ಉಡುಪಿ: ಶನಿವಾರದಿಂದ ಐದು ದಿನಗಳ ಕಾಲ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಯೋಗಗುರು ಬಾಬಾ ರಾಮ್‌ದೇವ್ ನೇತೃತ್ವದಲ್ಲಿ ನಡೆಯುವ ಬೃಹತ್ ಯೋಗ ಶಿಬಿರಕ್ಕೆ ಉಡುಪಿ ಅಣಿಗೊಂಡಿದೆ.
ಶುಕ್ರವಾರ ರಾಮ್‌ದೇವ್ ಅವರನ್ನು ಬರಮಾಡಿಕೊಂಡ ಕರಾವಳಿ ಬೈಪಾಸ್‌ನಿಂದ ಕಲ್ಸಂಕ ಮಾರ್ಗ, ಪಾರ್ಕಿಂಗ್ ಪ್ರದೇಶಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ವಿವಿಧ ಕಡೆಗಳಲ್ಲಿ ರಾಮ್‌ದೇವ್ ಮತ್ತು ಪರ್ಯಾಯ ಶ್ರೀಪಲಿಮಾರು ಸ್ವಾಮೀಜಿಯವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ.
ಎರಡು ದಶಕಗಳಿಂದ ಜನರ ಬಾಯಲ್ಲಿ ಯೋಗವನ್ನು ಬ್ರಾಂಡ್ ಆಗಿ ಪರಿವರ್ತಿಸಿದ ರಾಮ್‌ದೇವ್ 2011ರಲ್ಲಿ ಉಡುಪಿಗೆ ಆಗಮಿಸಿ ಬೃಹತ್ ಯೋಗ ಶಿಬಿರವನ್ನು ನಡೆಸಿದ್ದರು. ಆಗ ಇರುವಂತ ಯೋಗ ವಾತಾವರಣ ಮಗದೊಮ್ಮೆ ಉಡುಪಿಯಲ್ಲಿ ಸೃಷ್ಟಿಯಾಗಿದೆ. ವಿಶೇಷವಾಗಿ ಆರೋಗ್ಯ ಕಾಳಜಿಯವರು ರಾಮ್‌ದೇವ್ ಅವರ ಸಂದೇಶವನ್ನು ನೇರವಾಗಿ ಆಲಿಸಲು ಕುತೂಹಲಿಗಳಾಗಿದ್ದಾರೆ. ಯೋಗಾಸನಗಳನ್ನು ಪ್ರದರ್ಶಿಸುತ್ತ ನಿರ್ದಿಷ್ಟ ಯೋಗಾಸನಗಳ ಪ್ರಯೋಜನಗಳನ್ನು ತಿಳಿಸುವ ಜತೆಗೆ ಇತರ ಸಂದೇಶಗಳನ್ನು ನೀಡುವುದು ರಾಮ್‌ದೇವ್ ವೈಶಿಷ್ಟ್ಯ. 2011ರಲ್ಲಿ ಹೀಗೆಯೇ ಅವರು ಮಾಡಿದ್ದರು. ಆಗ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದಿತ್ತು.
ಪಾರ್ಕಿಂಗ್ ಪ್ರದೇಶದಲ್ಲಿ ಸಾವಿರಾರು ಜನರು ಕುಳಿತುಕೊಂಡು ಯೋಗಾಸನಗಳನ್ನು ಮಾಡುವಂತಾಗಲು ಮಧ್ಯಭಾಗದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಹೊರಗಿನಿಂದ ಬರುವ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಪ್ರದೇಶದ ಬಳಿಯ ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿಬಿರದ ಸಮಯ ಹೊರತುಪಡಿಸಿ ಶಿಬಿರ ಡೇರೆಯ ಸುತ್ತ ವಾಹನ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಗುಜರಾತ್‌ನಿಂದ ಆರು ಲಾರಿಗಳಲ್ಲಿ ಬಂದ ಪರಿಕರಗಳಿಂದ ವೇದಿಕೆ ಸಿದ್ಧತೆ ಕೆಲಸ ಶುಕ್ರವಾರ ರಾತ್ರಿವರೆಗೂ ನಡೆಯುತ್ತಿತ್ತು. ಇದೆಲ್ಲ ಕೆಲಸಗಳನ್ನೂ ಪತಂಜಲಿ ಸಮಿತಿಯವರು ನೇರವಾಗಿ ನಿರ್ವಹಿಸುತ್ತಿದ್ದಾರೆ. ಹರಿದ್ವಾರ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಬಂದ ಪತಂಜಲಿ ಸಮಿತಿಯ ಕಾರ್ಯಕರ್ತರು ಶಿಬಿರ ಸ್ಥಾನದ ಪಕ್ಕದಲ್ಲಿರುವ ಪಲಿಮಾರು ಮಠದ ರಾಮಧಾಮ ಅತಿಥಿಗೃಹದಲ್ಲಿದ್ದು ನಡೆಯುತ್ತಿರುವ ಕೆಲಸಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.