ಮಣಿಪಾಲ: ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅವರ ಮುಂದಾಳತ್ವದಲ್ಲಿ ಮಣಿಪಾಲದ ನೆಹರು ನಗರದಲ್ಲಿ ಕೊರಗ ಕುಟುಂಬದವರಿಗೆ ನಿರ್ಮಿಸಿರುವ ಮನೆ “ದೀನ್‌ದಯಾಳ್ ನಿವಾಸ’ವನ್ನು ಕುಟುಂಬದ ಸದಸ್ಯರಿಗೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು.
ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಿಗೆ ರಾಜಕಾರಣದ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ. ಕೇವಲ ರಾಜಕಾರಣ ಮಾಡದೇ ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಗರ ಬಿಜೆಪಿ ಕಾರ್ಯಕರ್ತರು, ಮುಖಂಡರು ಮೇಲ್ಪಂಕ್ತಿಯಾಗಿದ್ದಾರೆ ಎಂದು ನಳಿನ್ ಮೆಚ್ಚುಗೆ ಸೂಚಿಸಿದರು.
ನಮ್ಮ ವಿಚಾರ ಶ್ರೇಷ್ಠ ಮತ್ತು ಸ್ಪಷ್ಟವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗಬೇಕು ಎಂಬ ದೀನ್‌ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆ ವಿಶಿಷ್ಟವಾದದ್ದು ಮತ್ತು ಸರಕಾರದ ಅದನ್ನು ಮಾಡಬೇಕು. ಕೇಂದ್ರ ಸರಕಾರ ಈಗಾಗಲೇ 6 ಕೋಟಿ ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಿದೆ. ಡೀಮ್ಡ್ ಫಾರೆಸ್ಟ್ ಸಹಿತ ಕೆಲವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿರಬಹುದು. ಆದರೆ 70 ವರ್ಷ ಗರಿಬಿ ಹಠಾವೋ ಎಂದು ಘೋಷಣೆ ಕೂಗಿದವರಿಂದ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ನಗರಸಭೆ ಸದಸ್ಯೆ ವಿಜಯ ಲಕ್ಷ್ಮೀ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ ಬಾಬು, ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ ನಾಯ್ಕ, ಎಸ್ಸಿ ಮೋರ್ಚಾ ನಗರ ಅಧ್ಯಕ್ಷ ಕಿರಣ್ ಕುಮಾರ್, ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ವಿ. ನಾಯ್ಕ ಮೊದಲಾದವರು ಇದ್ದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿದರು.
ಹೊಸ ಮನೆಯಲ್ಲಿ ಉಪಹಾರ
ಉಡುಪಿ ನಗರ ಬಿಜೆಪಿಯಿಂದ ಕೊರಗ ಕುಟುಂಬಕ್ಕೆ ನಿರ್ಮಿಸಿಕೊಟ್ಟಿರುವ ದೀನ್‌ದಯಾಳ್ ನಿವಾಸದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತವಾಗಿ ಬಿಜೆಪಿ ಮುಖಂಡರು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಉಪಾಹಾರ ಸವಿದರು.