ಕ್ಷಿಪ್ರಗತಿಯನ್ನು ವಿಚಾರಣೆ, ತನಿಖೆಯಾಗಿದೆ.

Advertisement

ರವಿವಾರದವರೆಗೆ ಐದೇ ದಿನಗಳಲ್ಲಿ ಶೇ. 98ರಷ್ಟು ಪ್ರಕ್ರಿಯೆಗಳನ್ನು ಪೊಲೀಸರು ಪೂರ್ಣಗೊಳಿಸಿದ್ದಾರೆ. ಹಾಗಾಗಿ ಆರೋಪಿಯನ್ನು ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next