Advertisement

ದುರ್ನಾತಕ್ಕೆ ಉಸಿರು ಕಟ್ಟಿಕೊಂಡು ನಿಲ್ಲುವ ಪ್ರಯಾಣಿಕರು!​​​​​​​

06:00 AM Jun 19, 2018 | Team Udayavani |

ಉಡುಪಿ:  ನಗರದ ಸರ್ವಿಸ್‌ ಬಸ್‌ನಿಲ್ದಾಣದಲ್ಲಿ ಸ್ವತ್ಛತೆಗೆ ಒತ್ತು ಕೊಡುತ್ತಿಲ್ಲ. ನಿಲ್ದಾಣ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆಯಿಲ್ಲದೆ  ಪ್ರಯಾಣಿಕರು ಅನಿವಾರ್ಯವಾಗಿ ಉಸಿರು ಕಟ್ಟಿಕೊಂಡು ನಿಲ್ಲಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರತಿನಿತ್ಯ ಬೆಳಗ್ಗೆ  ಸುಮಾರು 5.30ರಿಂದ ರಾತ್ರಿ 12ರ ವರೆಗೆ ಎಡೆಬಿಡದೆ ಸುಮಾರು 300-400 ಬಸ್‌ಗಳು ಬರುತ್ತವೆ. ಸಾವಿರಾರು ಪ್ರಯಾಣಿಕರು ಇಲ್ಲಿನ ಬಸ್‌ ಪ್ರಯಾಣಿಕರು. ಕುಂದಾಪುರ, ಮಂಗಳೂರು, ಕಾರ್ಕಳ, ಬೆಂಗಳೂರು, ರಾಯಚೂರು, ಗುಲ್ಬರ್ಗಾ, ಬಾಗಲಕೋಟೆ, ಶಿವಮೊಗ್ಗ ಹಾಗೂ ಸ್ಥಳೀಯ ಭಾಗಗಳಿಗೆ ತೆರಳುವ ಖಾಸಗಿ ಬಸ್‌ಗಳು ನಿತ್ಯ ಇಲ್ಲಿಗೆ ಬರುತ್ತವೆ.  ತಾಲೂಕು, ಜಿಲ್ಲೆ, ರಾಜ್ಯಗಳಿಗೆ ಸಂಪರ್ಕ ಕೊಂಡಿಯಂತೆ ಇದು ಕಾರ್ಯನಿರ್ವಹಿಸುತ್ತಿದೆ. 

ಆಸನಗಳಿದ್ದರೂ ಪ್ರಯೋಜನವಿಲ್ಲ!
ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಲ್ಪಿಸಲಾದ ಆಸನಗಳಲ್ಲಿ ಕೆಲವಷ್ಟು ಮುರಿದು ಹೋಗಿದ್ದರೆ, ಇನ್ನು ಕೆಲವಷ್ಟು ಮುರಿಯುವ ಹಂತದಲ್ಲಿವೆ. ಕೆಲವು ಆಸನಗಳು ಮುರಿದು ಕೆಳಗಡೆ ಬಿದ್ದುಕೊಂಡಿವೆ. ದೂರದೂರುಗಳಿಗೆ ತೆರಳುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸರಿಯಿಲ್ಲದೆ ತಮ್ಮ ಲಗೇಜಿನೊಂದಿಗೆ ಅಂಗಡಿಗಳ ಎದುರಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರು, ಮಕ್ಕಳು ಇಲ್ಲಿನ ಆಸನಗಳಲ್ಲಿ ಕುಳಿತುಕೊಳ್ಳುವಲ್ಲಿ ಸ್ವಲ್ಪ ಎಡವಿದರೂ ಬೀಳಬೇಕಾದ ಸ್ಥಿತಿಯಿದೆ. ಇಲ್ಲಿ ಹಲವರು ಬಿದ್ದ ಘಟನೆಗಳೂ ನಡೆದಿವೆ.

ಉಗುಳಲ್ಪಟ್ಟ  ಪಾನ್‌/ಗುಟ್ಕಾ ಕಲೆ
ಬಸ್‌ನಿಲ್ದಾಣದ ಎಲ್ಲ ಮೂಲೆಗಳಲ್ಲಿಯೂ ಪಾನ್‌ ಬೀಡ, ಗುಟ್ಕಾಗಳನ್ನು ಜಗಿದು ಉಗಿದ ಕಲೆಗಳು ಪ್ರಯಾಣಿಕರಿಗೆ ವಾಕರಿಕೆ ತರುತ್ತಿದೆ. ಕೆಲವರು ತಾವು ಕುಳಿತಲ್ಲಿಂದಲೇ ಉಗುಳುವುದರಿಂದ ಆಸನಗಳ ಎದುರಿನಲ್ಲಿ ಗುಟ್ಕಾ ಕಲೆಯೇ ಆಗಿ ಹೋಗಿದೆ. ಇದರಿಂದಾಗಿ ನಿಲ್ದಾಣದೊಳಗೆ ತಿರುಗಾಡಲು ಅಸಹ್ಯವಾಗುತ್ತಿದೆ. ಅಂಗಡಿಯಿಂದ ಬೊಂಡ ಖರೀದಿಸಿ ಆಸನದ ಮೇಲೆ ಕುಳಿತು ಕುಡಿದವರು ಅಲ್ಲಿಯೇ ಬಿಟ್ಟು ತೆರಳುವುದು, ಐಸ್‌ಕ್ರೀಂ ತಿಂದು ಕಡ್ಡಿಯನ್ನು ಡಸ್ಟ್‌ಬಿನ್‌ಗೆ ಹಾಕದೆ ತಿಂದಲ್ಲಿಯೇ ಬಿಸಾಡುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿಗಳಿವೆ.

ಬೋರ್ಡ್‌ ಹೈಸ್ಕೂಲ್‌ ನಿಲ್ದಾಣ
ಅವ್ಯವಸ್ಥೆಯಿಂದ ಕೂಡಿದ ಬಸ್‌ನಿಲ್ದಾಣದಲ್ಲಿ ನಿಲ್ಲಲಾಗದೆ ಅದೆಷ್ಟೋ ಪ್ರಯಾಣಿಕರು ಬೋರ್ಡ್‌ ಹೈಸ್ಕೂಲ್‌ ಎದುರಿನಲ್ಲಿ ನಿಂತು ಬಸ್‌ ಏರುತ್ತಿದ್ದಾರೆ. ಸುತ್ತಮುತ್ತಲಿನ ರಸ್ತೆಗಳಿಂದ ಬರುವ ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸುವ ಬೋರ್ಡ್‌ ಹೈಸ್ಕೂಲ್‌ ಎದುರಿನ ರಸ್ತೆಯಲ್ಲಿ ಸದಾ ಜನಸಂಚಾರವಿದೆ. ಇಲ್ಲಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.

Advertisement

ಶೀಘ್ರ ಪರಿಹಾರ
ಮುಂದಿನ ಬಜೆಟ್‌ನಲ್ಲಿ ಹಣವಿರಿಸಿ ಮುರಿಯಲ್ಪಟ್ಟ ಆಸನಗಳನ್ನು ರಿಪೇರಿ ಮಾಡಲಾಗುವುದು. ಅಲ್ಲದೇ ಹಾಳಾಗಿ ಹೋದ ಆಸನಗಳನ್ನು ತೆಗೆದು ಹಾಕಿ ಹೊಸ ಆಸನಗಳನ್ನು ವ್ಯವಸ್ಥೆಗೊಳಿಸಲಾಗುವುದು. ನಗರಸಭೆಯಿಂದ ದಿನನಿತ್ಯ ಸ್ವತ್ಛತೆಗೊಳಿಸಲಾಗುತ್ತಿದೆ. ಆದರೂ ಕಸ ಕಡ್ಡಿಗಳು ಬೀಳುತ್ತಿರುತ್ತವೆ. ಈ ಬಗ್ಗೆಯೂ ಶೀಘ್ರವಾಗಿ ಗಮನಹರಿಸಲಾಗುವುದು. 
– ಜಿ.ಸಿ.ಜನಾರ್ದನ್‌
ಪೌರಾಯುಕ್ತರು, ನಗರಸಭೆ ಉಡುಪಿ.

ಎಸ್‌ಜಿ ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next