Advertisement

ಲಾಕ್‌ ಡೌನ್‌ ಹಿನ್ನೆಲೆ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕರು

03:44 PM Apr 15, 2020 | sudhir |

ಉಡುಪಿ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಟೋ ಚಲಾಯಿಸಿ ದುಡಿಯುವ ವರ್ಗದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ಆಟೋ ಚಾಲಕರ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ.

Advertisement

ಉಡುಪಿ ನಗರ ವ್ಯಾಪ್ತಿಯಲ್ಲಿ 42 ಅಟೋ ರಿಕ್ಷಾ ನಿಲ್ದಾಣಗಳಿವೆ. 3,000ಕ್ಕೂ ಮಿಕ್ಕಿದ ಚಾಲಕ- ಮಾಲಕರಿದ್ದಾರೆ. ಇವುಗಳು ಸೇರಿ ಉಡುಪಿ ತಾಲೂಕಿನಾದ್ಯಂತ 150ಕ್ಕೂ ಅಧಿಕ ಸ್ಟಾಂಡ್‌ಗಳಲ್ಲಿ 6,000ಕ್ಕೂ ಮಿಕ್ಕಿದ ಚಾಲಕರು, ಜಿಲ್ಲೆಯಲ್ಲಿ 13,000ಕ್ಕೂ ಹೆಚ್ಚು ಆಟೋ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ನಿರ್ಬಂಧದಿಂದ ಬಾಡಿಗೆ ಇಲ್ಲದೆ ಎಲ್ಲರೂ ಸಮಸ್ಯೆಗೆ ಒಳಗಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಟೋ ಚಾಲಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಚಾಲಕರಿಗೆ ನೆರವು
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ರಿಕ್ಷಾ ಚಾಲಕರ ಸಂಘಗಳ ಒಕ್ಕೂಟ ಕಾರ್ಯಾ ಚರಿಸುತ್ತಿದೆ. ನಿಲ್ದಾಣಕ್ಕೆ ಒಂದರಂತೆ ಸಂಘಗಳು, ವಲಯವಾರು ಸಂಘಗಳು ಹೀಗೆ ವಿವಿಧೆಡೆಗಳಲ್ಲಿ ಹಲವು ಸಂಘ ಗಳಿವೆ. ವಿವಿಧೆಡೆ ಇರುವ ಚಾಲಕ- ಮಾಲಕರ ಸಂಘಗಳು ತಮ್ಮ ವ್ಯಾಪ್ತಿ ಯಲ್ಲಿರುವ ವೃತ್ತಿ ನಿರತ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ಮುಂದಾಗಿವೆ. ಆರ್ಥಿಕವಾಗಿ ಹಿಂದುಳಿದ ಚಾಲಕರ ಮನೆಗಳಿಗೆ ಅಕ್ಕಿ, ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸುತ್ತಿವೆ.

ಸಾಲದ ಕಂತು ಸದ್ಯ ದೂರ
ಸದ್ಯಕ್ಕೆ ಸರಕಾರ ಆಟೋ ಸಾಲದ ಕಂತು ಪಾವತಿಸಲು ಮೂರು ತಿಂಗಳು ಕಾಲಾವಕಾಶ ನೀಡಿದೆ. ಕಂತು ಅನಂತರ ಕಟ್ಟಬಹುದು ಎಂದು ಸರಕಾರ ಘೋಷಣೆ ಮಾಡಿದೆ.

ಮೀಸಲಿಟ್ಟ ಹಣ ನೆರವಾಗಲಿ
ಬಜೆಟ್‌ನಲ್ಲಿ ಸರಕಾರ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 40 ಕೋಟಿ ರೂ. ಹಣ ಮೀಸಲಿಟ್ಟಿತ್ತು. ಮೀಸಲಿಟ್ಟ ಹಣವನ್ನು ಈ ತುರ್ತು ಪರಿಸ್ಥಿತಿಯಲ್ಲಿ ಚಾಲಕರಿಗೆ ನೀಡಿದರೆ ಅವರ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ. ಇಲ್ಲವಾದಲ್ಲಿ ಸರಕಾರದ ಕಡೆಯಿಂದ ಚಾಲಕರಿಗೆ ಶೇ.4ರ ವಾರ್ಷಿಕ ಬಡ್ಡಿ ದರದಂತೆ 50,000 ರೂ. ಸಾಲವಾಗಿ ನೀಡಬೇಕು. ಈ ಹಣದಿಂದ ಚಾಲಕರು ಮನೆಗಳ ಬಾಡಿಗೆ ಮಕ್ಕಳ ವಿದ್ಯಾ ಭ್ಯಾಸ ನಿರ್ವಹಿಸಬಹುದು ಅನ್ನುವ ಅಭಿಪ್ರಾಯಗಳು ಚಾಲಕರಿಂದ ವ್ಯಕ್ತಗೊಂಡಿವೆ.

Advertisement

ಹೆಚ್ಚು ದಿನಗಳು ಆಟೋಗಳು ಸ್ಟಾರ್ಟ್‌ ಆಗದೆ ಇದ್ದರೆ ಆಟೋ ಕೆಟ್ಟು ಹೋಗುತ್ತವೆ. ಇದಕ್ಕೆ ಪ್ರತಿನಿತ್ಯ ಐದರಿಂದ ಹತ್ತು ನಿಮಿಷ ಕಾಲ ಆಟೋಗಳನ್ನು ಸ್ಟಾರ್ಟ್‌ ಮಾಡಿ ಇಡುವ ಅನಿವಾರ್ಯ ಇದೆ. ಇದಕ್ಕೂ ಹಣದ ಕೊರತೆ ಇದೆ ಅನ್ನುತ್ತಾರೆ ಚಾಲಕರು.

ನೆರವು ಅಗತ್ಯ
ನಿತ್ಯದ ಸಂಪಾದನೆಯಿಂದ ಜೀವನ ನಡೆಸುತ್ತಿದ್ದ ಆಟೋ ರಿಕ್ಷಾ ಚಾಲಕರಿಗೆ ನೆರವಿನ ಅಗತ್ಯವಿದೆ. ಆರ್ಥಿಕವಾಗಿ ಸಬಲರಲ್ಲದಿದ್ದರೂ ಎಪಿಎಲ್‌ ಕಾರ್ಡ್‌ ಇದೆ. ಇದರಿಂದ ರೇಶನ್‌ಗೂ ಹಣ ಬೇಕು. ಈಗ ಆಟೋ ಯೂನಿಯನ್‌ಗಳ ಸದಸ್ಯರೇ ಸಹೋದ್ಯೋಗಿಗಳ ನೆರವಿಗೆ ನಿಂತು ಕೈಲಾದಷ್ಟು ಸಹಾಯ ನೀಡಿ ನಿಭಾಯಿಸುತ್ತಿದ್ದೇವೆ.
-ಸುರೇಶ್‌ ಅಮೀನ್‌, ಕಾರ್ಯಾಧ್ಯಕ್ಷರು,
ಜಿಲ್ಲಾ ಆಟೋ ಚಾಲಕ ಮಾಲಕರ ಸಂಘಗಳ ಒಕ್ಕೂಟ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next