Advertisement
ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಸಿಬಂದಿ ಸಾಮರ್ಥ್ಯ ಹೇಗಿದೆ ಅನ್ನುವ ಬಗ್ಗೆಯ ಉದಯವಾಣಿ ಸುದಿನ ರಿಯಾಲಿಟಿ ಚೆಕ್ ಮಾಡಿದಾಗ ಎಲ್ಲವೂ ಖಾಲಿಯದ್ದೇ ಕಥೆ. ಪರಿಣಾಮ ಸಾವಿರಾರು ಜನರ ನಿತ್ಯದ ಕೆಲಸ ಕಾರ್ಯಗಳು ಕ್ಲಪ್ತ ಸಮಯಕ್ಕೆ ಆಗುತ್ತಿಲ್ಲ. ಜನರು ಇಲಾಖೆಯ ಮೇಲೆ ಬೆರಳು ತೋರಿಸಿದರೆ, ಇಲಾಖೆಯವರು ಖಾಲಿ ಹುದ್ದೆಯ ಕಡೆ ಬೊಟ್ಟು ಮಾಡುತ್ತಾರೆ. ಹೊಸ ವರ್ಷದ ಹೊಸ್ತಿಲಿನಲ್ಲಾದರೂ ಕೊರತೆ ತುಂಬುವ ಪ್ರಯತ್ನ ನಡೆದು ಕಚೇರಿಗಳಲ್ಲಿ ಜನರ ಕೆಲಸಕ್ಕೆ ವೇಗ ಸಿಗುವಂತಾಗಲಿ. ಇದು ಸರಕಾರಿ ಕಚೇರಿಗಳ ಸಾಮರ್ಥ್ಯದ ಬಲಾಬಲದ ನೋಟ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿ
ಮಂಜೂರಾತಿ ಹುದ್ದೆ : 27
ಖಾಲಿ ಇರುವ ಹುದ್ದೆ : 23
ಕೊರತೆ ಪ್ರಮಾಣ: 85.18 ಶೇ. ಖಾಲಿ ಇರುವ ಪ್ರಮುಖ ಹುದ್ದೆಗಳು: ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಕೃಷಿಕರಿಗೆ ಸಬ್ಸಿಡಿ ರೂಪದಲ್ಲಿ ಬರುವ ಬಹುತೇಕ ಸವಲತ್ತುಗಳು ಇಲ್ಲಿಯೇ ವಿಲೇ ಆಗುವುದು ಇಲ್ಲಿ. ತಾಲೂಕು ವ್ಯಾಪ್ತಿಗೆ ಇರುವ ಇಲಾಖೆಯ ಪ್ರಮುಖ ಹುದ್ದೆ ಸಹಾಯಕ ಕೃಷಿ ನಿರ್ದೇಶಕ. ಈ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿ ನೇಮಕ ಆಗಿಲ್ಲ. 5 ಕೃಷಿ ಅಧಿಕಾರಿ ಹುದ್ದೆಯಲ್ಲಿ 4, 11 ಸಹಾಯಕ ಕೃಷಿ ಅಧಿಕಾರಿ ಹುದ್ದೆಯಲ್ಲಿ 10 ಖಾಲಿ ಇದೆ. ಅಂದರೆ ಕ್ಷೇತ್ರ ಸಂಚಾರಕ್ಕೆ ಇಲ್ಲಿ ಅಧಿಕಾರಿಗಳ ಸಂಖ್ಯೆಯೇ ಶೂನ್ಯ. ಎಫ್ಡಿಎ, ಬೆರಳಚ್ಚುಗಾರ, ವಾಹನ ಚಾಲಕ, ಗ್ರೂಪ್ ಡಿ ಎಲ್ಲ ಹುದ್ದೆಗಳು ಖಾಲಿ ಇವೆ.
Related Articles
Advertisement
ಕಂದಾಯತಾಲೂಕು ಕಚೇರಿ
ಮಂಜೂರಾತಿ ಹುದ್ದೆ : 79
ಖಾಲಿ ಇರುವ ಹುದ್ದೆ : 34
ಕೊರತೆ ಪ್ರಮಾಣ : 43.58 ಶೇ. ಖಾಲಿ ಇರುವ ಪ್ರಮುಖ ಹುದ್ದೆಗಳು: ಗ್ರಾಮ ಲೆಕ್ಕಿಗರು, ತಹಶೀಲ್ದಾರ್ ಗ್ರೇಡ್-2, ಗ್ರೂಫ್ ಡಿ ಹುದ್ದೆ.
ಮುಖ್ಯಾಂಶ: ಭೂ ಸಂಬಂಧಿತ ಕೆಲಸಗಳು ಇಲ್ಲಿಯೇ ಆಗುವುದು. ಎಲ್ಲ ಇಲಾಖೆಗಳಿಗೆ ಹೋಲಿಸಿದರೆ ಇಲ್ಲಿ ದಿನನಿತ್ಯವೂ ಜನದಟ್ಟಣೆ ತಪ್ಪುವುದಿಲ್ಲ. ಹಾಗಂತ ಅದಕ್ಕೆ ಬೇಕಾದಷ್ಟು ಸೌಲಭ್ಯಗಳು ಇಲ್ಲಿಲ್ಲ. ತಹಶೀಲ್ದಾರ್ ಗ್ರೇಡ್-2 ಹುದ್ದೆ ಖಾಲಿ ಇದೆ. ಗ್ರೂಪ್ ಡಿಯಲ್ಲಿ 9 ರ ಪೈಕಿ 7 ಹುದ್ದೆ ಖಾಲಿ ಇವೆ. ಎಸ್ಡಿಎ 4, ಬೆರಳಚ್ಚುಗಾರ-2, ಗ್ರಾಮ ಲೆಕ್ಕಿಗ-14 ಹೀಗೆ ಬಹುತೇಕ ಎಲ್ಲವೂ ಖಾಲಿ ಖಾಲಿ ಇವೆ. ಕಂದಾಯ ಇಲಾಖೆಗೆ ಸಿಬಂದಿ ಶಕ್ತಿ ತುಂಬದಿದ್ದರೆ ಜನರ ಪರದಾಟಕ್ಕೆ ಮುಕ್ತಿ ಸಿಗಲಾರದು ಅನ್ನುತ್ತಿದೆ ಚಿತ್ರಣ.
ತಾಲ್ಲೂಕು ಪಂಚಾಯತ್ ಕಚೇರಿ
ಮಂಜೂರಾತಿ ಹುದ್ದೆ : 25
ಖಾಲಿ ಇರುವ ಹುದ್ದೆ : 21
ಕೊರತೆ ಪ್ರಮಾಣ : 84 ಶೇ ಖಾಲಿ ಇರುವ ಪ್ರಮುಖ ಹುದ್ದೆಗಳು:ಯೋಜನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು
ಮುಖ್ಯಾಂಶ: ಗ್ರಾ.ಪಂ.ಗೆ ಸಂಬಂಧಿಸಿದ ಬಹುತೇಕ ನಿರ್ದೇಶನಗಳು ಇಲ್ಲಿಂದಲೇ ಹೋಗುವುದು. ಒಂದರ್ಥದಲ್ಲಿ ಗ್ರಾ.ಪಂ.ಕಾರ್ಯವೈಖರಿ ನಿರ್ಧಾರವಾಗುವ ಕೇಂದ್ರ. ತಾಲೂಕು ಯೋಜನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರು (ಗ್ರಾ.ಉ), ಸಹಾಯಕ ನಿರ್ದೇಶಕರು(ಪಂ.ರಾ.),ವ್ಯವಸ್ಥಾಪಕ, ಕಿರಿಯ ಎಂಜಿನಿಯರ್, ಎಫ್ಡಿಎ, ಪ್ರಗತಿ ಸಹಾಯಕರು, ಶೀಘ್ರ ಲಿಪಿಗಾರರು, ಎಸ್ಡಿಎ, ವಾಹನ ಚಾಲಕ ಹುದ್ದೆಗಳಲ್ಲಿ ಮಂಜೂರಾತಿಯ ಎಲ್ಲ ಹುದ್ದೆಗಳು ಖಾಲಿ ಇವೆ.
ನಗರಸಭೆ
ಮಂಜೂರಾತಿ ಹುದ್ದೆ: 238
ಖಾಲಿ ಇರುವ ಹುದ್ದೆ: 178
ಕೊರತೆ ಪ್ರಮಾಣ: 74.78 ಶೇ ಖಾಲಿ ಇರುವ ಪ್ರಮುಖ ಹುದ್ದೆಗಳು: ಗ್ರೇಡ್ ಸಿ, ಗ್ರೇಡ್ ಡಿ ವಿಭಾಗದಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಪುತ್ತೂರು ನಗರ ಜಿಲ್ಲಾಕೇಂದ್ರದ ನಿರೀಕ್ಷೆಯಲ್ಲಿ ಇರುವ ಪ್ರದೇಶ. ಕಳೆದ ಹತ್ತು ವರ್ಷಗಳಿಂದ ಶೇ.80ರಷ್ಟು ಸಿಬಂದಿ ಕೊರತೆ ಇಲ್ಲಿದೆ. ಗರಿಷ್ಠ ಹುದ್ದೆಗೆ ಕನಿಷ್ಠ ಸಿಬಂದಿ ಎನ್ನುವ ಸ್ಥಿತಿ ಇಲ್ಲಿನದು. ಸಮುದಾಯ ಸಂಘಟನಾ ಅಧಿಕಾರಿ, ಸಮುದಾಯ ಸಂಘಟಕರು, ಎಫ್ಡಿಎ ಈ ಎಲ್ಲ ಹುದ್ದೆಗಳು ಖಾಲಿ ಇವೆ. ಆರೋಗ್ಯ ನಿರೀಕ್ಷಕರ ಪೈಕಿ 4 ಹುದ್ದೆಗಳಿಗೆ ಸಿಬಂದಿ ಇಲ್ಲ. ಸಹಾಯಕ ಕಾರ್ಯಪಾಲಕ ಅಭಿಯಂತರು, ಕಿರಿಯ ಅಭಿಯಂತರು, ಕಚೇರಿ ವ್ಯವಸ್ಥಾಪಕ ಹೀಗೆ ನಾನಾ ಹುದ್ದೆಗಳು ಖಾಲಿ.
ಸ.ತೋಟಗಾರಿಕಾ ನಿರ್ದೇಶಕರ ಕಚೇರಿ
ಮಂಜೂರಾತಿ ಹುದ್ದೆ :12
ಖಾಲಿ ಇರುವ ಹುದ್ದೆ :7
ಕೊರತೆ ಪ್ರಮಾಣ :58.33 ಶೇ. ಖಾಲಿ ಇರುವ ಪ್ರಮುಖ ಹುದ್ದೆಗಳು: 3 ಸಹಾಯಕ ತೋಟಗಾರಿಕೆ ಹುದ್ದೆ, 3 ತೋಟಗಾ ರಿಕಾ ಸಹಾಯಕ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಅಡಿಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಪ್ರಕೃತಿ ವಿಕೋಪದ ವೇಳೆ ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗ್ರಾಮ ಸಂಚಾರಕ್ಕೆ ಸಿಬಂದಿಯೇ ಇಲ್ಲ. ಎಲ್ಲ ಹೊಣೆಗಾರಿಕೆ ಹಿರಿಯ ತೋಟಗಾರಿಕೆ ನಿರ್ದೇಶಕರ ಹೆಗಲ ಮೇಲಿದೆ. ಆದರೆ ಶೇ.90 ರಷ್ಟು ಅಡಿಕೆ ಆಧಾರಿತ ಕೃಷಿ ಭೂಮಿಯ ಕಷ್ಟ ನಷ್ಟ ಆಲಿಸಲು ಒಬ್ಬ ಅಧಿಕಾರಿಯಿಂದ ಸಾಧ್ಯವೇ ಇಲ್ಲ. ಇನ್ನೂ ಕಚೇರಿಗೆ ಸಂಬಂಧಿಸಿ ಮಂಜೂರಾಗಿರುವ ಓರ್ವ ಅಟೆಂಡರ್ ಹುದ್ದೆಯು ಖಾಲಿ ಇದೆ.
