ಉಡುಪಿ: ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಕಾರ್ಯಯೋಜನೆ ಅಭಿನಂದನೀಯವಾಗಿದೆ.
ಆಹಾರಗಳ ನಿಯಮ, ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಕಠಿಣ ಆಚರಣೆಯನ್ನು ನಡೆಸುತ್ತಾ ಶ್ರೀ ಕೃಷ್ಣ ಮಂದಿರಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕಳೆದ ನಲವತ್ತು ವರ್ಷಗಳ ಸುದೀರ್ಘವಾದ ಆತ್ಮೀಯತೆ ನಮ್ಮಿಬ್ಬರಲ್ಲಿ ದೃಢವಾಗಿದೆ. ಅವರ ಪರ್ಯಾಯವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಹಾಗೂ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಎಂದು ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ರವಿಶಂಕರ ಗುರೂಜಿ ಅವರು ಹೇಳಿದರು.
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಮಂತ್ರಣದಂತೆ ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಶ್ರೀ ರವಿಶಂಕರ ಗುರೂಜಿ ಅವರಿಗೆ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀ ಮಠದ ವಿದ್ವಾಂಸರು, ಅಧಿಕಾರಿಗಳು ಪೂರ್ಣಕುಂಭ ಸ್ವಾಗತ ನೀಡಿದರು.
ದೇವರ ದರ್ಶನವನ್ನು ಮಾಡಿಸಿ ದೇವರ ಪ್ರಸಾದವನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ರವಿಶಂಕರ ಗುರೂಜಿ ಅವರಲ್ಲಿ ಶ್ರೀಕೃಷ್ಣನೇ ನಿಂತು ಅಮೋಘವಾದ ಕಾರ್ಯವನ್ನು ನಡೆಸುತ್ತಿದ್ದಾನೆ. ಅಪಾರ ಶಿಷ್ಯರನ್ನು ಹೊಂದಿರುವ ಶ್ರೀ ರವಿಶಂಕರ ಗುರೂಜಿ ಅವರು ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ನಮ್ಮ ಉಪಾಸ್ಯನಾದ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಿಸಲಿ ಎಂದು ಹಾರೈಸಿದರು.
ಚಂದ್ರಶಾಲೆಯಲ್ಲಿ ಶ್ರೀ ರವಿಶಂಕರ ಗುರೂಜಿಯವರು ಶ್ರೀ ಕೃಷ್ಣ ಗೋವಿಂದ ಭಜನೆ ಹಾಡಿದರು. ಶ್ರೀ ಮಠದ ಭಕ್ತರು ಉಡುಪಿಯಾ ಕಂಡೀರಾ ಮತ್ತು ಶ್ರೀ ಕೃಷ್ಣ ಕುರಿತ ಕೆಲವು ಗೀತೆಯನ್ನು ಹಾಡಿದರು. ಅನಂತರ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರೊಂದಿಗೆ ರವಿಶಂಕರ ಗುರೂಜಿಯವರು ಗೀತಾಮಂದಿರಕ್ಕೆ ಭೇಟಿ ನೀಡಿದರು.
ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಶ್ರೀಮಠದ ಪ್ರಮುಖರು ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು.