Advertisement
ಮೂಡುಬಿದಿರೆ ಪರಿಸರದಲ್ಲಿ ಶನಿವಾರ ರಾತ್ರಿ 7.15ರ ಸುಮಾರಿಗೆ ಗುಡುಗು, ಮಿಂಚು ಸಹಿತ ಸುಮಾರು ಅರ್ಧ ತಾಸು ಮಳೆ ಸುರಿಯಿತು. ಬಳಿಕ ತುಂತುರು ಮಳೆಯೊಂದಿಗೆ ಗುಡುಗು, ಮಿಂಚು ಮುಂದುವರಿದಿದ್ದು, ಸುಮಾರು ಒಂದೂವರೆ ತಾಸು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಳ್ತಂಗಡಿ: ಸತತ ಉತ್ತಮ ಮಳೆ ಬೆಳ್ತಂಗಡಿ ತಾಲೂಕಿನಾದ್ಯಂತ ಸಂಜೆ ವೇಳೆ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ತಾಲೂಕಿನೆ ಲ್ಲೆಡೆ ಮೂರು ದಿನಗಳಿಂದ ನಿರಂತರ ಸಂಜೆ ಮಳೆಯಾಗುತ್ತಿದ್ದು, ಬೇಸಗೆಯಿಂದ ತತ್ತರಿಸಿ ಹೋಗಿದ್ದ ಕೃಷಿಕರು ಕೊಂಚ ನಿರಾಳರಾಗಿದ್ದಾರೆ. ಹತ್ತು ದಿನಗಳ ಅವಧಿಯಲ್ಲಿ ಐದಾರು ಬಾರಿ ಗರಿಷ್ಠ ಮಳೆಯಾಗಿದ್ದು, ಶನಿವಾರ ಸಂಜೆ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕರಾಯ, ಕಲ್ಲೇರಿ, ಪಿಂಡಿವನ, ಗೇರುಕಟ್ಟೆ, ಮುಂಡಾಜೆ, ನಾವೂರು, ಕಾನರ್ಪ, ಕನ್ಯಾಡಿ, ನಾರಾವಿ, ಶಿರ್ಲಾಲು, ಚಾರ್ಮಾಡಿ, ದಿಡುಪೆ ಅಣಿಯೂರು, ಕಲ್ಮಂಜ, ಕಡಿರುದ್ಯಾವರ, ಗುರಿಪ್ಪಳ್ಳ, ಚಿಬಿದ್ರೆ, ಕೊಕ್ಕಡ, ಶಿಶಿಲ, ಶಿಬಾಜೆ, ಅರಸಿನಮಕ್ಕಿ ಸಹಿತ ವೇಣೂರು ಭಾಗದಲ್ಲಿ ಅಳದಂಗಡಿ, ಸೂಳಬೆಟ್ಟು, ನಾಲ್ಕೂರು ಫಂಡಿಜೆ, ಪಿಲ್ಯ, ಸುಲ್ಕೇರಿಯಲ್ಲಿ ಒಂದು ತಾಸಿಗೂ ಅಧಿಕ ಸಮಯ ಭಾರೀ ಮಳೆಯಾಗಿದೆ.
ಉಡುಪಿ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ವೇಳೆಗೆ ಗುಡುಗು- ಮಿಂಚು ಸಹಿತ ಗಾಳಿ ಮಳೆಯಾಗಿದೆ. ಮಣಿಪಾಲ ಪರಿಸರದಲ್ಲಿ ಮೋಡದ ವಾತಾವರಣವಿದ್ದು , ರಾತ್ರಿ 7 ಗಂಟೆಗೆ ಗುಡುಗು, ಮಿಂಚು ಜೋರಾಗಿತ್ತು. ಜತೆಗೆ ಉತ್ತಮ ಮಳೆ ಸುರಿದಿದೆ. ಉಡುಪಿ ನಗರ ಸುತ್ತಮುತ್ತ ಕೂಡ ಮಧ್ಯಾಹ್ನದಿಂದಲೇ ಮೋಡದ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರನೆ ಗಾಳಿ- ಮಿಂಚು ಸಹಿತ ಮಳೆ ಸುರಿಯಿತು. ಗುಡುಗು, ಮಿಂಚು ಆರ್ಭಟ ಜೋರಾಗಿತ್ತು. ಕಾರ್ಕಳ ಪರಿಸರದಲ್ಲಿ ಕೂಡ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗಿದೆ. ಇನ್ನು ಜಿಲ್ಲೆಯ ಹಲವೆಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಪಣಂಬೂರಿನಲ್ಲಿ 35.6 ಡಿ.ಸೆ. ಗರಿಷ್ಠ ತಾಪಮಾನ ಮತ್ತು 27.6 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೈಕೊಟ್ಟ ವಿದ್ಯುತ್: ಚೆಕ್‌ಪೋಸ್ಟ್ ಸಿಬಂದಿ ಪರದಾಟ
ಬೆಳ್ಮಣ್: ಶನಿವಾರ ಸಂಜೆ ಗಾಳಿ, ಸಿಡಿಲು ಸಹಿತ ಸುರಿದ ಭಾರೀ ಮಳೆಯ ಪರಿಣಾಮ ವಿದ್ಯುತ್ ಕೈ ಕೊಟ್ಟಿದ್ದು, ಬೆಳ್ಮಣ್, ಸಂಕಲಕರಿಯ, ಸಚ್ಚೇರಿಪೇಟೆಯಲ್ಲಿ ಚೆಕ್‌ಪೋಸ್ಟ್‌ನ ಸಿಬಂದಿ ಪರದಾಡುವಂತಾಗಿದೆ. ಇದರಿಂದ ಕೋವಿಡ್ ವಾರಿಯರ್ಸ್‌ಗೆ ಒಂದಿಷ್ಟು ಹಿನ್ನಡೆ ಉಂಟಾಗಿದೆ. ಸ್ಥಳೀಯರು ಚಾರ್ಜ್‌ಲೈಟ್‌ಗಳನ್ನು ನೀಡಿದ್ದರಿಂದ ರಾತ್ರಿ ಬೆಳಗಾಗುವಂತಾಗಿದೆ.
Related Articles
ಜೋರು ಗಾಳಿ, ಸಿಡಿಲು, ಮಳೆಯ ನಡುವೆಯೂ ಎಲ್ಲ ಚೆಕ್‌ಪೋಸ್ಟ್‌ಗಳ ಸಿಬಂದಿ ಪ್ರತಿಯೊಂದು ವಾಹನವನ್ನು ಕೂಲಂಕಷವಾಗಿ ತನಿಖೆ ಮಾಡಿ ಬದ್ಧತೆ ಮರೆದಿದ್ದಾರೆ. ಆದ್ದರಿಂದ ಈ ಚೆಕ್‌ಪೋಸ್ಟ್ ಅನಿವಾರ್ಯ ಇನ್ನೂ ಇದ್ದು ಮುಂದಿನ ದಿನಗಳಲ್ಲಿ ಇನ್ನೂ ಮಳೆ, ಗಾಳಿ ಜೋರಾಗಿ ಬರುವ ಸಾಧ್ಯತೆಯಿದೆ, ಹಾಗಾಗಿ ಚೆಕ್‌ಪೋಸ್ಟ್‌ಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement