Advertisement

ನಿರಾಳವಾಗುತ್ತಿದೆ ಉಡುಪಿ; ಲಾಕ್‌ಡೌನ್‌ನ ಒಂದು ತಿಂಗಳಲ್ಲಿ ಕೋವಿಡ್-19 ಮುಕ್ತ

10:02 PM Apr 24, 2020 | Sriram |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಕೋವಿಡ್-19 ಪಾಸಿಟಿವ್‌ ಪ್ರಕರಣಗಳಿಲ್ಲ. ಈ ಹಿಂದೆ ಇದ್ದ ಜಿಲ್ಲೆಯ ಮೂರು ಪ್ರಕರಣಗಳು ಗುಣಮುಖವಾಗಿದ್ದು ರೋಗಿಗಳು ಆಸ್ಪತ್ರೆಯಿಂದ ಮನೆಗೆ ಸೇರಿದ್ದಾರೆ. ಎ.24ರಂದು ಭಟ್ಕಳ ಮೂಲದ ಗರ್ಭಿಣಿ ಮಹಿಳೆ ಗುಣಮುಖರಾಗಿ ಊರು ಸೇರಿದ್ದಾರೆ. ಆ ಮೂಲಕ ಸದ್ಯದ ಮಟ್ಟಿಗೆ ಉಡುಪಿ ಜಿಲ್ಲೆ ನಿರಾಳವಾಗಿದೆ. ವಿಶೇಷ ಎಂದರೆ ಉಡುಪಿ ಜಿಲ್ಲೆಯಲ್ಲಿ ಮೊದಲ ಕೋವಿಡ್-19 ಪಾಸಿಟಿವ್‌ ಪ್ರಕರಣ ಪತ್ತೆಯಾ ಗಿದ್ದು, ಒಂದು ತಿಂಗಳ ಹಿಂದೆ, ಅಂದರೆ ಮಾ. 25ರಂದು. ಈಗ ಒಂದು ತಿಂಗಳ ಬಳಿಕ ಕೋವಿಡ್-19 ಮುಕ್ತದತ್ತ ಹೆಜ್ಜೆ ಇಟ್ಟಿದೆ.

Advertisement

ಮುಂದಿನ ಒಂದು ವಾರದಲ್ಲಿ ಯಾವುದೇ ಪ್ರಕರಣಗಳು ಕಂಡುಬಾರದಿದ್ದರೆ ಉಡುಪಿ ಜಿಲ್ಲೆಯನ್ನು ಹಸಿರುವಲಯವನ್ನಾಗಿ ಘೋಷಣೆ ಮಾಡಬಹುದು ಎಂದು ಎ.20ರಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ತಿಳಿಸಿದ್ದರು. ಅಂದುಕೊಂಡಂತೆ ನಡೆದರೆ ಎ.26 ಅಥವಾ 27ಕ್ಕೆ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸುವ ಸಾಧ್ಯತೆ ಇವೆ.

ಜಿಲ್ಲೆಯ ಈವರೆಗಿನ ಸ್ಥಿತಿ
ಜಿಲ್ಲೆಯಲ್ಲಿ ಈವರೆಗೆ 3238 ಮಂದಿ ರೋಗ ತಪಾಸಣೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 1929 ಮಂದಿ 28 ದಿನಗಳ ಕ್ವಾರಂಟೈನ್‌, 2,512 ಮಂದಿ 14 ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣ ಗೊಳಿಸಿದ್ದಾರೆ. ಪ್ರಸ್ತುತ 50 ಮಂದಿ ಐಸೋಲೇಶನ್‌ ವಾರ್ಡ್‌ನಲ್ಲಿ ನಿಗಾದಲ್ಲಿ ದ್ದಾರೆ. 273 ಮಂದಿ ಈಗಾಗಲೇ ಐಸೋಲೇಶನ್‌ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ. 1024 ಮಂದಿ ರೋಗಿಗಳ ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 947 ವರದಿಗಳು ನೆಗೆಟಿವ್‌ ಬಂದಿದೆ. 74 ಮಾದರಿಗಳ ವರದಿ ಬರಲು ಬಾಕಿಯಿದೆ.

ನಿಯಂತ್ರಣ ರೂವಾರಿಗಳು
ಜಿಲ್ಲೆಯಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಸಂತಸದ ಸಂಗತಿಯೆಂದರೆ ಎಲ್ಲರೂ ಗುಣಮುಖ ರಾಗಿರುವುದು. ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಜಿಲ್ಲಾಡಳಿತ, ವೈದ್ಯಕೀಯ ಸಿಬಂದಿ, ಆಶಾ ಕಾರ್ಯಕರ್ತರು, ಪೊಲೀಸ್‌ ಇಲಾಖೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮ ಕಾರಣವಾಗಿವೆ. ಮಾ.25ಕ್ಕೆ ಕೇಂದ್ರ ಸರಕಾರ ಲಾಕ್‌ಡೌನ್‌ ಘೋಷಣೆ ಮಾಡಿದಾಗ ಜಿಲ್ಲೆಯಲ್ಲಿ ಒಂದು ಪ್ರಕರಣವಷ್ಟೇ ಇತ್ತು. ಅನಂತರ ಕ್ರಮವಾಗಿ ಮಾ.26, 27ರಂದು ಪ್ರಕರಣ ಪತ್ತೆಯಾದ ಅನಂತರ ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಲಾಕ್‌ಡೌನ್‌ ಇದ್ದರೂ ಜನರು ಓಡಾಡುತ್ತಲೇ ಇದ್ದರು. ಬಳಿಕ ಅಗತ್ಯವಸ್ತುಗಳ ಖರೀದಿಗೆ ನಿರ್ದಿಷ್ಟ ಸಮಯ ನಿಗದಿ, ಸಾಮಾಜಿಕ ಅಂತರ, ಗಡಿಗಳಲ್ಲಿ ಬಿಗಿ ಭದ್ರತೆ, ಅನ್ಯ ಜಿಲ್ಲೆಗಳಿಂದ ಆಗಮಿಸುವವರಿಗೆ ಕಡಿವಾಣ ದಿಂದಾಗಿ ಇಂದು ಉಡುಪಿ ಜಿಲ್ಲೆ ಕೊರೊನಾ ಪ್ರಕರಣದಿಂದ ಮುಕ್ತವಾಗಿದೆ.

ಮುಂದೇನು?
ಸದ್ಯಕ್ಕೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮಾವಳಿ ತುಸು ಸಡಿಲಗೊಳಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿ ಎಂದಿ ನಂತೆ ನಿರ್ದಿಷ್ಟ ಅವಧಿಯಲ್ಲಿ ನಡೆಯುತ್ತಿದೆ. ಉಳಿದಂತೆ ಆಸ್ಪತ್ರೆ,ನರ್ಸಿಂಗ್‌ ಹೋಮ್‌,ಕ್ಲಿನಿಕ್‌,ಪಶು ಆಸ್ಪತ್ರೆ, ಆ್ಯಂಬುಲೆನ್ಸ್‌,ಕೃಷಿ ಚಟುವಟಿಕೆಗಳು,ಎಪಿಎಂಸಿಗಳು, ಕೃಷಿ ಉಪಕರಣಗಳ ಮಾರಾಟ,ಹೈನುಗಾರಿಕೆ, ಮೀನುಗಾರಿಕೆ, ಬ್ಯಾಂಕ್‌, ಎಟಿಎಂ, ಸೆಕ್ಯುರಿಟಿ ಏಜೆನ್ಸಿ ,ಸೆಬಿ,ವಿಮಾ ಕಂಪೆನಿ, ಅಂಗನವಾಡಿ ಕೇಂದ್ರಗಳು,ಆನ್‌ಲೈನ್‌ ಶಿಕ್ಷಣ, ನರೇಗಾ, ಡಿಟಿಎಚ್‌, ಕೇಬಲ್‌ ಸೇವೆ, ಗ್ರಾ.ಪಂ. ಮಟ್ಟದಲ್ಲಿ ಸರಕಾರ ಅನುಮತಿ ನೀಡಿರುವ ಸೇವಾ ವಲಯ, ಶೈತ್ಯ ದಾಸ್ತಾನು,ಕಿರಾಣಿ,ಮಾಂಸದ ಅಂಗಡಿ,ಕೊರಿ ಯರ್‌,ಅಂಚೆ, ಇ ಕಾಮರ್ಸ್‌,ರಸ್ತೆ,ಕಟ್ಟಡ ನಿರ್ಮಾಣ ಸಹಿತ ಕೆಲವೊಂದಕ್ಕಷ್ಟೆ ನಿರ್ದಿಷ್ಟ ಸಮಯದಲ್ಲಿ ವಿನಾಯಿತಿ ಕಲ್ಪಿಸಲಾಗಿದೆ.

Advertisement

ಗಂಭೀರತೆ ಅಗತ್ಯ
ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಗುಣಮುಖವಾಗಿದೆ ಎಂದು ಜನರು ಅನಾವಶ್ಯಕವಾಗಿ ಓಡಾಡುವಂತಿಲ್ಲ. ಒಂದು ವೇಳೆ ಪುನಃ ಕೋವಿಡ್-19 ಕಾಣಿಸಿಕೊಳ್ಳುವ ಸಂದರ್ಭ ಬಂದಲ್ಲಿ ಕೇಂದ್ರ ಸರಕಾರ ಸಡಿಲಿಕೆ ಹಿಂಪಡೆಯಲಿದೆ. ಆದ್ದರಿಂದ ಜನರು ಗಂಭೀರತೆಯನ್ನು ಅರಿತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕೆಲಸ ನಿರ್ವಹಿಸಬೇಕಿದೆ.

ಅಂಗಡಿಗಳನ್ನು ತೆರೆಯುವಾಗ ಜನಸಂದಣಿ ತಪ್ಪಿಸಲು ವಿವಿಧ ವ್ಯವಹಾರ ಗಳಿಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಚಿಂತನೆಯನ್ನೂ ಜಿಲ್ಲಾಡಳಿತ ಮಾಡುತ್ತಿದೆ.

ಹೊರ ಜಿಲ್ಲೆಗಳಿಂದ ಯಾರೂ ಬರುವಂತಿಲ್ಲ
ಮೇ ತಿಂಗಳ ಅನಂತರವೂ ಹೊರ ಜಿಲ್ಲೆಗಳಿಂದ ಯಾರೂ ಈ ಜಿಲ್ಲೆಯೊಳಗೆ ಬರುವಂತಿಲ್ಲ. ಯಾರು ಎಷ್ಟೇ ಒತ್ತಡ ಹೇರಿದರೂ ಬಿಡುವಂತಿಲ್ಲ. ವೈದ್ಯಕೀಯ ತುರ್ತು ಅಗತ್ಯಗಳಿದ್ದರೆ ಮಾತ್ರ ಪರೀಕ್ಷಿಸಿ ಬಿಡಬೇಕು ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರೂ ತಿಳಿಸಿದ್ದಾರೆ. ರಾಜ್ಯದ 11 ಗ್ರೀನ್‌ ಝೋನ್‌ ಜಿಲ್ಲೆಗಳಿಗೆ ಈಗಾಗಲೇ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಉಡುಪಿ ಜಿಲ್ಲೆ ಗ್ರೀನ್‌ ಝೋನ್‌ ಆದ ಮೇಲೆ ಕೇಂದ್ರದ ಮಾರ್ಗಸೂಚಿಯಂತೆ ಮುಂದೆ ಕೆಲವು ಸಡಿಲಿಕೆ ಮಾಡಲಾಗುತ್ತದೆ.

ಸದ್ಯದಲ್ಲೇ ಹಸಿರು ವಲಯ
ಸದ್ಯದಲ್ಲೆ ಉಡುಪಿ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗುವುದು. ಗ್ರಾಮೀಣ ಕಾರ್ಖಾನೆಗಳು ಸಹಿತ ಕೆಲವೊಂದಕ್ಕೆ ಇದರಿಂದ ವಿನಾಯಿತಿ ಸಿಗಲಿದೆ. ಜಿಲ್ಲೆಯ ಹೊರ ಪ್ರವೇಶ ಹಾಗೂ ಜಿಲ್ಲೆಯೊಳಗೆ ವಿನಾ ಕಾರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತುರ್ತು ಕೆಲಸಕ್ಕೆ ತೆರಳುವವರು ಜಿಲ್ಲಾಡಳಿತದ ಅನುಮತಿ ಪಡೆದರೆ ಅಗತ್ಯವಿದ್ದರೆ ಮಾತ್ರ ಪಾಸ್‌ಗಳನ್ನು ಒದಗಿಸಲಾಗುವುದು. ಹೊರಜಿಲ್ಲೆಯಿಂದ ಬರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.
-ಜಿ.ಜಗದೀಶ್‌,ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next