ಉಡುಪಿ: ಉಡುಪಿಯಲ್ಲಿ ಪ್ರಸ್ತುತ ಬಂಡವಾಳ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಉದ್ಯಮ ಆರಂಭಿಸುತ್ತಿರುವುದರಿಂದ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ದೇಶದ ಪ್ರತಿಷ್ಠಿತ 33 ಕಂಪೆನಿಗಳ ವೈವಿಧ್ಯಮಯ ವಾಹನಗಳನ್ನು ಉಡುಪಿಯ ಜನತೆಗೆ ಪರಿಚಯಿಸುವ ಆಟೋ ಎಕ್ಸ್‌ಪೋ ಯಶಸ್ವಿ ಕಾರ್ಯಕ್ರಮ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದರು.
ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಆಶ್ರಯದಲ್ಲಿ ಮಣಿಪಾಲ ಆಟೋ ಕ್ಲಬ್ ಸಹಕಾರದಲ್ಲಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಲಾದ “ಉಡುಪಿ ಆಟೋ ಎಕ್ಸ್‌ಪೋ-2023′ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಹೊಟೇಲ್ ಉದ್ಯಮ, ಮೀನುಗಾರಿಕೆ ಮೂಲಕ ವಿಶ್ವದ ಜನರ ಮನಸೂರೆಗೊಂಡ ಉಡುಪಿಯು ಜಿಲ್ಲೆಯಾಗಿ 26 ವರ್ಷಗಳಾಗಿದೆ. ದೇಶದಲ್ಲಿರುವ ಎಲ್ಲ ಕಂಪೆನಿಗಳ ವಾಹನಗಳು ಉಡುಪಿಯ ಜನರಲ್ಲಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮದ ಮೂಲಕ ಜನತೆಗೆ ಇನ್ನಷ್ಟು ವಾಹನಗಳ ಪರಿಚಯ ಆಗುವುದರೊಂದಿಗೆ ಜನರ ಬೇಡಿಕೆಗಳು ಈಡೇರಲಿ ಎಂದು ಆಶಿಸಿದರು.
ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅವರು, ಆಟೋಮೊಬೈಲ್ ಕ್ಷೇತ್ರಕ್ಕೆ ಎದುರಾಗುವ ಸವಾಲುಗಳನ್ನು ಪಟ್ಟಿ ಮಾಡಿ ರಾಜ್ಯ, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಹೋಗಲಾಡಿಸಲು ಒತ್ತಡ ತರಬೇಕಾಗಿದೆ. ಉಡುಪಿ ಜಿಲ್ಲೆಯಲ್ಲಿರುವ ಸುಮಾರು 12 ಲಕ್ಷ ಜನರಿಗೆ 4 ಲಕ್ಷ ವಾಹನಗಳು ಇರುವುದು ದಾಖಲೆಯಾಗಿದೆ. ವಾಹನಗಳ ಕಂಪೆನಿಗಳು ಬಿಡಿಭಾಗಗಳನ್ನು ಡೀಲರ್‌ಗಳಿಗೆ ನೇರವಾಗಿ ವಿತರಿಸುತ್ತಾರೆ. ಆದರೆ ಆಟೋಮೊಬೈಲ್ ಅಂಗಡಿಗಳಿಗೆ ಲಭ್ಯವಾಗದೆ ಅವರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಕಾರ್ಯದರ್ಶಿ ಕಾಶಿನಾಥ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ ಪೈ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಮಣಿಪಾಲ ಆಟೋ ಕ್ಲಬ್‌ನ ಸ್ಥಾಪಕಾಧ್ಯಕ್ಷ ಡಾ| ನಿಶಾಂತ್ ಬಿ. ಭಟ್, ಅಧ್ಯಕ್ಷ ಡಾ| ಅಫjಲ್ ಪಿ.ಎಂ., ಟಾಟಾ ಮೋಟಾರ್ನ ಕಸ್ಟಮರ್ ಸಪೋರ್ಟ್ ಗೌತಮ್ ಕಾಮತ್, ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಉಪಸ್ಥಿತರಿದ್ದರು.
ಡೆಂಟಾ ಕೇರ್‌ನ ಡಾ| ವಿಜಯೇಂದ್ರ ವಸಂತ್ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಾರ್ಯದರ್ಶಿ ಲಕ್ಷ್ಮೀಕಾಂತ ಬೆಸ್ಕೂರ್ ನಿರೂಪಿಸಿದರು. ಮಣಿಪಾಲ ಆಟೋ ಕ್ಲಬ್ ಬಗ್ಗೆ ಅತುಲ್ ಪ್ರಭು ಮಾಹಿತಿ ನೀಡಿದರು. ಜಿಲ್ಲಾ ಆಟೋಮೊಬೈಲ್ ಡೀಲರ್ ಅಸೋಸಿಯೇಶನ್ ಬಗ್ಗೆ ಸತೀಶ್‌ಎಂ. ಭಟ್ ಮಾಹಿತಿ ನೀಡಿ, ವಂದಿಸಿದರು.