Advertisement

Udupi: ಅಪರಿಚಿತರಿಗೆ ಮನೆ ಬಾಡಿಗೆ ಕೊಡುವಾಗ ಇರಲಿ ಎಚ್ಚರ

12:04 AM Oct 14, 2024 | Team Udayavani |

ಉಡುಪಿ: ಕ್ಷಿಪ್ರ ಕಾರ್ಯಚರಣೆಯೊಂದರಲ್ಲಿ ಮಲ್ಪೆ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿದ್ದ ಬಾಂಗ್ಲಾ ದೇಶದ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಕಾರ್ಮಿಕರಿಗೆ ಇಷ್ಟು ವರ್ಷ ಆಶ್ರಯ ನೀಡಿದ ಮನೆ ಮಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಪೂರ್ವಾಪರ ತಿಳಿಯದೇ ಬಾಡಿಗೆಗೆ ಮನೆ ನೀಡಿದ ಪರಿಣಾಮ ಇಂದು ಆ ಮನೆಯ ಮಾಲಕ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕಾಯಿತು. ಇಂಥದ್ದೇ ಘಟನೆ ಮುಂದೆಯೂ ನಡೆಯಬಹುದು. ಈಗಿಂದಲೇ ಎಚ್ಚರ ವಹಿಸುವುದು ಅತ್ಯಾವಶ್ಯಕ.

ಉಡುಪಿಗೆ ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಬೀದರ್‌, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಯಾದಗಿರಿ ಮೊದಲಾದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬರುತ್ತಾರೆ. ಇವರು ನಗರ ಪ್ರದೇಶದ ಯಾವುದೋ ಒಂದು ಭಾಗದಲ್ಲಿ ಗುಡಿಸಲು ಅಥವಾ ತಮ್ಮದೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಬಾಡಿಗೆ ಮನೆಯಲ್ಲಿ ಇರುತ್ತಾರೆ. ನಮ್ಮ ರಾಜ್ಯದವರೇ ಆಗಿರುವುದರಿಂದ ಕನ್ನಡ ಮಾತಾಡುತ್ತಾರೆ. ಹೀಗಾಗಿ ಬಾಡಿಗೆ ನೀಡಲು ಯಾವುದೇ ಸಂಶಯ, ಗೊಂದಲ ಇರುವುದಿಲ್ಲ. ಆದರೂ ಅವರಿಂದ ನಿರ್ದಿಷ್ಟ ದಾಖಲೆಗಳನ್ನು ಪಡೆಯುವುದು ಉತ್ತಮ.

ಇನ್ನೂ ಹೊರ ರಾಜ್ಯದವರ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಕೂಲಿ ಕಾರ್ಮಿಕರು ಅಥವಾ ಯಾವುದೇ ಉದ್ಯೋಗ ಅರಸಿ ಬಂದಿದ್ದರೂ ಅವರ ಆಧಾರ್‌ ಕಾರ್ಡನ್ನು ಮೊದಲು ಪರಿಶೀಲಿಸಬೇಕು. ಇದರ ಜತೆಗೆ ಎಲ್ಲಿ ಉದ್ಯೋಗ ಮಾಡುವುದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಧಾರ್‌ ಕಾರ್ಡ್‌ ಸಹಿತ ದಾಖಲೆಗಳಲ್ಲಿ ಯಾವುದೇ ಸಂಶಯ ಬಂದರೆ ತತ್‌ಕ್ಷಣವೇ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಬೇಕು. ಬಾಡಿಗೆ ಹೆಚ್ಚು ಸಿಗಬಹುದು ಎಂಬ ಒಂದೇ ಕಾರಣಕ್ಕೆ ಎಚ್ಚರ ತಪ್ಪಿದರೆ ಮುಂದೆ ಅಪಾಯ ಎದುರಾಗಬಹುದು.

ಬಾಂಗ್ಲಾ, ಶ್ರೀಲಂಕಾ ಮೊದಲಾದ ದೇಶದ ಅಕ್ರಮ ವಲಸಿಗರು ಉಡುಪಿಯಲ್ಲೂ ಇರುವ ಸಾಧ್ಯತೆ ಹೆಚ್ಚಿದೆ. ಯಾವ ಉದ್ದೇಶಕ್ಕೆ ಬರುತ್ತಾರೆ ಎಂಬುದೂ ತಿಳಿಯುವುದಿಲ್ಲ. ಹೀಗಾಗಿ ವಿದೇಶದ ಪ್ರಜೆಗಳು ಅಥವಾ ವಿದೇಶದ ಪ್ರಜೆಯಾಗಿದ್ದು ನಕಲಿ ದಾಖಲೆ ಸೃಷ್ಟಿಸಿಕೊಂಡಿರುವವರು ಇದ್ದರೆ ಮನೆ ಬಾಡಿಗೆ ನೀಡುವಾಗ ಎಚ್ಚರ ವಹಿಸುವುದು ಅಗತ್ಯ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಶೆಡ್‌ ನೀಡುವಾಗಲೂ ಇರಲಿ ಎಚ್ಚರ
ಹೊರ ರಾಜ್ಯದ ಕಾರ್ಮಿಕರಿಗೆ ಅಲ್ಲಲ್ಲಿ ಶೆಡ್‌ ವ್ಯವಸ್ಥೆ ಮಾಡಿಕೊಡುವ ಪದ್ಧತಿ ಕೆಲವು ವರ್ಷಗಳಿಂದ ರೂಢಿಯಲ್ಲಿದೆ. ಯಾರು ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾರೋ ಅವರೇ ಆ ವ್ಯವಸ್ಥೆ ಮಾಡುತ್ತಾರೆ. ಆದರೆ ಶೆಡ್‌ ಮಾಲಕರು ಸ್ಥಳೀಯರೇ ಆಗಿರುತ್ತಾರೆ. ನಿರ್ಜನ ಪ್ರದೇಶ ಅಥವಾ ಜನವಸತಿ ಕಡಿಮೆ ಇರುವ ಪ್ರದೇಶ ಇತ್ಯಾದಿ ಕಡೆ ಶೆಡ್‌ ಇರುತ್ತದೆ. ಅಲ್ಲಿಗೆ ಯಾರು ಬಂದು ಹೋಗುತ್ತಾರೆ ಎನ್ನುವುದರ ನಿಗಾ ಮಾಲಕರು ಇಡಲೇ ಬೇಕಾಗುತ್ತದೆ.

ಸ್ಥಳೀಯ ಅಪರಿಚಿತರ ಬಗ್ಗೆ ಇರಲಿ ಎಚ್ಚರ
ಗ್ರಾಮೀಣ ಅಥವಾ ನಗರ ಭಾಗದಲ್ಲಿ ಅನೇಕ ವರ್ಷದಿಂದ ವಾಸವಿರುವವರಿಗೆ ತಮ್ಮ ಊರು ಅಥವಾ ಪರಿಸರಕ್ಕೆ ಯಾರೇ ಹೊಸಬರು ಬಂದರೂ ಕೆಲವೇ ದಿನದಲ್ಲಿ ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ಅಪರಿಚಿತರ ಚಲನವಲನಗಳ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯವಾಗಿ ಮಾಡಬೇಕಾಗುತ್ತದೆ ಎನ್ನುತ್ತಾರೆ ಪೊಲೀಸರು.

Advertisement

Udayavani is now on Telegram. Click here to join our channel and stay updated with the latest news.

Next