ತಾಲೂಕು ಆಸ್ಪತ್ರೆ
ಮಂಜೂರಾತಿ ಹುದ್ದೆ : 111
ಖಾಲಿ ಇರುವ ಹುದ್ದೆ : 61
ಕೊರತೆ ಪ್ರಮಾಣ : 54.95 ಶೇ ಖಾಲಿ ಇರುವ ಪ್ರಮುಖ ಹುದ್ದೆಗಳು: ಡಿ ಗ್ರೂಪ್ ಮಂಜೂರಾತಿ ಹುದ್ದೆ 41. ಇದರಲ್ಲಿ ಇರುವುದು 3. ಖಾಲಿ 38
ಮುಖ್ಯಾಂಶ: ಮೂರು ತಾಲೂಕಿನಿಂದ ಪುತ್ತೂರು ಸರಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯ ಸ್ವತ್ಛತೆ, ನಿರ್ವಹಣೆ, ಆಫೀಸ್ ಕೆಲಸಗಳು ಅತಿ ಹೆಚ್ಚು. ಆದರೆ ಅದನ್ನು ನಿರ್ವಹಿಸಲು ಡಿ ಗ್ರೂಪ್ ವಿಭಾಗದಲ್ಲಿ ಸಿಬಂದಿಗಳೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. 41 ಮಂಜೂರಾತಿ ಹುದ್ದೆಗಳಲ್ಲಿ ಲಭ್ಯ ಇರುವ 3 ಮಂದಿ ಈ ಜವಾಬ್ದಾರಿ ಹೊರಬೇಕು. ಇದು ಅತಿ ಆವಶ್ಯಕ ವಿಭಾಗ ಆಗಿರುವ ಕಾರಣ ತಾತ್ಕಾಲಿಕ ನೆಲೆಯಲ್ಲಿ ಸಿಬಂದಿ ನಿಯೋಜಿಸುವ ಬದಲು ಪೂರ್ಣಕಾಲಿಕ ಸಿಬಂದಿಗಳ ಅಗತ್ಯತೆ ಇಲ್ಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ
ಮಂಜೂರಾತಿ ಹುದ್ದೆ : 23
ಖಾಲಿ ಇರುವ ಹುದ್ದೆ : 11
ಕೊರತೆ ಪ್ರಮಾಣ : 47.82 ಶೇ. ಖಾಲಿ ಇರುವ ಪ್ರಮುಖ ಹುದ್ದೆಗಳು: ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ, ಶಿಕ್ಷಣ ಸಂಯೋಜಕ ಹುದ್ದೆಗಳು ಶೂನ್ಯ.
ಮುಖ್ಯಾಂಶ: ತಾಲೂಕು ಕ್ರೀಡಾಕೂಟ ಆಯೋಜನೆಯಂತಹ ಪ್ರಮುಖ ಜವಾಬ್ದಾರಿ ಈ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಗೆ ಇದೆ. ಇನ್ನೂ ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕ ಎರಡೂ ಹುದ್ದೆಗಳು ಖಾಲಿ ಇವೆ. ವಲಯ ವ್ಯಾಪ್ತಿಯ ಶಾಲೆಗಳಲ್ಲಿನ ಪಠ್ಯ, ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿ ಇವರ ಮೇಲಿದ್ದರೂ ಸಿಬಂದಿ ನೇಮಕ ಆಗಿಲ್ಲ. ಇನ್ನೂ ಎಫ್ಡಿಎ-2, ಎಸ್ಡಿಎ-2, ಡಾಟಾ ಎಂಟ್ರಿ ಆಪರೇಟರ್-1, ವಾಹನ ಚಾಲಕ-1, ಡಿಗ್ರೂಪ್-2 ಹುದ್ದೆ ಖಾಲಿ ಇವೆ. ಮುಖ್ಯವಾಗಿ ಬಿಇಓ ಅವರಿಗೆ ವಾಹನವೇ ಇಲ್ಲ. -ಕಿರಣ್ ಪ್ರಸಾದ್ ಕುಂಡಡ್ಕ